ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ನಿಡ್ತ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ. ಎಸ್. ಪೂರ್ವಿಕಾಗೆ ಕಸಾಪ ವತಿಯಿಂದ ನಾಪೋಕ್ಲು ಕೆ.ಪಿ.ಎಸ್. ಪ್ರೌಢಶಾಲೆಯಲ್ಲಿ ಗೌರವಿಸಲಾಯಿತು. ಕೂಡಕಂಡ ಸೋನಿ ಸುದೀಪ್, ತುಳಸಿ ಮೋಹನ್, ಎಂ.ಪಿ.ಕೇಶವ ಕಾಮತ್, ಸುರೇಶ್ ಮತ್ತು ಲೀಲಾ ಇತರರು ಇದ್ದರು.  
ಕೊಡಗು

ಆತ್ಮವಿಶ್ವಾಸವೇ ಗೆಲುವಿಗೆ ಸುಲಭ ಸಾಧನ

ಎ. ಆರ್. ರಘುರಾಮ
ನಾಪೋಕ್ಲು: ಪರೀಕ್ಷೆಗೆ ತಯಾರಾಗುವ ಮುನ್ನ ಮನದಲ್ಲಿರುವ ಭಯವನ್ನು ದೂರ ಮಾಡಬೇಕು ಎಂದು ಉಪನ್ಯಾಸಕಿ ಕೂಡಕಂಡ ಸೋನಿ ಸುದೀಪ್ ನುಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ತಾಲೂಕು ಮತ್ತು ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಕೆ.ಪಿ.ಎಸ್. ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದಿ. ಸೂದನ ರಾಘವಯ್ಯ ಮತ್ತು ಬಿ.ಆರ್. ಸಾಯಿನಾಥ್ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಓದಿದ ವಿಷಯಗಳನ್ನು ಆತ್ಮವಿಶ್ವಾಸದಿಂದ ಬರೆಯುತ್ತೇನೆ ಎಂಬುದೇ ಗೆಲುವಿಗೆ ಸಾಧನ. ಇದಕ್ಕಾಗಿ ದೃಢ ಮನಸ್ಸಿನಿಂದ ತಯಾರಾಗಬೇಕು ಎಂದರು. ಪರೀಕ್ಷೆ ಹತ್ತಿರ ಬಂದಾಗ ಓದಿನ ಅಭ್ಯಾಸ ಪ್ರಾರಂಭ ಮಾಡುವುದು ಅಲ್ಲ. ಪ್ರತಿನಿತ್ಯವೂ ಆಯಾ ದಿನದ ಪಾಠವನ್ನು ಮನನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ, ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ಕಾವ್ಯವೇ ಸಾಹಿತ್ಯದ ಮೂಲ ಎಂದರು. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜತೆಗೆ ಕಾವ್ಯ ರಚನೆಗೂ ಗಮನ ಕೊಡಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಸಾಹಿತ್ಯದ ಕೆಲಸಗಳ ಜೊತೆಗೆ ಶೈಕ್ಷಣಿಕ ಸಾಧನೆ ಮಾಡಿದವರನ್ನೂ ಗುರುತಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.ಪ್ರಾಥಮಿಕ ಶಾಲಾ ವಿಭಾಗದಿಂದ ಹಿಡಿದು ಪದವಿಯವರೆಗಿನ ವಿದ್ಯಾರ್ಥಿಗಳಿಗೆ ಕಥೆ, ಪ್ರಬಂಧ ಸ್ಪರ್ಧೆ, ಕವಿಗೋಷ್ಠಿ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ನಾಪೋಕ್ಲು ಕೆ.ಪಿ.ಎಸ್. ಉಪ ಪ್ರಾಂಶುಪಾಲ ಎಂ.ಎಸ್. ಶಿವಣ್ಣ ಮಾತನಾಡಿ, ಸಾಹಿತ್ಯ ಪರಿಷತ್ತು ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂಥ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಸನ್ಮಾನ: 2024-25 ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋಮವಾರಪೇಟೆ ತಾಲೂಕಿನ ನಿಡ್ತ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಜೆ. ಎಸ್. ಪೂರ್ವಿಕಾ ಗೌರವ ಸ್ವೀಕರಿಸಿ ಮಾತನಾಡಿ, ತರಗತಿಯಲ್ಲಿ ಎಲ್ಲರ ಜತೆಗೂಡಿ ಅಧ್ಯಯನ ಮಾಡಿದ್ದರಿಂದ ನನಗೆ ಅತಿ ಹೆಚ್ಚು ಅಂಕ ದೊರೆತವು ಎಂದರು. ಪಠ್ಯಪುಸ್ತಕದ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳೂ ಬೆಳವಣಿಗೆಗೆ ಮುಖ್ಯ ಎಂದರು. ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಮಾತನಾಡಿ, ದತ್ತಿ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿಯೇ ಮಾಡುತ್ತಿದ್ದು, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸುವ ಮೂಲಕ ಇತರ ಮಕ್ಕಳೂ ಸಾಧನೆ ಮಾಡಲು ಪ್ರೇರಣೆ ನೀಡಲಾಗುವುದು ಎಂದರು.
ಹೋಬಳಿ ಕಸಾಪ ಅಧ್ಯಕ್ಷ ನೆರವಂಡ ಉಮೇಶ, ಪದಾಧಿಕಾರಿಗಳಾದ ಸಂಪತ್ ಕುಮಾರ್, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಕೇಟೋಳಿರ ರಾಜ ಗಣಪತಿ, ಉಷಾರಾಣಿ, ಶಾಂತಿ ಅರ್ಜುನ, ಪಾಲಕರಾದ ಸುರೇಶ್ ಮತ್ತು ಲೀಲಾ ಇತರರು ಇದ್ದರು.