ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟವನ್ನು ನಿವೃತ್ತ ಸೈನಿಕ ಪೊಂಗೆರ ಜೀವನ್ ಬೋಪಣ್ಣ ಬ್ಯಾಟಿಂಗ್ ಮಾಡುವುದರ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು .
- ಬೆಸ್ಕಾಂ ನಿವೃತ್ತ ಹಿರಿಯ ಲೆಕ್ಕಾಧಿಕಾರಿ ಬಿದ್ದಿಯಂಡ ನಂದ ಅಭಿಪ್ರಾಯ
- ನಾಪೋಕ್ಲುವಿನಲ್ಲಿ ಕ್ರೀಡಾಕೂಟ ಉದ್ಘಾಟನೆ
ನಾಪೋಕ್ಲು: ಸಂಘಟನೆಯನ್ನು ಬಲಪಡಿಸಲು ಎಲ್ಲರ ಸಹಭಾಗಿತ್ವ ಮುಖ್ಯ ಎಂದು ಬೆಸ್ಕಾಂ ನಿವೃತ್ತ ಹಿರಿಯ ಲೆಕ್ಕಾಧಿಕಾರಿ ಬಿದ್ದಿಯಂಡ ನಂದ ಹೇಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಾತನಾಡಿ, ಸಮುದಾಯದ ಜನರಿಗೆ ಏರ್ಪಡಿಸುವ ಕ್ರೀಡಾಕೂಟಗಳಲ್ಲಿ ಎಲ್ಲರೂ ಸಕ್ರಿಯವಾಗಿ ಸಮುದಾಯದ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಸಂಘಟನೆ ಬಲವಾಗುತ್ತದೆ. ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ, ಸಂಘಟಕರು ಶ್ರಮವಹಿಸಿ ಕ್ರೀಡಾಕೂಟವನ್ನು ಆಯೋಜಿಸಿದ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕಾದ ಅಗತ್ಯವಿದೆ. ಎಲ್ಲರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಲಿದೆ ಎಂದು ಶುಭ ಹಾರೈಸಿದರು.
ಬಿದ್ದಿಯಂಡ-ಪೊನ್ನಟಿಯಂಡ ಮೊದಲ ಪಂದ್ಯವನ್ನು ನಿವೃತ್ತ ಸೈನಿಕ ಪೊಂಗೆರ ಜೀವನ್ ಬೋಪಣ್ಣ ಬ್ಯಾಟಿಂಗ್ ಮಾಡುವುದರ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ರಘು ಭೀಮಯ್ಯ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕ್ರೀಡಾ ಸಮಿತಿ ಅಧ್ಯಕ್ಷ ತೊತ್ತಿಯಂಡ ಅಜಂತ್ ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆ ನಿವೃತ್ತ ಸ್ಟಾಫ್ ನರ್ಸ್ ಪೊನ್ನಕಂಡ ಉಷಾ ಹರೀಶ್, ಉಪಾಧ್ಯಕ್ಷ ಪೈತಾಡಿಯಂಡ ಧರ್ಮ ರಾಜ್ ಗಣಪತಿ , ಕಾರ್ಯದರ್ಶಿ ಚೋಕಿರ ವಾಸುದೇವ, ಖಜಾಂಚಿ ಚೋಕಿರ ಬಾಬಿ ಭೀಮಯ್ಯ, ಸಹಕಾರ್ಯದರ್ಶಿ ಕೈ ಬ್ಲೀರ ಮೀನಾ ಇತರರು ಇದ್ದರು.
ಎರಡು ದಿನಗಳ ಕಾಲ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿದೆ. ಪುರುಷರಿಗೆ ಕ್ರಿಕೆಟ್ ಪಂದ್ಯಾವಳಿ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗ-ಜಗ್ಗಾಟ ಹಾಗೂ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ . ಶನಿವಾರ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊನೆಯದಾಗಿ ಅಯ್ಯಂಗೇರಿ ಗ್ರಾಮದ ಬಿದ್ದಿಯಂಡ ಮತ್ತು ಮಡಿಕೇರಿ ನಾಡು ಅರೆಯಂಡ ತಂಡಗಳು ಫೈನಲ್ ಪ್ರವೇಶಿಸಿದ್ದು ಭಾನುವಾರ ಎರಡೂ ತಂಡಗಳು ಪ್ರಶಸ್ತಿಗೆ ಸೆಣಸಾಡಲಿವೆ.
ಫೈನಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭ ಮೇ 24ರ ಬೆಳಗ್ಗೆ 9ಗಂಟೆಗೆ ನಡೆಯಲಿದೆ. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ರಘು ಭೀಮಯ್ಯ ಅಧ್ಯಕ್ಷತೆ ವಹಿಸುವರು. ಶಾಸಕ ಎ.ಎಸ್ ಪೊನ್ನಣ್ಣ, , ಉದ್ಯಮಿ ಎಡಿಕೇರಿ ಪ್ರಸನ್ನ ,ನಿವೃತ್ತ ಮುಖ್ಯ ಶಿಕ್ಷಕಿಯರಾದ ಪೈತಾಡಿಯಂಡ ಪೊನ್ನಮ್ಮ, ಪೊನ್ನಮ್ಮ, ಕೈಬ್ಲೀರ ಪಾರ್ವತಿ ಪಾಲ್ಗೊಳ್ಳಲಿದ್ದಾರೆ.