ಬಿಡದಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟದಲ್ಲಿ ಪಾಲ್ಗೊಳ್ಳಲು ಕೊಡಗಿನಿಂದ ಹೊರಟಿದ್ದ ರೈತರನ್ನು ವಿನಾಕಾರಣ ಬಂಧಿಸಿದ ಪ್ರಕರಣ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮ ನಡೆಸಲಾಯಿತು.
ಬಿಡದಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟದಲ್ಲಿ ಪಾಲ್ಗೊಳ್ಳಲು ಕೊಡಗಿನಿಂದ ಹೊರಟಿದ್ದ ರೈತರ ಬಂಧನ ಪ್ರಕರಣ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕದ ವತಿಯಿಂದ ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮ ನಡೆಸಲಾಯಿತು. ಜು.24ರಂದು ಪೊಲೀಸರು ತೋರಿಸಿದ ವರ್ತನೆಯನ್ನು ಈ ಸಂದರ್ಭ ಬಲವಾಗಿ ಖಂಡಿಸಲಾಯಿತು.
ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ರಾಜಕಾರಣಿಗಳು ಮತ್ತು ಅಧಿಕಾರಿಗಳು ರೈತರ ಹೋರಾಟಗಳನ್ನು ಹತ್ತಿಕ್ಕಲು ಬರುವುದು ಬೇಡ. ರೈತರ ತಂಟೆಗೆ ಬಂದ ಯಾವುದೇ ರಾಜಕಾರಣಿ ಅಥವಾ ಅಧಿಕಾರಿ ಆಗಿರಲಿ ರೈತ ಚಳವಳಿ ಅವರಿಗೆ ತಕ್ಕ ಪಾಠ ಕಲಿಸುತ್ತದೆ. ಯಾವುದೇ ಸರ್ಕಾರವಾದರೂ ಸಮಯ ಬಂದಾಗ ರೈತ ಸಂಘಟನೆ ತನ್ನ ಶಕ್ತಿ ತೋರಿಸುತ್ತದೆ. ಗುಂಡೂರಾವ್ ಸರ್ಕಾರ ಉರುಳಿಸಿದ್ದು ರೈತ ಸಂಘದ ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಗೊತ್ತಾಗುತ್ತೆ. ನರಗುಂದ, ನವಲಗುಂದ ಬಂಡಾಯ ಹೋರಾಟ ಯಾವ ರೀತಿಯಲ್ಲಿ ಒಂದು ಸರ್ಕಾರವನ್ನು ಬೀಳಿಸುವುದಕ್ಕೆ ಕಾರಣವಾಯಿತು ಎನ್ನುವುದೂ ಇತಿಹಾಸವಾಗಿ ಉಳಿದಿದೆ.
ರೈತ ಸಂಘದಿAದ ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಲಾಗಿದೆ. ಎಲ್ಲಿಯೂ ಕಾನೂನು ಉಲ್ಲಂಘಿಸಿಲ್ಲ. ಈ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿಗಳೂ ಹೋರಾಟಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಆದರೆ ಈಗ ಒಬ್ಬ ಯುವ ಅಧಿಕಾರಿಯಿಂದ ಇಂಥ ನಿರ್ಧಾರ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಹಲವಾರು ಹೋರಾಟಗಳು ಜಿಲ್ಲೆಯಲ್ಲಿ ನಡೆದಿದೆ. ಆದರೆ ಯಾವತ್ತೂ ಸಂಘರ್ಷಕ್ಕೆ ಹೋದವರಲ್ಲ. ಪೊಲೀಸರ ಮಾರ್ಗದರ್ಶನದಲ್ಲೇ ಹೋರಾಟಗಳು ನಡೆದಿವೆ. ರೈತರು ಮತ್ತು ಕಾರ್ಮಿಕರು ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ. ಇಲ್ಲಿ ಯಾರೂ ಮಚ್ಚು, ಕೊಡಲಿ ಹಿಡಿದುಕೊಂಡು ಸಂಘರ್ಷಕ್ಕೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಯುತ ಹೋರಾಟಗಳಿಗೆ ಅಡ್ಡಿ ಮಾಡಬಾರದು ಎಂದು ಹೇಳಿದರು.
ರೈತ ಸಂಘದ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿ ನಾವಿಲ್ಲಿ ತಮಾಷೆಗೋಸ್ಕರ ಚಳವಳಿಗಳು ಮಾಡ್ತಿಲ್ಲ. ಭೂಮಿ ಇರುವವರು ನಮ್ಮ ಹಕ್ಕಿಗೋಸ್ಕರ ಹೋರಾಟ ಮಾಡ್ತಾ ಇದ್ದೀವಿ. ಅದನ್ನು ಪೊಲೀಸರು ಯೋಚನೆ ಮಾಡಬೇಕು. ನಾವೇನೂ ಪುಂಡಾಟಿಕೆ ಮಾಡೋಕೆ ಬಂದಿಲ್ಲ. ಅಥವಾ ದೌರ್ಜನ್ಯ ನಡೆಸಲು ಬಂದಿಲ್ಲ. ನಾವು ನ್ಯಾಯಕ್ಕೋಸ್ಕರ ಹೋರಾಟ ಮಾಡುವವರು. ಹಾಗಾಗಿ ಹೋರಾಟಕಕ್ಕೆ ಸಹಕಾರ ಕೊಡಬೇಕು ಎಂದರು.
ರೈತರ ಒತ್ತಾಯದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಎದುರು ಬಂದು ಮಾತನಾಡಿದ ಎಸ್‌ಪಿ ಆರ್.ಎನ್. ಬಿಂದುಮಣಿ, ಇಲಾಖೆಗೆ ಬಂದಿದ್ದ ಲಿಖಿತ ಆದೇಶದ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೋಸ್ಕರ ಆ ಕಾರ್ಯಾಚರಣೆ ಮಾಡಲಾಯಿತು. ಇದರ ಹಿಂದೆ ಬೇರೆ ಯಾವುದೇ ರೀತಿಯ ಕಾರಣ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರಮಾಡ ಸುಜಯ್ ಬೊಪ್ಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಂಡ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಪ್ರಮುಖರಾದ, ಪೂವಯ್ಯ, ಸುರೇಶ್ ಚಕ್ರವರ್ತಿ, ದಿನೇಶ್, ಹೂವಯ್ಯ. ಹೆಚ್.ಡಿ. ಕೋಟೆಯ ಮಹಾದೇವ ನಾಯಕ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರಗೂರು ನಟರಾಜ್ ಮತ್ತಿತರರು ಇದ್ದರು.