ಸೋಮವಾರಪೇಟೆ ತಾಲೂಕಿನ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ದೇವರ ಮನೆ ಪ್ರತಿಷ್ಠಾಪನೆ ನಗರಳ್ಳಿಯ ಮೂಲ ದೇವಸ್ಥಾನ ಬನದಲ್ಲಿ ಜರುಗಿತು. ಬೋಪಯ್ಯ, ಜಗದೀಶ್, ಸುರೇಶ್ ಇದ್ದರು.
- ನಗರಳ್ಳಿಯ ಮೂಲ ದೇವಸ್ಥಾನ ಬನದಲ್ಲಿ ಪೂಜಾ ಕೈಂಕರ್ಯ
ಸೋಮವಾರಪೇಟೆ: ಸಮೀಪದ ನಗರಳ್ಳಿ ಗ್ರಾಮದ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ದೇವರ ಮನೆ ಪ್ರತಿಷ್ಠಾಪನೆ ನಗರಳ್ಳಿಯ ಮೂಲ ದೇವಸ್ಥಾನ ಬನದಲ್ಲಿ ಬುಧವಾರ ಜರುಗಿತು.
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಎರಡು ದಿನಗಳಿಂದ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಅಂತಿಮ ದಿನ ಪ್ರತಿಷ್ಠಾಪನೆ, ಬಿಂಬಶುದ್ಧಿ, ಕಲಾವೃದ್ಧಿ ಹೋಮ, ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಕೂತಿ, ಯಡದಂಟೆ, ನಗರಳ್ಳಿ, ಕುಂದಳ್ಳಿ, ಹೆಮ್ಮನಗದ್ದೆ ಸೇರಿದಂತೆ ಅನೇಕ ಗ್ರಾಮಗಳ ಗ್ರಾಮದೇವತೆಯಾಗಿರುವ ಶ್ರೀ ಸಬ್ಬಮ್ಮ ದೇವಿಯ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶೇಷ ಭಕ್ತಿ ಸಮರ್ಪಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಎನ್.ಬೋಪಯ್ಯ, ಗೌರವ ಅಧ್ಯಕ್ಷ ಕೆ.ಬಿ.ಜಗದೀಶ್, ಕಾರ್ಯದರ್ಶಿ ಕೆ.ಯು. ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್ ಸೇರಿದಂತೆ ಪ್ರಮುಖರು ಇದ್ದರು. ನಂತರ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಕೂತಿ ಗ್ರಾಮಾಭಿವೃದ್ಧಿ ಜಯರಾಮ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಮಾಜಿ ಅಧ್ಯಕ್ಷ ಕೆ.ಟಿ. ಜೋಯಪ್ಪ ಸೇರಿದಂತೆ ಸಮಿತಿ ಸದಸ್ಯರು ಇದ್ದರು.