ಸುಂಟಿಕೊಪ್ಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಐಡಿಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಬಾಬುರಾವ್ ಮಾತನಾಡಿದರು. ಪೂರ್ಣಿಮಾ, ಸಂತೋಷ್, ಮುತ್ತುರಾಜ್ ಇದ್ದರು. 
ಕೊಡಗು

ಪ್ರತಿಯೊಬ್ಬರೂ ಬ್ಯಾಂಕ್ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಿ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಐಡಿಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಬಾಬುರಾವ್ ಸಲಹೆ
ಸುಂಟಿಕೊಪ್ಪ: ಪ್ರತಿಯೊಬ್ಬರೂ ಬ್ಯಾಂಕ್ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಮುಂದಿರಿಸಿಕೊಂಡು ಸರ್ಕಾರವು ಯಾವುದೇ ರೀತಿಯ ಮುಂಗಡ ಠೇವಣಿಯನ್ನು ಇರಿಸಿಕೊಳ್ಳದೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡಿದೆ ಎಂದು ಐಡಿಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಬಾಬುರಾವ್ ಮಾಹಿತಿ ನೀಡಿದರು.
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಬೇಕೆಂದರೆ ಸಾಕಷ್ಟು ನಿಯಮಗಳಿದ್ದವು. ಠೇವಣಿಯನ್ನು ಇರಿಸಬೇಕಾಗಿತ್ತು. ಸಾಮಾನ್ಯ ಜನತೆಯು ಬ್ಯಾಂಕ್‌ಗಳ ಖಾತೆಯನ್ನು ತೆರೆಯಲು ಇನ್ನಿಲ್ಲದ ಹರಸಾಹಸ ಮಾಡಬೇಕಿತ್ತು. ಅವುಗಳಿಂದ ದೂರವೇ ಉಳಿದುಕೊಂಡಿರುವುದನ್ನು ಮನಗಂಡ ಸರ್ಕಾರಗಳು ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಬೇಕು. ಇದಕ್ಕೆ ಬೇಕಾದ ಕಾನೂನು ನಿಯಮಗಳನ್ನು ಸರಳೀಕರಣಕರಣಗೊಳಿಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಬ್ಯಾಂಕಿನಲ್ಲಿ ಖಾತೆ ಹೊಂದುವುದರಿಂದ ಪ್ರತಿಯೊಬ್ಬ ಗ್ರಾಹಕನಿಗೂ ಠೇವಣಿ, ವಿಮೆ ಸೇರಿದಂತೆ ಸಾಕಷ್ಟು ಯೋಜನೆಗಳ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಹಣವು ಇನ್ನೊಬ್ಬರ ಪಾಲಾಗದಂತೆ ಸುರಕ್ಷತೆಯಿಂದ ಇರಬೇಕಾದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿ ಎಂದು ಕರೆ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಂಟಿಕೊಪ್ಪ ವಲಯ ಮೇಲ್ವಿಚಾರಕರಾದ ಸಂತೋಷ್, ಐಡಿಬಿಐ ಬ್ಯಾಂಕಿನ ವ್ಯವಸ್ಥಾಪಕ ಮುತ್ತುರಾಜ್ ಮಾತನಾಡಿದರು.