ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರ ಮೋಜು ಮಸ್ತಿ 
ಕೊಡಗು

ಜಲಪಾತದಲ್ಲಿ ಜಾರಿದರೆ ಜೀವಕ್ಕೆ ಕುತ್ತು

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಜಲಧಾರೆ ವೈಭವ ಕಣ್ತುಂಬಿಕೊಳ್ಳುವ ಭರದಲ್ಲಿ ಎಚ್ಚರ ತಪ್ಪಿದರೆ ಆಪತ್ತು
  • ಅದ್ಭುತ ತಾಣಗಳಲ್ಲಿ ಸುರಕ್ಷತಾ ವ್ಯವಸ್ಥೆ ಕೊರತೆ
ಸೋಮವಾರಪೇಟೆ: ಮಳೆಗಾಲದಲ್ಲಿ ಸೂಜಿಗಲ್ಲಿನಂತೆ ಸೆಳೆಯುವ ತಾಲೂಕಿನ ಜಲಪಾತಗಳಲ್ಲಿ ಧುಮ್ಮುಕ್ಕಿವ ಜಲಧಾರೆ ವೈಭವ ಕಣ್ತುಂಬಿಕೊಳ್ಳುವ ಪ್ರವಾಸಿಗರು ಎಚ್ಚರ ತಪ್ಪಿದರೆ ಜೀವಕ್ಕೆ ಮಾರಕವಾಗಲಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಕಳೆದ ಸೋಮವಾರದಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿವೆ.
ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ, ಸೂರ್ಲಬ್ಬಿಯ ಮೇದುರ ಜಲಪಾತ, ಗರ್ವಾಲೆಯ ಕಾಂಚನಗಂಗಾ ಹಾಗೂ ಚೋರನಹೊಳೆ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಪ್ರಕೃತಿಯ ಈ ಅದ್ಭುತ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಅಗತ್ಯವಾದ ಮೂಲಭೂತ ವ್ಯವಸ್ಥೆಗಳ ಕೊರತೆ ಗಂಭೀರ ಆತಂಕಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಪ್ರತಿದಿನ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ನೂರಾರು ಪ್ರವಾಸಿಗರನ್ನು ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಲ್ಲಳ್ಳಿ ಜಲಪಾತ ಸೆಳೆಯುತ್ತಿದೆ. ಸುಮಾರು 390 ಅಡಿ ಎತ್ತರದಿಂದ ಹಂತ ಹಂತವಾಗಿ ಧುಮ್ಮಿಕ್ಕುವ ಜಲಧಾರೆ, ಮಂಜಿನ ವಾತಾವರಣ ಹಾಗೂ ಹಸಿರು ಪರಿಸರ ಎಲ್ಲರನ್ನೂ ಆಕರ್ಷಿಸುತ್ತಿದೆ. ಆದರೆ, ಪ್ರವಾಸೋದ್ಯಮದ ಬೆಳವಣಿಗೆಗೆ ತಕ್ಕಂತೆ ಭದ್ರತಾ ವ್ಯವಸ್ಥೆಗಳು ಅಭಿವೃದ್ಧಿಯಾಗಿಲ್ಲ ಎಂಬ ಆರೋಪ ಕೇಳಿಬಂದಿವೆ.
ನೀರಿನ ಸೆಳೆತಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳು
ಕಳೆದ ಸೋಮವಾರ (ಜು.6) ನಡೆದ ಘಟನೆ ಈ ಆತಂಕಕ್ಕೆ ಮತ್ತಷ್ಟು ಬಲ ನೀಡಿದೆ. ಆಂಧ್ರಪ್ರದೇಶದಿಂದ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಸಂಜೆ ನಾಲ್ಕು ಗಂಟೆ ಸುಮಾರಿಗೆ **ಮಲ್ಲಳ್ಳಿ ಜಲಪಾತದ ಕೆಳಭಾಗಕ್ಕೆ ತೆರಳಿ, ರಕ್ಷಣಾ ಬೇಲಿಯನ್ನು ದಾಟಿ ಹರಿಯುವ ನೀರಿನ ಮಧ್ಯದ ಕಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆಯಲು ಮುಂದಾಗಿದ್ದರು. ಇದೇ ವೇಳೆ ಮೇಲ್ಭಾಗದ ಜಲವಿದ್ಯುತ್ ಘಟಕದಿಂದ ನೀರು ಹರಿಸಲಾಗಿದ್ದು, ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಅದೃಷ್ಟವಶಾತ್ ಅವರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ.
