ನೆಲ್ಯಹುದಿಕೇರಿಯ ಜುಮ್ಮಾ ಮಸೀದಿ ನೇತೃತ್ವದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಈ ಪ್ರಕ್ರಿಯೆಯಲ್ಲಿ ಮತದಾರರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು. 
ಕೊಡಗು

ಪರಿಷ್ಕರಣೆಗೆ ಅರ್ಹ ಮತದಾರರು ಭಾಗವಹಿಸುವುದು ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ನೆಲ್ಯಹುದಿಕೇರಿಯಲ್ಲಿ ಎಸ್‌ಐಆರ್ ಮಾಹಿತಿ ಕಾರ್ಯಾಗಾರ
ಸಿದ್ದಾಪುರ: ನೆಲ್ಯಹುದಿಕೇರಿಯ ಜುಮ್ಮಾ ಮಸೀದಿ ನೇತೃತ್ವದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಈ ಪ್ರಕ್ರಿಯೆಯಲ್ಲಿ ಮತದಾರರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೋಮವಾರ ಸಂಜೆ ಮಾಹಿತಿ ಕಾರ್ಯಾಗಾರ ನಡೆಯಿತು.
ಅಡ್ವೊಕೇಟ್ ತಾಹಿರ್ ಹುಸೈನ್ ಮಾತನಾಡಿ, ಎಲ್ಲ ಅರ್ಹ ಮತದಾರರು ಸಕ್ರಿಯವಾಗಿ ಭಾಗವಹಿಸುವುದು ಅಗತ್ಯವಾಗಿದ್ದು, ಅರ್ಜಿ ಸಲ್ಲಿಸುವ ವೇಳೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆಗಾಗಿ ವಿಶೇಷ ಅರ್ಜಿ ನಮೂನೆಯನ್ನು ಸಿದ್ಧಪಡಿಸಿದ್ದು, ಅದನ್ನು ಬೂತ್ ಲೆವೆಲ್ ಅಧಿಕಾರಿ ಮೂಲಕ ಮತದಾರರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು. 2002ರ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿಯನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ ಅಂಟಿಸಿ ಸಲ್ಲಿಸಬೇಕಾಗಿದೆ ಎಂದು ಹೇಳಿದರು.
ಅರ್ಜಿಯ ಒಂದು ಪ್ರತಿಯನ್ನು ಬಿಎಲ್‌ಒ ಅವರಿಗೆ ಸಲ್ಲಿಸಿ, ಮತ್ತೊಂದು ಪ್ರತಿಗೆ ಅಧಿಕಾರಿಯ ರುಜುವಾತು ಪಡೆದು ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದರು. ಆಯೋಗದಿಂದ ನೀಡಲಾಗುವ ಅರ್ಜಿ ಒಂದೇ ಪ್ರತಿಯಲ್ಲಿ ಲಭ್ಯವಾಗುವ ಕಾರಣ, ಮೊದಲು ಅದರ ಜೆರಾಕ್ಸ್ ಪ್ರತಿಯನ್ನು ಪಡೆದು ಅದರಲ್ಲಿ ಮಾಹಿತಿ ಭರ್ತಿ ಮಾಡಿ ