ಚೀಯಕಪೂವಂಡ ಕುಟುಂಬಸ್ಥರ ವತಿಯಿಂದ ಆಯೋಜಿಸಿದ್ದ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ (ಕೇರ್ ಬಲಿ ನಮ್ಮೆ) ಪಂದ್ಯಾವಳಿ ಉದ್ಘಾಟನೆ ವೇಳೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಕ್ರೀಡಾಕೂಟದ ವೆಬ್‌ಸೈಟ್ ಅನಾವರಣಗೊಳಿಸಿದರು. ಚೆಪ್ಪುಡಿರ ಅರುಣ್ ಮಾಚಯ್ಯ, ಪೊನ್ನೊಲತಂಡ ಕಿರಣ್ ಪೊನ್ನಪ್ಪ, ಚೀಯಕಪೂವಂಡ ಕೆ.ಬೋಪಣ್ಣ, ಮುಂಡಂಡ ನಾಣಯ್ಯ ಮತ್ತಿತರರು ಇದ್ದರು.  
ಕೊಡಗು

ಜಿಲ್ಲೆಯ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಭರವಸೆ
  • 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟಕ್ಕೆ ಚಾಲನೆ
ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದರೂ ಮೂಲಸಮಸ್ಯೆಗಳಿಂದ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲದಂತಾಗಿದೆ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.
ಇಲ್ಲಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಚೀಯಕಪೂವಂಡ ಕುಟುಂಬಸ್ಥರ ವತಿಯಿಂದ ಏರ್ಪಡಿಸಲಾದ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ (ಕೇರ್ ಬಲಿ ನಮ್ಮೆ) ಪಂದ್ಯಾವಳಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕೊಡಗಿನಲ್ಲಿ ಕ್ರೀಡಾಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಲಾಗುವುದು. ಹಾಕಿ ಮತ್ತು ಕ್ರಿಕೆಟ್‌ನಂತೆ ಹಗ್ಗಜಗ್ಗಾಟ ಪಂದ್ಯಾವಳಿ ಯಶಸ್ವಿಯಾಗಿ 5ನೇ ವರ್ಷಕ್ಕೆ ತಲುಪಿದೆ. ಮುಂದಿನ ವರ್ಷಗಳಲ್ಲಿ ಇದು ಕೂಡ ದಾಖಲೆ ಸೃಷ್ಟಿಸಲಿ. ಜಿಲ್ಲೆಯ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಮಾಡಲಾಗುತ್ತಿದೆ. ಪೊನ್ನಂಪೇಟೆಯಲ್ಲಿ ಬಾಲಕ -ಬಾಲಕಿಯರಿಗೆ ವಸತಿ ಶಾಲೆ, ಟರ್ಫ್ ಮೈದಾನದ ನವೀಕರಣಕ್ಕೆ 3.50 ಕೋಟಿ ರೂ. ವೆಚ್ಚ ಮಾಡಲಾಗುವುದು. ಅದರೊಂದಿಗೆ ಅಲ್ಲಿನ ಶೌಚಗೃಹ, ನೀರಿನ ಟ್ಯಾಂಕ್, ಮತ್ತಿತರ ಕಾಮಗಾರಿಗಳಿಗೆ ಸರ್ಕಾರದಿಂದ 3.50 ಕೋಟಿ ರೂ. ಮಂಜೂರು ಮಾಡಲಾಗಿದೆ. ಬಾಡಗ ಗ್ರಾಮದಲ್ಲಿ ಕ್ರೀಡಾ ಸಂಕೀರ್ಣಕ್ಕೆ 11.50 ಎಕರೆ ಜಾಗ ಗುರುತಿಸಲಾಗಿದ್ದು, ಸರ್ಕಾರದಿಂದ 30 ಕೋಟಿ ರೂ., ರಾಜ್ಯಸಭಾ ಸದಸ್ಯ ಅಜಯ್ ಮಕಾನ್ ಅವರ 15 ಕೋಟಿ ರೂ. ಅನುದಾನದಿಂದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕೊಡವರು ಶೌರ್ಯಕ್ಕೆ ಹೆಸರುವಾಸಿ. ಕೇರ್ ಬಲಿ ನಮ್ಮೆಯಲ್ಲಿ ತಾಕತ್ತು ಪ್ರದರ್ಶನವಾಗುತ್ತದೆ. ಎಲ್ಲ ಕ್ರೀಡೆಗಳಿಗೂ ತಾಕತ್ತು ಹಾಗೂ ಜಾಣ್ಮೆ ಬೇಕು. ಕೊಡಗು ಕ್ರೀಡೆಯ ತವರೂರು. ಆದರೆ, ಇಲ್ಲಿ ಕ್ರೀಡಾಭಿವೃದ್ಧಿಗೆ ಮೂಲಸೌಲಭ್ಯಗಳ ಕೊರತೆಯಿದೆ. ಇಲ್ಲಿ ಕ್ರೀಡಾ ಸಂಕೀರ್ಣದ ಅವಶ್ಯಕತೆಯಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನಹರಿಸಿ ಶಾಸಕರು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ, ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಸದಸ್ಯ ಚೀಯಕಪೂವಂಡ ಕೆ.ಬೋಪಣ್ಣ, ಚೀಯಕಪೂವಂಡ ಕುಟುಂಬದ ಪಟ್ಟೆದಾರ ಚಿಟ್ಟಿಯಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಕೆ.ಪಿ.ಎಸ್ ಶಾಲಾ ಪ್ರಾಂಶುಪಾಲೆ ಮೇದುರ ವಿಶಾಲ್, ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್, ಬೊಟ್ಟೋಳಂಡ ಗಣಪತಿ, ಚೆಟ್ಟಂಗಡ ರವಿ ಸುಬ್ಬಯ್ಯ, ಬಾಳೆಕುಟ್ಟಿರ ರಾಯಪ್ಪ ಮಂದಣ್ಣ, ಪೊನ್ನೊಲತಂಡ ಸೋಮಣ್ಣ, ಅಶೋಕ್ ಮತ್ತಿತರರು ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಟಗ್ ಆಫ್ ಅಕಾಡೆಮಿ ಹಾಗೂ 5 ವರ್ಷ ಹಗ್ಗಜಗ್ಗಾಟ ಪಂದ್ಯಾವಳಿಯ ಉಸ್ತುವಾರಿ ವಹಿಸಿದ ಕುಟುಂಬಗಳ ಧ್ವಜ ಆರೋಹಣ ನೆರವೇರಿಸಲಾಯಿತು. ಈಶ್ವರ ಇಗ್ಗುತ್ತಪ್ಪ ಎ ಮತ್ತು ಈಶ್ವರ ಇಗ್ಗುತಪ್ಪ ಬಿ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಈಶ್ವರ ಇಗ್ಗುತ್ತಪ್ಲ ಎ ತಂಡ ಜಯಶಾಲಿಯಾಯಿತು.
ಹಗ್ಗಜಗ್ಗಾಟ ಪಂದ್ಯಾಟದ ಪ್ರಯುಕ್ತ ನಾಪೋಕ್ಲು ಪಟ್ಟಣದ ಪೊನ್ನಾಡ್ ಸೂಪರ್ ಮಾರ್ಕೆಟ್ ಬಳಿಯಿಂದ ಪಂದ್ಯಾವಳಿ ನಡೆಯುವ ಕೆಪಿಎಸ್ ಶಾಲಾ ಮೈದಾನದವರೆಗೆ ಚೀಯಕಪೂವಂಡ ಕುಟುಂಬಸ್ಥರು ಸಾಂಪ್ರದಾಯಿಕ ಉಡುಗೆ, ತೊಡುಗೆ, ತಳಿಯಕ್ಕಿ ಬೊಳಕ್, ಓಲಗ ಮೂಲಕ ಮೆರವಣಿಗೆ ನಡೆಸಿ ಗಮನ ಸೆಳೆದರು.
ಮೆರವಣಿಗೆಯಲ್ಲಿ ಚೀಯಕಪೂವಂಡ ಮುತ್ತಪ್ಪ, ಬೋಪಣ್ಣ, ಜೋಯಪ್ಪ, ರಾಜಾ ಸೋಮಯ್ಯ ದುಡಿಕೊಟ್ಟ್ ಪಾಟ್ ಪ್ರದರ್ಶಿಸಿದರು. ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಉಪಾಧ್ಯಕ್ಷ ಚೀಯಕಪೂವಂಡ ಕಟ್ಟಿ ಮಂಜುನಾಥ್, ನವೀನ್ ನಾಚಪ್ಪ, ಸಿ.ಎ.ನಾಚಪ್ಪ, ಸತೀಶ್ ದೇವಯ್ಯ, ಸುನಿಲ್ ಮಾಚಯ್ಯ, ಸಚಿನ್ ಮುತ್ತಪ್ಪ, ಪ್ರಕಾಶ್ ಮಂದಣ್ಣ, ಸಚಿನ್ ಪೂವಯ್ಯ, ಶಂಭು ನಂಜಪ್ಪ ಇತರರು ಇದ್ದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕತ್ತಿಯಾಟ್, ಕೋಲಾಟ್ ನೃತ್ಯ ಪ್ರದರ್ಶನ ನಡೆಯಿತು.