ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಸೈರಸ್ ಆಸ್ಪತ್ರೆ ಕುಶಾಲನಗರ, ದ ಕೂರ್ಗ್ ಫೌಂಡೇಶನ್ ಸ್ವಾಸ್ಥ್ಯ ಹಾಗೂ ಅರಮೇರಿ ಕಳಂಚೇರಿ ಮಠದ ಸಹಯೋಗದಲ್ಲಿ ಕೃತಕ ಕಾಲು ಜೋಡನೆ ಕಾರ್ಯಕ್ರಮ ನಡೆಯಿತು. ಶಾಸಕ ಎಎಸ್ ಪೊನ್ನಣ್ಣ, ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಡಾ.ಮೋಹನ್ ಅಪ್ಪಾಜಿ, ಡಾ.ಮೇಚೀರ ಸುಭಾಸ್ ನಾಣಯ್ಯ, ಡಾ.ಎಂ.ಜೆ.ಲೋಕೇಶ್, ಡಾ.ಎನ್.ನಂಜುಂಡಯ್ಯ, ಕದನೂರು ಗ್ರಾ.ಪಂ.ಪಿಡಿಒ ಮಂಜುಳಾ, ಆರತಿ ಸೋಮಯ್ಯ , ಮಂಜುನಾಥ್ ಇತರರು ಇದ್ದರು.
- ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಆಶಯ
- ಕೃತಕ ಕಾಲು ಜೋಡಣೆ
ವಿರಾಜಪೇಟೆ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ವೈದ್ಯಕೀಯ ಸೌಲಭ್ಯ ದೊರೆತಾಗ ವಿಜ್ಞಾನ ಕ್ಷೇತ್ರ ಅಭಿವೃದ್ಧಿ ಹೊಂದಿದ್ದು ಸಾರ್ಥಕವಾಗುತ್ತದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಸೈರಸ್ ಆಸ್ಪತ್ರೆ ಕುಶಾಲನಗರ, ದ ಕೂರ್ಗ್ ಫೌಂಡೇಶನ್ ಸ್ವಾಸ್ಥ್ಯ ಹಾಗೂ ಅರಮೇರಿ ಕಳಂಕೇರಿ ಮಠದ ಸಹಯೋಗದಲ್ಲಿ ಎಸ್‌ಎಂಎಸ್ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕೃತಕ ಕಾಲು ಜೋಡಣೆ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ-ತಂತ್ರಜ್ಞಾನ ಇಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಈ ಅಭಿವೃದ್ಧಿಗೆ ನಿಜವಾದ ಅರ್ಥ ಬರುವುದು ಸಮಾಜದಲ್ಲಿರುವಂತಹ ಅತ್ಯಂತ ಕಡು ಬಡವನಿಗೂ ಉತ್ತಮವಾದ ಆರೋಗ್ಯ ಸೇವೆ ದೊರೆತಾಗ. ಹಾಗಾಗಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರಕುವಂತಾಗಬೇಕು. ಅದರಂತೆ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಬಹಳ ವಿಶೇಷವಾದ ಪ್ರಯತ್ನವಾಗಿದೆ. ಇಂತಹ ಸೇವೆಗಳು ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಅದರಲ್ಲಿಯೂ ಸೂಕ್ತ ಫಲಾನುಭವಿಗಳನ್ನು ಹುಡುಕಿ ಅರ್ಹರಿಗೆ ಇಂತಹ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಉಚಿತವಾಗಿ ಕೃತಕ ಕಾಲು ಜೋಡಣೆ ಅನೇಕ ಜನರಿಗೆ ಮರುಜನ್ಮ ನೀಡಿದಕ್ಕೆ ಸಮ. ಇದರಿಂದ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಉತ್ತಮ ಬದುಕು ಮುಂದುವರಿಸಲು ಸಹಕಾರಿಯಾಗಲಿ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ಇದುವರೆಗೂ ಕೊಡಗು ಜಿಲ್ಲೆಯಲ್ಲಿ ಐದು ಬಾರಿ ಕೃತಕ ಕಾಲು ಜೋಡನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ವರ್ಷ ವಿರಾಜಪೇಟೆ ತಾಲೂಕಿನಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ಇದರ ಮುಖ್ಯ ಉದ್ದೇಶ ಅರ್ಹ ಫಲಾನುಭವಿಯ ಮನೆಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವುದು. ಈ ಕಾರ್ಯಕ್ರಮದಲ್ಲಿ 30 ಕೃತಕ ಕಾಲುಗಳನ್ನು ಫಲಾನುಭವಿಗಳಿಗೆ ಜೋಡಿಸಲಾಗಿದ್ದು, ಇದರೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿರುವ ಎಲ್ಲ ವಿಭಾಗಗಳಿಂದಲೂ ಆರೋಗ್ಯ ಉಚಿತ ತಪಾಸಣೆ ನಡೆಸಲಾಗಿದೆ ಎಂದರು .
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವೈದ್ಯಕೀಯ ವಿಜ್ಞಾನ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸೂಕ್ತ ವ್ಯಕ್ತಿಗಳನ್ನು ಹುಡುಕಿ ಅರ್ಹರಿಗೆ ಕೃತಕ ಕಾಲುಗಳ ಜೋಡಣೆ ಮಾಡಿ ಅವರಿಗೆ ಸಹಾಯ ಮಾಡಿರುವುದು ಉತ್ತಮವಾದ ವಿಚಾರವಾಗಿದೆ. ಇನ್ನು ಮುಂದೆಯು ಪ್ರತಿ ವರ್ಷ ಸಂಸ್ಥೆಯ ವತಿಯಿಂದ ಗ್ರಾಮೀಣ ಭಾಗದಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿ ಎಂದರು.
ಡಾ.ಮೇಚೀರ ಸುಭಾಸ್ ನಾಣಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಮತ್ತು ನಿರ್ದೇಶಕ ಡಾ.ಎಂ.ಜೆ.ಲೋಕೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ನಂಜುಂಡಯ್ಯ, ಕದನೂರು ಗ್ರಾ.ಪಂ.ಪಿಡಿಒ ಮಂಜುಳಾ, ಕೊಡಗು ಸ್ವಾಸ್ಥೃ ಸಂಸ್ಥೆ ನಿರ್ದೇಶಕಿ ಆರತಿ ಸೋಮಯ್ಯ , ನಿವೃತ್ತ ಶಿಕ್ಷಕರಾದ ಮಂಜುನಾಥ್, ಬ್ಲಾಕ್ ಮಹಿಳಾ ಅಧ್ಯಕ್ಷ ಕಾಳಮಾಂಡ ನಯನಾ ಜಗತ್, ಕುಂಡಚ್ಚಿರ ಮಂಜು ದೇವಯ್ಯ, ಜಗತ್, ಉದಯ, ಬಟ್ಟಕಾಲಂಡ ರಾಜ ದಿನೇಶ್, ಇತರರಿದ್ದರು.