ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಹಾಂತ ಸ್ವಾಮೀಜಿ, ಆರ್.ಐಶ್ವರ್ಯ, ಪ್ರೊ.ಅಶೋಕ್ ಸಂಗಪ್ಪ ಆಲೂರ, ಎಚ್.ವಿ.ಶಿವಪ್ಪ ಇತರರಿದ್ದರು. 
ಕೊಡಗು

ಬಸವಣ್ಣ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಬಸವಣ್ಣ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಿ
  • ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಹಾಂತ ಸ್ವಾಮೀಜಿ
ಮಡಿಕೇರಿ: ನಾಡಿನ ಸಾಂಸ್ಕೃತಿಕ ನಾಯಕ್ ಬಸವಣ್ಣ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ, ಸಹನೆ ಮತ್ತು ಸಹಬಾಳ್ವೆ ಬೆಳೆಯುತ್ತದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಸ್ತುತ ದಿನಮಾನದಲ್ಲಿ ನುಡಿದಂತೆ ನಡೆಯುವವರು ಕಡಿಮೆ. ಮತದಾರನಿಂದ ಆಡಳಿತ ನಡೆಸುವ ವರಗೆ ನುಡಿದಂತೆ ನಡೆಯುತ್ತಿಲ್ಲ ಎಂದು ಸ್ವಾಮೀಜಿ ಅವರು ಬೇಸರ ವ್ಯಕ್ತಪಡಿಸಿದರು.
ಬಸವ ಜಯಂತಿಯಂದು ಕಾಯಕ ಮಾಡಬೇಕು. ಅದನ್ನು ಬಿಟ್ಟು ರಜೆ ನೀಡಿದ್ದಾರೆ. ಕಾಯಕ ವೃತ್ತಿ ಮಾಡಿ ಬಸವಣ್ಣ ಅವರಿಗೆ ಗೌರವ ಸಲ್ಲಿಸಬೇಕು. ಅದನ್ನು ಬಿಟ್ಟು ರಜೆ ನೀಡುವುದು ಸರಿಯಲ್ಲ ಎಂದು ಮಹಾಂತ ಸ್ವಾಮೀಜಿ ಅವರು ಪ್ರತಿಪಾದಿಸಿದರು.
ಪ್ರತಿಯೊಬ್ಬರೂ ದುಡಿದು ಊಟ ಮಾಡಬೇಕು. ಮತ್ತೊಬ್ಬರ ಆಶ್ರಯ ಪಡಬಾರದು. ೨೫-೩೦ ವರ್ಷದ ನಂತರ ಅವರವರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ನುಡಿದ ಅವರು, ಎಲ್ಲರಲ್ಲಿಯೂ ನಡೆ, ನುಡಿ ಚೆನ್ನಾಗಿರಬೇಕು. ಬಸವಣ್ಣ ಅವರ ಮಾರ್ಗದರ್ಶನ ಮತ್ತು ಜೀವನ ಸಂದೇಶ ತಿಳಿದುಕೊಂಡು ನಡೆಯಬೇಕು ಎಂದರು.
ಬಸವಣ್ಣ ಅವರು ೧೨ನೇ ಶತಮಾನದಲ್ಲಿ ಎಲ್ಲಾ ಜನರನ್ನು ಅಪ್ಪಿಕೊಂಡು ಲಿಂಗ ದೀಕ್ಷೆ ನೀಡಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಆದರೆ, ಇಂದಿಗೂ ಜಾತಿ ವ್ಯವಸ್ಥೆ ತೊಲಗಿಲ್ಲ. ಅವರವರ ಜಾತಿ ಜನಾಂಗದ ಕಾರ್ಯಕ್ರಮದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿಂತಿಸಬೇಕಿದೆ ಎಂದರು.
