ಜಿಲ್ಲೆಯ ಗೋದಾಮು ಒಂದರಲ್ಲಿ ಸಂಗ್ರಹಿಸಿ ಇಡಲಾಗಿರುವ ರಸಗೊಬ್ಬರ 
ಕೊಡಗು

ಕಾಫಿ ಬೆಳೆಗಾರರ ಚಿಂತೆ ಹೆಚ್ಚಿಸಿದ ಎಪ್‌ಐಡಿ

ಮಡಿಕೇರಿ:
ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ರೈತರಲ್ಲಿ ಸಾಕಷ್ಟು ಚಿಂತೆಗೆ ಕಾರಣವಾಗಿದೆ. ಹವಾಮಾನ, ಭೂಮಿಯ ಗುಣಮಟ್ಟ ಹಾಗೂ ಬೆಳೆಗಳ ಅವಶ್ಯಕತೆಗಳನ್ನು ಅವಲಂಬಿಸಿ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಆದರೆ ಎಕರೆಗೆ ನಿಗದಿತ ಪ್ರಮಾಣದಲ್ಲಿ ಮಾತ್ರ ಗೊಬ್ಬರ ವಿತರಿಸುವ ನಿಯಮದಿಂದ ರೈತರು ತಮ್ಮ ಬೆಳೆಗಳಿಗೆ ಬೇಕಾದಷ್ಟು ಗೊಬ್ಬರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಈ ನಿಯಮದಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಬೆಳೆಗಳ ವಯಸ್ಸು, ಇಳುವರಿ ಪ್ರಮಾಣ ಮತ್ತು ಮಣ್ಣಿನ ಫಲವತ್ತತೆ ಆಧರಿಸಿ ಗೊಬ್ಬರದ ಅವಶ್ಯಕತೆ ಬದಲಾಗುತ್ತದೆ. ಕೆಲವೊಮ್ಮೆ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಗೊಬ್ಬರದ ಅಗತ್ಯ ಬೀಳಬಹುದು. ಆದರೆ ನಿಗದಿತ ಮಿತಿಯ ಕಾರಣದಿಂದ ರೈತರು ಬೇಕಾದಷ್ಟು ಗೊಬ್ಬರ ಖರೀದಿಸಲು ಸಾಧ್ಯವಾಗದೆ ಬೆಳೆಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀಳುವ ಭೀತಿ ಎದುರಿಸುತ್ತಿದ್ದಾರೆ.
ರಸಗೊಬ್ಬರಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಡಿಎಪಿ, ಯೂರಿಯಾ, ಪೊಟ್ಯಾಶ್ ಸೇರಿದಂತೆ ಹಲವು ಗೊಬ್ಬರಗಳ ಬೆಲೆ ಏರಿಕೆಯಿಂದ ಕೃಷಿ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಕಾಫಿ ಸೇರಿದಂತೆ ಇತರ ವಾಣಿಜ್ಯ ಬೆಳೆಗಳ ಬೆಲೆಗಳು ಸ್ಥಿರವಾಗಿಲ್ಲದ ಕಾರಣ ರೈತರಿಗೆ ಲಾಭದಾಯಕ ಕೃಷಿ ನಡೆಸುವುದು ಕಷ್ಟವಾಗುತ್ತಿದೆ.
ಎಫ್‌ಐಡಿ ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಗಳು, ದಾಖಲೆಗಳ ಕೊರತೆ ಹಾಗೂ ಆನ್‌ಲೈನ್ ವ್ಯವಸ್ಥೆಯ ಅರಿವಿನ ಅಭಾವದಿಂದ ಸಣ್ಣ ರೈತರು ಹೆಚ್ಚುವರಿ ಸಂಕಷ್ಟ ಎದುರಿಸುತ್ತಿದ್ದಾರೆ. ಗೊಬ್ಬರ ಖರೀದಿಸಲು ಅನಗತ್ಯ ವಿಳಂಬವಾಗುತ್ತಿರುವುದರಿAದ ಕೃಷಿ ಕಾರ್ಯಗಳ ವೇಳಾಪಟ್ಟಿಯೂ ಹದಗೆಡುತ್ತಿದೆ.
"

ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿರುವುದು ರೈತರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಕೊಡಗಿನ ಕಾಫಿ ತೋಟಗಳಲ್ಲಿ ಮಣ್ಣಿನ ಗುಣಮಟ್ಟ ಹಾಗೂ ಬೆಳೆ ಪರಿಸ್ಥಿತಿಗೆ ಅನುಗುಣವಾಗಿ ಗೊಬ್ಬರದ ಅವಶ್ಯಕತೆ ಬದಲಾಗುತ್ತದೆ. ಆದರೆ ಎಕರೆಗೆ ನಿಗದಿತ ಪ್ರಮಾಣ ಎನ್ನುವ ನಿಯಮದಿಂದ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ದೊರೆಯದೇ ಉತ್ಪಾದನೆ ಮೇಲೆ ಪರಿಣಾಮ ಬೀಳುವ ಆತಂಕ ಇದೆ. ರೈತರ ನೈಜ ಅಗತ್ಯ ಅರಿತು ನಿಯಮಗಳನ್ನು ಸರಳಗೊಳಿಸಬೇಕು.

