ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಿ.ಪಿ.ಶಶಿಧರ್, ಡಾ.ಜೆ.ಸೋಮಣ್ಣ, ಎಸ್.ಎನ್.ರಾಜೇಂದ್ರ ಇತರರಿದ್ದರು. 
ಕೊಡಗು

ಅಂಬೇಡ್ಕರ್ ಆದರ್ಶಗಳನ್ನು ಅನುಸರಿಸಿ

ಲಲಾಟಾಕ್ಷ ಎಸ್

ಕುಶಾಲನಗರ:

ಶಿಕ್ಷಣ ಮತ್ತು ನಿರಂತರ ಅಧ್ಯಯನವೇ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಯುಗಪ್ರವರ್ತಕರನ್ನಾಗಿ ರೂಪಿಸಿತು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕನ್ನಡ ಭಾರತೀ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಪುಸ್ತಕಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಓದುವ ಹವ್ಯಾಸ ಮತ್ತು ನಿರಂತರ ಕಲಿಕೆಯೇ ಅವರ ವ್ಯಕ್ತಿತ್ವದ ಶಕ್ತಿಯಾಗಿತ್ತು. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಬೇಕು ಎಂದರು.
ಬಾಳೆಲೆ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಮಾತನಾಡಿ, ಅಂಬೇಡ್ಕರ್ ಅವರು ಅದಮ್ಯ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ವಿಶ್ವದ ಶ್ರೇಷ್ಠ ಚಿಂತಕರಾಗಿ ಬೆಳೆದರು. ಅವರ ಜೀವನವು ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನ, ಶಿಸ್ತು ಮತ್ತು ಗುರಿನಿಷ್ಠೆಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಎನ್.ರಾಜೇಂದ್ರ, ಕನ್ನಡ ಜಾಗೃತಿ ಸಮಿತಿ ಸದಸ್ಯ ಲೋಕೇಶ್ ಸಾಗರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಾಂತಿ, ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಂದ್ರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಂಯೋಜಕ ಕುಮಾರ್ ಭಾಗವಹಿಸಿದ್ದರು. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕುರಿತ ಕವನ ವಾಚನ, ಪ್ರಬಂಧ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.