ಮಳೆಗಾಲದಲ್ಲಿ ಉಕ್ಕಿ ಹರಿಯುವ ಚೋರನ ಹೊಳೆಗೆ ಅಡ್ಡಲಾಗಿ ಐಗೂರು-ಯಡವಾರೆ ಗ್ರಾಮದ ಬಳಿ ನಿರ್ಮಿಸಿರುವ ಬ್ರಿಟಿಷರ ಕಾಲದ ಸೇತುವೆ ಈಗ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು ಹಾಗೂ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. 
ಕೊಡಗು

ಐಗೂರು-ಯಡವಾರೆ ಸೇತುವೆಯಲ್ಲಿ ಸಂಚರಿಸಲು ಭಯ

ಸೋಮವಾರಪೇಟೆ:

ಮಳೆಗಾಲದಲ್ಲಿ ಉಕ್ಕಿ ಹರಿಯುವ ಚೋರನ ಹೊಳೆಗೆ ಅಡ್ಡಲಾಗಿ ಐಗೂರು-ಯಡವಾರೆ ಗ್ರಾಮದ ಬಳಿ ನಿರ್ಮಿಸಿರುವ ಬ್ರಿಟಿಷರ ಕಾಲದ ಸೇತುವೆ ಈಗ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು ಹಾಗೂ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಐಗೂರು ಜಂಕ್ಷನ್‌ನಲ್ಲಿರುವ ಕಬ್ಬಿಣದ ಸೇತುವೆ ಕಾಮಗಾರಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಐಗೂರು-ಯಡವಾರೆ ಮಾರ್ಗದ ಪರ್ಯಾಯ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವರ್ಷದಿಂದ ಸಣ್ಣ, ಮಧ್ಯಮ ಹಾಗೂ ಭಾರಿ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿದ್ದು, ಐಗೂರು ಗ್ರಾಮದೊಳಗಿನ ಹಳೆಯ ಸೇತುವೆಯ ಮೇಲೆ ವಾಹನಗಳ ಸಂಚಾರದ ಒತ್ತಡ ಹೆಚ್ಚಾಗಿದೆ.

ಸೇತುವೆ ತಳಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಸೇತುವೆಯ ಹಲವು ಭಾಗಗಳು ದುಸ್ಥಿತಿ ತಲುಪಿವೆ. ಟಿಂಬರ್ ಲಾರಿಗಳು, ಜೆಲ್ಲಿ ಹಾಗೂ ಬೋಡ್ರಸ್ ತುಂಬಿಕೊಂಡು ಸಂಚರಿಸುವ ಟಿಪ್ಪರ್‌ಗಳು ಸೇತುವೆ ಮೇಲೆ ಹಾದುಹೋಗುವ ಸಂದರ್ಭದಲ್ಲಿ ಸೇತುವೆ ಕಂಪಿಸಿದ ಅನುಭವವಾಗುತ್ತಿದೆ. ಇದರಿಂದ ಚಾಲಕರು ಆತಂಕದಿಂದ ಸಂಚರಿಸುವಂತಾಗಿದೆ.

ದಶಕಗಳಿಂದ ಸೇತುವೆ ದುಸ್ಥಿತಿಯಲ್ಲಿದ್ದರೂ ಅದರ ಮರುನಿರ್ಮಾಣ ಅಥವಾ ಸಮರ್ಪಕ ದುರಸ್ತಿ ಕಾರ್ಯಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆದ್ಯತೆ ನೀಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಇದೇ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಶಾಲಾ ಬಸ್‌ಗಳು, ಸಾರಿಗೆ ಬಸ್‌ಗಳು, ಲಾರಿಗಳು ಹಾಗೂ ಇತರ ಭಾರಿ ವಾಹನಗಳ ಓಡಾಟ ನಿರಂತರವಾಗಿದೆ.

ಕೆಲ ವರ್ಷಗಳ ಹಿಂದೆ ಸಂಬಂಧಪಟ್ಟ ಅಭಿಯಂತರರೊಬ್ಬರು ಸೇತುವೆಯ ವಸ್ತುಸ್ಥಿತಿ ಹಾಗೂ ಸಾಮರ್ಥ್ಯ ಪರಿಶೀಲಿಸಿದ್ದರು. ಸೇತುವೆ ದುಸ್ಥಿತಿಯಲ್ಲಿರುವುದರಿಂದ ಅದರ ಮೇಲೆ ಭಾರಿ ವಾಹನಗಳ ಸಂಚಾರ ಮುಂದುವರಿದರೆ ಯಾವುದೇ ಸಂದರ್ಭದಲ್ಲದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ವರದಿ ಸಲ್ಲಿಕೆಯಾಗಿ ವರ್ಷಗಳು ಕಳೆದರೂ ಸೇತುವೆಯ ಮರು ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ.

ಮಳೆಗಾಲದಲ್ಲಿ ಸೋಮವಾರಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಚೋರನ ಹೊಳೆಯಲ್ಲಿ ನೀರಿನ ಹರಿವು ತೀವ್ರಗೊಳ್ಳುತ್ತದೆ. ನೀರಿನ ಮಟ್ಟ ಏರಿಕೆಯಾದಾಗ ಸೇತುವೆಯ ತಳಭಾಗದಲ್ಲಿ ನೀರಿನ ಒತ್ತಡವೂ ಹೆಚ್ಚಾಗುತ್ತದೆ. ಈಗಾಗಲೇ ಸೇತುವೆಯ ತಳಭಾಗ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ನಿರಂತರ ಮಳೆ ಹಾಗೂ ಭಾರಿ ವಾಹನಗಳ ಸಂಚಾರದಿಂದ ಅಪಾಯ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.