ಸುರಕ್ಷಿತ ವ್ಯವಸ್ಥೆ ಕಲ್ಪಿಸಿಲ್ಲ
ಮಲ್ಲಳ್ಳಿ ಜಲಪಾತದ ನಿರ್ವಹಣೆ ಇನ್ನೂ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಇದೆ. ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗದ ಕಾರಣ ಸಮರ್ಪಕ ಅನುದಾನ ದೊರೆಯುತ್ತಿಲ್ಲ. ಪಂಚಾಯಿತಿ ಪ್ರವಾಸಿಗರಿಂದ ಪ್ರವೇಶ ಹಾಗೂ ವಾಹನ ಶುಲ್ಕ ವಸೂಲಿ ಮಾಡುತ್ತಿದ್ದರೂ, ಅದಕ್ಕೆ ತಕ್ಕಂತೆ ಸೌಲಭ್ಯ ಮತ್ತು ಸುರಕ್ಷತಾ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.
ಜಲಪಾತದ ತಳಭಾಗಕ್ಕೆ ತೆರಳಲು 400ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಆದರೆ ಕೆಳಭಾಗದಲ್ಲಿ ಪ್ರವಾಸಿಗರ ಚಲನವಲನದ ಮೇಲೆ ನಿಗಾ ವಹಿಸುವ ಸಿಬ್ಬಂದಿ ಕಾಣಿಸುವುದಿಲ್ಲ. ಕೆಲವರು ರಕ್ಷಣಾತ್ಮಕ ಮೆಷ್‌ಗಳನ್ನು ಏರಿ ಅಪಾಯಕಾರಿ ರೀತಿಯಲ್ಲಿ ಫೋಟೋ ಹಾಗೂ ವಿಡಿಯೊಗಳನ್ನು ತೆಗೆಯುವುದು ಸಾಮಾನ್ಯವಾಗಿವೆ. ಕೆಲವೆಡೆ ಅಳವಡಿಸಿರುವ ಕಬ್ಬಿಣದ ಸರಳುಗಳನ್ನು ದಾಟಿಯೂ ಮುಂದೆ ಸಾಗುತ್ತಿದ್ದಾರೆ. ಇಂತಹ ಅಪಾಯಕಾರಿ ವರ್ತನೆಗಳನ್ನು ತಡೆಯಲು ಮೇಲ್ವಿಚಾರಣಾ ವ್ಯವಸ್ಥೆಯೇ ಇಲ್ಲ.
ಎಚ್ಚರಿಕೆ ಲಕಗಳೇ ಮಾಯ
ಮತ್ತೊಂದು ಪ್ರಮುಖ ಕೊರತೆ ಎಂದರೆ ಸಮರ್ಪಕ ಎಚ್ಚರಿಕೆ ಫಲಕಗಳ ಅಭಾವ. ಜಾರಿ ಬೀಳುವ ಸ್ಥಳಗಳು, ಆಳವಾದ ನೀರು, ಮಳೆಗಾಲದ ಅಪಾಯ ಹಾಗೂ ನಿಷೇಧಿತ ಪ್ರದೇಶಗಳ ಕುರಿತು ಸ್ಪಷ್ಟ ಮಾಹಿತಿ ನೀಡುವ ಫಲಕಗಳು ಅತ್ಯಂತ ಕಡಿಮೆ. ಸಿಸಿ ಕ್ಯಾಮರಾಗಳೂ ಇಲ್ಲ. ಪ್ರವಾಸಿಗರ ಹೆಸರು, ವಾಹನ ಸಂಖ್ಯೆ ದಾಖಲಿಸುವ ವ್ಯವಸ್ಥೆ ಹಾಗೂ ಪ್ರವೇಶ ನಿಯಂತ್ರಣವೂ ಇಲ್ಲದಿರುವುದು ಭದ್ರತಾ ದೃಷ್ಟಿಯಿಂದ ದೊಡ್ಡ ಕೊರತೆಯಾಗಿದೆ.