— ಜಯಂತಿ, ರೈತ ಮಹಿಳೆ, ಸೂರ್ಲಬ್ಬಿ ಗ್ರಾಮ

"

ಫ್ರೂಟ್ ಐಡಿ ಕಡ್ಡಾಯಗೊಳಿಸಿರುವುದು ಉತ್ತಮ ವಿಚಾರ. ಆದರೆ ಎಲ್ಲಾ ರೈತರ ಹೆಸರಿನಲ್ಲಿ ಆರ್.ಟಿ.ಸಿ. ಆಗಿರುವುದಿಲ್ಲ. ಆದ್ದರಿಂದ ಅಂತಹ ರೈತರಿಗೆ ಪಂಚಾಯಿತಿ ಕಡೆಯಿಂದ ದೃಢೀಕರಣ ಪತ್ರವನ್ನಾದರೂ ನೀಡಬೇಕು. ಕೃಷಿ ಇಲಾಖೆ ಇದನ್ನು ಪರಿಗಣಿಸುವಂತಾಗಬೇಕು. ಕೊಡಗಿನಲ್ಲಿ ಯೂರಿಯ ಅತ್ಯಂತ ಅವಶ್ಯಕ. ಕೃಷಿ ಇಲಾಖೆ ಏಕರೆಗೆ ಒಂದು ಚೀಲದಂತೆ ಐದು ತಿಂಗಳು ಪೂರೈಸುವುದಾಗಿ ತಿಳಿಸಿದೆ. ಯುದ್ಧದಿಂದ ರಸ ಗೊಬ್ಬರದ ಬೆಲೆ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಸಬ್ಸಿಡಿ ಪ್ರಮಾಣ ಹೆಚ್ಚಿಸಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ.

— ಬಿ.ಎಂ. ಶೈಲೇಶ್, ರೈತ, ಪಾಕೋಡು, ವಿರಾಜಪೇಟೆ

"

ಎಫ್‌ಐಡಿ ವ್ಯವಸ್ಥೆ ಪಾರದರ್ಶಕತೆಗಾಗಿ ಜಾರಿಗೊಂಡಿದ್ದರೂ, ಪ್ರಾಯೋಗಿಕವಾಗಿ ರೈತರಿಗೆ ಹಲವು ಸಮಸ್ಯೆಗಳನ್ನು ತಂದಿದೆ. ಕಾಫಿ ತೋಟಗಳ ವಿಸ್ತೀರ್ಣ ಮತ್ತು ಬೆಳೆಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಗೊಬ್ಬರದ ಅವಶ್ಯಕತೆ ಬದಲಾಗುತ್ತದೆ. ಆದರೆ ನಿಗದಿತ ಪ್ರಮಾಣದ ಮಿತಿಯಿಂದ ಅಗತ್ಯವಿರುವಷ್ಟು ಗೊಬ್ಬರ ಖರೀದಿಸಲು ಸಾಧ್ಯವಾಗುತ್ತಿಲ್ಲ. ರಸಗೊಬ್ಬರ ಬೆಲೆ ಏರಿಕೆಯ ನಡುವೆಯೇ ಈ ನಿಯಮಗಳು ರೈತರ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿವೆ

— ತೇಜಸ್ ಪಾಪಯ್ಯ, ಕಾಫಿ ಬೆಳೆಗಾರ, ಚೆಟ್ಟಳ್ಳಿ

"

ನಮ್ಮದು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ದೇಶದ ಬೆನ್ನೆಲುಬು ಕೃಷಿಕರೇ ಎಂದು ಹೇಳಿಕೊಳ್ಳುವ ಸರ್ಕಾರಗಳು ಕೃಷಿಕರನ್ನೇ ಆಗಿಂದಾಗ್ಗೆ ಸಂಕಷ್ಟಗಳಿಗೆ ದೂಡುತ್ತಿವೆ. ಅವರಿಗೆ ನೀಡುವ ರಸಗೊಬ್ಬರಗಳ ಗುಣಮಟ್ಟ ಕಳಪೆ ಹಾಗೂ ಕಲಬೆರಕೆ ಮಾಡಲಾಗುತ್ತಿದೆ. ಇದರೊಂದಿಗೆ ಬೆಲೆ ದುಬಾರಿಗೊಳಿಸುವ ಮೂಲಕ ಕೃಷಿಕರನ್ನು ಮತ್ತಷ್ಟು ಪ್ರಪಾತಕ್ಕೆ ತಳುತ್ತಿದ್ದಾರೆ.

— ಮಂದೋಡಿ ಜಗನ್ನಾಥ್, ಕೃಷಿಕ, ನಾಕೂರು ಶಿರಂಗಾಲ

"

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿAದಾಗಿ ರಸಗೊಬ್ಬರಗಳ ಉತ್ಪಾದನೆಗೆ ಬಳಸಲಾಗುವ ಕಚ್ಛಾ ವಸ್ತುಗಳು ಮತ್ತು ರಸಗೊಬ್ಬರಗಳ ಆಮದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ ಈ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಮತ್ತು ಡಿ.ಎ.ಪಿ. ರಸಗೊಬ್ಬರಗಳ ದುರ್ಬಳಕೆ ಹಾಗೂ ಕಾಳಸಂತೆ ಮಾರಾಟ ತಡೆಗಟ್ಟಲು ಕೆ ಕಿಸಾನ್ ತಂತ್ರಾAಶದ ಮೂಲಕವೇ ಕಡ್ಡಾಯವಾಗಿ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಕೆ ಕಿಸಾನ್ ತಂತ್ರಾAಶದಲ್ಲಿ ರೈತರ ಎಫ್‌ಐಡಿ ಸಂಖ್ಯೆ ಬಳಸಿಕೊಂಡು ಕೃಷಿ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ೧ ತಿಂಗಳಿಗೆ ಯೂರಿಯಾ ಎಕರೆಗೆ ಒಂದು ಚೀಲ, ಡಿ.ಎ.ಪಿ. ಎಕರೆಗೆ ಒಂದು ಚೀಲ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಎನ್.ಪಿ.ಕೆ. ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ.

— ಚಂದ್ರಶೇಖರ್, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ, ಕೊಡಗು