ರೋಶನಾರದಲ್ಲಿ ಕಾರ್ಯಪ್ಪ ಅವರ ಸಮಾಧಿ ಸ್ಥಳದಲ್ಲಿ ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ನಂದಾಕಾರ್ಯಪ್ಪ ಅವರು ಪುಪ್ಪನಮನ ಸಲ್ಲಿಸಿದರು. ನಳಿನಿ ಕಾರ್ಯಪ್ಪ, ಕೆ.ಎಸ್.ಸುಮಿತ್ರಾ ಇತರರಿದ್ದರು. 
ಕೊಡಗು

ರೋಶನಾರದಲ್ಲಿ ಭಾವಪೂರ್ಣ ಪುಪ್ಪ ನಮನ

ಪ್ರಮುಖ ಮುಖ್ಯಾಂಶಗಳು

  • ರೋಶನಾರದಲ್ಲಿ ಭಾವಪೂರ್ಣ ಪುಪ್ಪ ನಮನ
ಮಡಿಕೇರಿ: ಭಾರತೀಯ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ೧೨೭ನೇ ಜನ್ಮಜಯಂತಿಯನ್ನು ಮಡಿಕೇರಿಯ ರೋಶನಾರದಲ್ಲಿ ಪುಪ್ಪನಮನದ ಮೂಲಕ ಬಾವಪೂರ್ಣವಾಗಿ ಬುಧವಾರ ಆಚರಿಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ನೆಚ್ಚಿನ ಮನೆಯಾಗಿದ್ದ ನಗರದ ಹೊರವಲಯದಲ್ಲಿನ ರೋಶನಾರ ಬಳಿಯಲ್ಲಿರುವ ಕಾರ್ಯಪ್ಪ ಅವರ ಸಮಾಧಿ ಸ್ಥಳಕ್ಕೆ ಗಣ್ಯರು ಪುಪ್ಪನಮನ ಸಲ್ಲಿಸಿದರು. ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ಭಜನೆ, ದೇಶಭಕ್ತಿಗೀತ ಗಾಯನ ಜರುಗಿತು.
ಈ ಸಂದರ್ಭ ಮಾತನಾಡಿದ ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ನಂದಾಕಾರ್ಯಪ್ಪ, ಪ್ರತೀಯೋರ್ವ ಭಾರತೀಯನಿಗೂ ತನ್ನ ದೇಶ ಮೊದಲಾಗಬೇಕು. ಭಾರತೀಯತೆ ಆದ್ಯತೆಯಾಗಿರಬೇಕು. ಕೃತಕ ಬುದ್ಧಿಮತ್ತೆಯ ಪ್ರಭಾವ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಮಾಧ್ಯಮಗಳಲ್ಲಿ ಬಂದದ್ದೆಲ್ಲಾ ನಿಜವಾಗಿರುವುದಿಲ್ಲ. ಯಾವುದೇ ವಿಚಾರಗಳನ್ನು ಪರಾಮರ್ಶಿಸಿ ಎಂದು ಕಿವಿಮಾತು ಹೇಳಿದರು.
ಯಾವುದೇ ವತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಎಲ್ಲಾ ಸೌಲಭ್ಯಗಳೊಂದಿಗೆ ದೇಶಸೇವೆಗೆ ಪ್ರಾಮುಖ್ಯತೆ ನೀಡುವ ಭಾರತೀಯ ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರಿ ನಳಿನಿ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ಜ್ಯೋತಿ ಬೆಳಗಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೂಡಿಗೆ ಸೈನಿಕ ಶಾಲಾ ಕೆಡೆಟ್ ಧ್ರುವ್ ಭಾರದ್ವಜ್ ಅವರಿಗೆ ಕಾರ್ಯಪ್ಪ ಅವರ ಸೊಸೆ ಮೀನಾ ಕಾರ್ಯಪ್ಪ ಟ್ರೋಫಿ ಪ್ರಧಾನ ಮಾಡಿದರು. ಕೊಕ್ಕಲೇರ ಅಪ್ಪಯ್ಯ ಅವರಿಂದ ಕಾರ್ಯಪ್ಪ ಕುರಿತಾಗಿ ಮಾಹಿತಿ ನೀಡಲ್ಪಟ್ಟಿತ್ತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ಹೇಳಿಕೆಗಳನ್ನು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ವಾಚಿಸಿದರು. ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಗುರುದತ್, ನಿಯತಾ ದೇವಯ್ಯ, ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ನಿವೃತ್ತ ಕರ್ನಲ್ ಬಿ.ಜಿ.ವಿ.ಕುಮಾರ್, ಕರ್ನಲ್ ಕಾವೇರಪ್ಪ ಪ್ರೇಮ್‌ನಾಥ್, ಬಾಬು ಸೋಮಯ್ಯ, ಹಾಜರಿದ್ದರು. ಸೇರಿದಂತೆ ಮಾಜಿ ಸೈನಿಕರು, ಕೊಡಗು ವಿದ್ಯಾಲಯದ ಎನ್‌ಸಿಸಿ ಕೆಡೆಟ್‌ಗಳು, ವಿದ್ಯಾರ್ಥಿ, ಶಿಕ್ಷಕರು, ಕೂಡಿಗೆ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.