ಕನಿಷ್ಠ ಸ್ವಚ್ಛ ಶೌಚಗೃಹ ಇಲ್ಲ
ಮಹಿಳಾ ಪ್ರವಾಸಿಗರಿಗೆ ಅಗತ್ಯವಾದ ಶೌಚಗೃಹ ಸೌಲಭ್ಯ ಇಲ್ಲದಿರುವುದು ಮತ್ತೊಂದು ಸಮಸ್ಯೆ. ಸಾವಿರಾರು ಪ್ರವಾಸಿಗರು ಭೇಟಿ ನೀಡುವ ತಾಣದಲ್ಲಿ ಕನಿಷ್ಠ ಸ್ವಚ್ಛ ಶೌಚಗೃಹವೂ ಇಲ್ಲದಿರುವುದು ಪ್ರವಾಸೋದ್ಯಮದ ಅಭಿವೃದ್ಧಿಗೆ ಧಕ್ಕೆ ತರುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಸರ್ಕಾರದಿಂದ ಸುಮಾರು ನಾಲ್ಕೈದು ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಲಳ್ಳಿ ಜಲಪಾತಕ್ಕೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ ರಸ್ತೆ ಅಭಿವೃದ್ಧಿಯಷ್ಟೇ ಪ್ರವಾಸಿಗರ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ದುರಂತಗಳ ಇತಿಹಾಸ
ಮಲ್ಲಳ್ಳಿ ಜಲಪಾತಕ್ಕೆ ಸಂಬಂಧಿಸಿದ ದುರಂತಗಳ ಇತಿಹಾಸವೂ ಆತಂಕಕಾರಿ. 2005ರಲ್ಲಿ ಸೋಮವಾರಪೇಟೆಯ ನಾಲ್ಕು ಯುವತಿಯರು ಜಲಪಾತಕ್ಕೆ ಪಿಕ್ನಿಕ್‌ಗೆ ಬಂದ ಸಂದರ್ಭದಲ್ಲಿ, ಒಬ್ಬ ಯುವತಿ ಮೇಲ್ಭಾಗದ ಕಲ್ಲಿನ ಮೇಲೆ ಫೋಟೋ ತೆಗೆಯುವಾಗ ಕಾಲು ಜಾರಿ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದರು. ಈ ಭಯಾನಕ ದೃಶ್ಯ ಕಂಡಿದ್ದ ಮತ್ತೊಬ್ಬ ಸ್ನೇಹಿತೆ ನಂತರ ಮಾನಸಿಕ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು. ಒಂದು ವಾರದ ಕಾರ್ಯಾಚರಣೆ ಬಳಿಕ ಮೃತದೇಹವನ್ನು ಹೊರತೆಗೆದ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. 2001ರಿಂದ ಇಲ್ಲಿಯವರೆಗೆ ಸುಮಾರು 19 ಪ್ರವಾಸಿಗರು ವಿವಿಧ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಸೂರ್ಲಬ್ಬಿಯಲ್ಲೂ ಇದೇ ಪರಿಸ್ಥಿತಿ
ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿಯ ಮೇದುರ ಜಲಪಾತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮುಖ್ಯ ರಸ್ತೆಯ ಪಕ್ಕದಲ್ಲೇ ಜಲಪಾತ ಇರುವುದರಿಂದ ಗ್ರಾಮ ಪಂಚಾಯಿತಿ ಬ್ಯಾರಿಕೇಡ್ ಅಳವಡಿಸಿದೆ. ಆದರೆ ಕೆಲ ಪ್ರವಾಸಿಗರು ಬ್ಯಾರಿಕೇಡ್ ತೆರವುಗೊಳಿಸಿ ಅಪಾಯಕಾರಿ ಸ್ಥಳಗಳಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲಿಯೂ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಅಗತ್ಯ ಕ್ರಮದ ಭರವಸೆ
ಮಲ್ಲಳ್ಳಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಅಗತ್ಯ ಮೂಲಸೌಲಭ್ಯಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಶಿಧರ್ ಭರವಸೆ ನೀಡಿದ್ದಾರೆ.
