ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ನಡೆಯಿತು. ಎಂ.ಎಸ್. ಮುತ್ತಣ್ಣ , ಡಾ.ಯು.ಕಾರ್ಯಪ್ಪ , ಅನಂತ ಶಯನ , ಬೆನೆಡಿಕ್ಟ್ ಆರ್ ಸಲ್ಡಾನ , ಡಾ.ವೀಣಾ ಇದ್ದರು. 
ಕೊಡಗು

ಪ್ರತಿಯೊಬ್ಬರಲ್ಲೂ ಅಸಾಧಾರಣ ಶಕ್ತಿ ಇದೆ

ವಿರಾಜಪೇಟೆ: ಪ್ರತಿಯೊಬ್ಬ ಮನುಷ್ಯನಲ್ಲೂ ಅಸಾಧಾರಣವಾದ ಶಕ್ತಿ ಇದ್ದು ಅದನ್ನು ಗುರುತಿಸಿಕೊಂಡು ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ನಾವು ಕೂಡ ಶ್ರೇಷ್ಠ ವ್ಯಕ್ತಿಗಳಂತೆ ಬದುಕಬಹುದು ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ ಅಭಿಪ್ರಾಯಪಟ್ಟರು.
ವಿರಾಜಪೇಟೆ ಕಾವೇರಿ ಕಾಲೇಜಿನ ಕೌಸ್ತುಭ ಸಭಾ ಭವನದಲ್ಲಿ ದಿ.ಕೂತಂಡ ಪಿ.ಉತ್ತಪ್ಪ ಸ್ಮರಣಾರ್ಥ ‘ಆಧ್ಯಾತ್ಮಿಕ ನಾಯಕನಾಗಿ ಸ್ವಾಮಿ ವಿವೇಕಾನಂದ’ ವಿಷಯದ ಕುರಿತು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಆಧ್ಯಾತ್ಮಿಕ ವಿಚಾರಗಳನ್ನು ಹೆಚ್ಚು ಪ್ರಚಾರಗೊಳಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಅಗ್ರಗಣ್ಯರು. ತಮ್ಮ ಭಾಷಣ, ಪ್ರವಚನ, ಉಪನ್ಯಾಸಗಳ ಮೂಲಕ ಯುವ ಜನತೆಯನ್ನು ಪ್ರೇರೇಪಿಸುತ್ತಿದ್ದಂತಹ ಶ್ರೇಷ್ಠ ವ್ಯಕ್ತಿತ್ವ ವಿವೇಕಾನಂದರದ್ದು. ಆದರಿಂದ ವಿವೇಕಾನಂದರ ಕುರಿತ ಪುಸ್ತಕಗಳನ್ನು ಮಾತ್ರ ಓದಿದರೆ ಸಾಲದು, ಅವರ ಒಂದೆರಡು ತತ್ವ ವಿಚಾರಗಳನ್ನು ಮೈಗೂಡಿಸುವ ಕೆಲಸ ನಮ್ಮಿಂದಾಗಬೇಕು ಎಂದರು.
ಕಾರ್ಯಕ್ರಮದ ಆಯೋಜಕ ಕೂತಂಡ ಡಾ.ಯು.ಕಾರ್ಯಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದರ ಶ್ರೇಷ್ಠ ವ್ಯಕ್ತಿತ್ವ ಚಿಂತನೆ ಹಾಗೂ ತತ್ವ ವಿಚಾರಗಳನ್ನು ಯುವ ಜನತೆಗೆ ಪರಿಚಯಿಸುವ ಉದ್ದೇಶದಿಂದ ನನ್ನ ತಂದೆಯವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೀಗ ಅವರ ಮರಣದ ನಂತರವೂ ಈ ಕಾರ್ಯಕ್ರಮವನ್ನು ನಾನು ಮುಂದುವರಿಸುತ್ತಿದ್ದೇನೆ ಎಂದರು.
ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಎಂ.ಎಸ್ .ಮುತ್ತಣ್ಣ ಮಾತನಾಡಿದರು. ವೇದಿಕೆ ಕಾರ್ಯಕ್ರಮದ ನಂತರ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಒಟ್ಟು 22 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಆಂಗ್ಲ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಕೆ.ಬಿ.ಮೊಹಮ್ಮದ್ ಅಜ್ನಾಸ್, ದ್ವಿತೀಯ ಸ್ಥಾನ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎಂ.ಜಿ.ಬೆಳ್ಳಿಯಪ್ಪ, ತೃತೀಯ ಸ್ಥಾನವನ್ನು ಪೊನ್ನಂಪೇಟೆ ಸಿ.ಐ.ಟಿ ಕಾಲೇಜಿನ ಪಿ.ಸಿ.ರೇಚಲ್ ನೀಲಮ್ಮ ಪಡೆದು ಕೊಂಡರು.
ಕನ್ನಡ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ಐ.ಪಿ. ಬಿಂದ್ಯಾ ಪ್ರಥಮ ಸ್ಥಾನ, ಪೊನ್ನಂಪೇಟೆ ಸಿಐಟಿ ಕಾಲೇಜಿನ ಅದ್ವಿಕಾ ದ್ವಿತೀಯ ಸ್ಥಾನ , ಕುಶಾಲನಗರ ಅನುಗ್ರಹ ಕಾಲೇಜಿನ ಬಿ.ಎನ್.ದರ್ಶನ್ ತೃತೀಯ ಸ್ಥಾನವನ್ನು ಪಡೆದು ಕೊಂಡರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಐನಂಡ ಪಿ. ಗಣಪತಿ ಹಾಗೂ ಅನ್ನಂಬಿರ ಟಿ. ಸುಬ್ರಮಣಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ಡಾನ , ಡಾ.ಕೆ.ಜಿ.ವೀಣಾ, ಕಾವೇರಿ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರು , ಉಪನ್ಯಾಸಕರು, ಸಿಬ್ಬಂದಿ ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಾರ್ಥಿಗಳು ಇದ್ದರು.