ಅಂದು ಬಸವಣ್ಣ ಕಾಯಕ ಮತ್ತು ದಾಸೋಹಕ್ಕೆ ಒತ್ತು ನೀಡಿದ್ದರು, ಪ್ರಸ್ತುತ ೨೦-೨೧ನೇ ಶತಮಾನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ ಮತ್ತು ದಾಸೋಹಕ್ಕೆ ಹೆಚ್ಚಿನ ಗಮನ ನೀಡಿ, ಬಸವಣ್ಣ ಅವರಂತೆ ನುಡಿದಂತೆ ನಡೆದಿರುವುದು ಇತಿಹಾಸ ಎಂದು ಬಣ್ಣಿಸಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಮೊಬೈಲ್ ಬದಲು ವಚನ ಹೇಳಿಕೊಡಬೇಕು. ಬಸವ ವಚನ ತತ್ವ ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕ ಎಂದು ಸ್ವಾಮೀಜಿ ಅವರು ವಿವರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಬಸವಣ್ಣ ಅವರ ಚಿಂತನೆ ಮತ್ತು ಆದರ್ಶಗಳು ಸಾರ್ವಕಾಲಿಕವಾಗಿದ್ದು, ಎಲ್ಲೆಡೆ ಪಸರಿಸಿದೆ. ಜಗಜ್ಯೋತಿ ಬಸವೇಶ್ವರರು ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕರಾಗಿದ್ದು, ಒಂದು ಸಾವಿರ ವರ್ಷಗಳ ಹಿಂದೆಯೇ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಕಾಯಕಯೋಗಿ ಎಂದು ವರ್ಣಿಸಿದರು.
ಬಸವಣ್ಣ ಅವರು ಅನುಭವ ಮಂಟಪದ ಮೂಲಕ ಹೆಣ್ಣು ಮಕ್ಕಳೂ ಸೇರಿದಂತೆ ಎಲ್ಲರಿಗೂ ಸಮಾನತೆ, ಸರಳ ಬದುಕು ನಡೆಸುವುದನ್ನು ಹೇಳಿದ್ದಾರೆ. ತೋರಿಕೆಯ ಭಕ್ತಿಗಿಂತ, ಮನ ಮೆಚ್ಚುವ ರೀತಿ ನಡೆದುಕೊಳ್ಳಬೇಕು. ಸಮರ್ಪನಾ ಭಾವ ಇರಬೇಕು ಎಂದು ಬಸವೇಶ್ವರರು ಸಾರಿದ್ದಾರೆ ಎಂದು ನುಡಿದರು.
ಕೊಡಗು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಅವರು ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವೇಶ್ವರರು ಕಾಯಕ ಮತ್ತು ದಾಸೋಹದ ಮೂಲಕ ಸಮಾಜದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಬಸವ ಧರ್ಮದ ಚಿಂತನೆಗಳು, ಶರಣರ ಪರಂಪರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಬಸವಣ್ಣ ಅವರು ಸಮಾಜದಲ್ಲಿ ಪರಿವರ್ತನೆಗೆ ಶ್ರಮಿಸಿದ್ದಾರೆ. ನೈಜ ಸಮಾಜ ನಿರ್ಮಾಣ ಬಸವಣ್ಣ ಅವರ ಆಶಯವಾಗಿದೆ ಎಂದು ನುಡಿದರು.
ಪ್ರತಿಯೊಬ್ಬರಲ್ಲಿಯೂ ಅನ್ನ, ಅರಿವು ಇರಬೇಕು. ಆ ನಿಟ್ಟಿನಲ್ಲಿ ಬದುಕಬೇಕು. ಬಸವಣ್ಣ ಅವರು ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ದಯವಿಲ್ಲದ ಧರ್ಮ ಯಾವುದಯ್ಯ, ಅರಿವೇ ಗುರು ಎಂದು ಬಸವಣ್ಣ ಸಾರಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಚ್.ವಿ.ಶಿವಪ್ಪ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ತಹಶೀಲ್ದಾರರಾದ ಶ್ರೀಧರ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಸಾಂಭಶಿವಯ್ಯ, ತಾಲೂಕು ಘಟಕದ ಅಧ್ಯಕ್ಷರಾದ ರುದ್ರಪ್ರಸನ್ನ, ಮಧುಸೂದನ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಡಾ.ರವಿಕಿರಣ, ಡಾ.ರವಿಶಂಕರ, ವೆಂಕಟೇಶ, ಭಾಸ್ಕರ ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರೆ, ಶಿಕ್ಷಕರಾದ ಬಸವರಾಜು ಮತ್ತು ಬಿ.ಸಿ.ಶಂಕ್ರಯ್ಯ ತಂಡದವರು ನಾಡಗೀತೆ ಹಾಡಿದರು. ಮಂಜು ಭಾರ್ಗವಿ ತಂಡದವರು ವಚನ ಗಾಯನ ಹಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಕೋಟೆ ಆವರಣದಿಂದ ಗಾಂಧಿ ಭವನದ ವರಗೆ ಮೆರವಣಿಗೆ ನಡೆಯಿತು. ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ ತಂಡದ ಕಲಾವಿದರು ಪಾಲ್ಗೊಂಡು ಗಮನ ಸೆಳೆದರು.