ಮಳೆಗಾಲದಲ್ಲಿ ಜಲಪಾತಗಳಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಗದರ್ಶಕರು, ನುರಿತ ಈಜುಗಾರರು, ರಕ್ಷಣಾ ಸಿಬ್ಬಂದಿ, ತುರ್ತು ಸ್ಪಂದನಾ ತಂಡ, ಸಿಸಿ ಕ್ಯಾಮರಾಗಳು, ಎಚ್ಚರಿಕೆ ಫಲಕಗಳು, ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ತಕ್ಷಣ ಜಾರಿಗೊಳಿಸುವ ಅಗತ್ಯವಿದೆ. ಪ್ರಕೃತಿ ಸೌಂದರ್ಯದಿಂದ ಹೆಸರು ಮಾಡಿರುವ ಮಲ್ಲಳ್ಳಿ ಜಲಪಾತದಲ್ಲಿ ಸುರಕ್ಷತೆಗೆ ಸಮಾನ ಆದ್ಯತೆ ನೀಡಿದಾಗ ಮಾತ್ರ ಪ್ರವಾಸೋದ್ಯಮದ ಅಭಿವೃದ್ಧಿಯೊಂದಿಗೆ ಪ್ರವಾಸಿಗರ ಜೀವ ರಕ್ಷಣೆಯೂ ಸಾಧ್ಯವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಸಾರ್ವಜನಿಕ ಹಿತದೃಷ್ಟಿಯಿಂದ, ಮುಂದಿನ ಆದೇಶದವರಗೆ ಜಿಲ್ಲೆಯಲ್ಲಿರುವ ಜಲಪಾತಗಳು, ಜರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಜಲಾಶಯದ ಪ್ರದೇಶಗಳಲ್ಲಿ, ಸಾರ್ವಜನಿಕರು, ಪ್ರವಾಸಿಗರು ಅನಧಿಕೃತವಾಗಿ ನೀರಿನಲ್ಲಿ ಇಳಿಯುವುದು, ಈಜುವುದುದನ್ನು ನಿರ್ಬಂಧಿಸಲಾಗಿದೆ.
ಎಸ್.ಜೆ.ಸೋಮಶೇಖರ್ ಜಿಲ್ಲಾಧಿಕಾರಿ, ಕೊಡಗು
ಮಲ್ಲಳ್ಳಿ ಜಲಪಾತಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ನಿಯೋಜಿಸಲಾಗುವುದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಪ್ರವಾಸಿಗರು ಸೂಚನಾ ಫಲಕದಲ್ಲಿರುವ ನಿಯಮಗಳನ್ನು ಮೀರಬಾರದು. ಜಲಪಾತಕ್ಕೆ ಇನ್ನಷ್ಟು ಮೂಲಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗುವುದು.
ಡಾ.ಮಂತರ್‌ಗೌಡ ಶಾಸಕರು, ಮಡಿಕೇರಿ ಕ್ಷೇತ್ರ
ಮಲ್ಲಳ್ಳಿ ಜಲಪಾತಕ್ಕೆ ಶಾಶ್ವತವಾಗಿ ಸುರಕ್ಷತೆಗೆ ಪೊಲೀಸರು ಹಾಗೂ ಕಾವಲುಗಾರರನ್ನು ನೇಮಿಸಬೇಕಿದೆ. ಇಲ್ಲಿಗೆ ಆಗಮಿಸುವ ಹೊರ ಜಿಲ್ಲೆಯ ಯುವಕರು ಮೋಜು ಮಸ್ತಿ ಮಾಡುವುದು ಕಂಡು ಬರುತ್ತಿದೆ. ಎಲ್ಲೆಂದರಲ್ಲಿ ಮದ್ಯಪಾನ ಮಾಡಿ ನೀರಿಗಿಳಿದು ಆಟವಾಡುವುದಕ್ಕೆ ಕಡಿವಾಣ ಹಾಕಬೇಕಾಗಿದೆ.
ಹರೀಶ್ ಕುಮಾರ್ ಸ್ಥಳೀಯ ನಿವಾಸಿ