ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕಾರ್ಯಾನುಭವ ಶಿಬಿರದ ಶಿಬಿರಾರ್ಥಿಗಳ ವತಿಯಿಂದ ಗ್ರಾಮಸ್ವಚ್ಛತೆ ನಡೆಯಿತು. ಬಿ.ಎಸ್.ದಿನೇಶ್, ಶೈಲೇಶ್, ವಸಂತ ಕಟ್ಟಿ, ರಕ್ಷಿತ್ ಇದ್ದರು.
ವಿರಾಜಪೇಟೆ : ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸಮರ್ಪಕವಾಗಿ ವಿಲೇವಾರಿ ಮಾಡಿ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಬೇಟೋಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಬಿ.ಎಸ್.ದಿನೇಶ್ ತಿಳಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕಾರ್ಯಾನುಭವ ಶಿಬಿರದ ಶಿಬಿರಾರ್ಥಿಗಳು, ಪುದುಪಾಡಿ ಅಯ್ಯಪ್ಪ ದೇವಾಲಯ, ಬೇಟೋಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆ ಎಂಬುದು ಇತರರಿಂದ ಹೇಳಿಸಿಕೊಂಡು ಕಲಿಯುವಂತದಲ್ಲ. ಮನೆಯಿಂದಲೇ ಕಸವನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದನ್ನು ತಿಳಿದವರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ಪ್ರಕೃತಿ ಹಾಳು ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ. ಆದಷ್ಟು ರಸ್ತೆಯ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ ಎಸೆಯಬಾರದು ಎಂಬ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದರು.
ನಂತರ ಶಿಬಿರಾರ್ಥಿಗಳು ಮಾಯಿಲ ಮಕ್ಕಿ ಜಂಕ್ಷನ್‌ನಿಂದ ಮೂಲೆ ಅಂಗಡಿ ಜಂಕ್ಷನ್ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಕಸ, ಪ್ಲಾಸ್ಟಿಕ್, ನೀರಿನ ಬಾಟಲ್, ಮದ್ಯದ ಬಾಟಲಿ, ತಿಂಡಿ ತಿನಿಸುಗಳ ಕವರ್ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಸದ ವಾಹನಕ್ಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಸಂತ ಕಟ್ಟಿ, ಶೈಲೇಶ್, ರಕ್ಷಿತ್ ಇದ್ದರು.