ಸೇವೆಯಿಂದ ನಿವೃತ್ತರಾದ ಶಿಕ್ಷಕಿ ಹೆಚ್.ಎಸ್. ಸಣ್ಣಕ್ಕ ಅವರನ್ನು ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಡಲಾಯಿತು. ಹೆಚ್.ಎಸ್. ಚೇತನ್, ಕೆ.ಎಸ್. ಪ್ರಸನ್ನ ಕುಮಾರ್, ಬಸವರಾಜ್, ಮಂಜುನಾಥ ಹೆಚ್.ಎನ್. ಶಿವಲಿಂಗ ಕೂಡಿಗೆ ಮತ್ತಿತರರು ಇದ್ದರು.
ಮರಗೋಡು ಸ.ಹಿ.ಪ್ರಾ. ಶಾಲೆಗೆ ಪದೋನ್ನತಿ ಹೊಂದಿ ಮುಖ್ಯ ಶಿಕ್ಷಕಿಯಾಗಿ ಒಂದು ತಿಂಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೆಚ್.ಎಸ್. ಸಣ್ಣಕ್ಕ ಅವರಿಗೆ ಮೂಲ ಶಾಲೆ ಕೂಡಿಗೆಯಲ್ಲಿ ಸೋಮವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಿಕ್ಷಣ ಇಲಾಖೆಯಲ್ಲಿ ಸತತವಾಗಿ ೩೧ ವರ್ಷಗಳ ಕಾಲ ಕಾರ್ಯನಿರ್ವಹಿಸಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಮತ್ತು ಪೋಷಕರ, ಹಿರಿಯ ವಿದ್ಯಾರ್ಥಿಗಳ, ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ ಮೇ ೩೧ರಂದು ನಿವೃತ್ತಿ ಗೊಂಡರು.
ಮೂಲತಃ ಹೆಬ್ಬಾಲೆ ಗ್ರಾಮದ ಸಣ್ಣಕ್ಕ ಶನಿವಾರಸಂತೆ, ಮುಳ್ಳುಸೋಗೆ, ಕೂಡಿಗೆ, ಮರಗೋಡು ಹೀಗೆ ವಿವಿಧ ಊರಿಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು.
ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಭಾಗವಹಿಸಿ ಮಾತನಾಡಿ ನಿವೃತ್ತಿ ಎಂದರೆ ಸೇವೆಯ ಅಗತ್ಯವಲ್ಲ. ಅದು ಅನುಭವ ಮತ್ತು ಮೌಲ್ಯಗಳ ಹೊಸ ಅಧ್ಯಯನ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್. ಪ್ರಸನ್ನ ಕುಮಾರ್, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಬಸವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಮಂಜುನಾಥ ಹೆಚ್.ಎನ್. ಸದಸ್ಯರಾದ ಶಿವಲಿಂಗ ಕೂಡಿಗೆ, ಕುಶಾಲನಗರ, ಹೆಬ್ಬಾಲೆ ವ್ಯಾಪ್ತಿಯ ವಿವಿಧ ಶಾಲೆಗಳ ಶಿಕ್ಷಕರು, ಶಾಲಾ ಮಕ್ಕಳು ಎಸ್‌ಡಿಎಂಸಿ ಸದಸ್ಯರು ಇದ್ದರು.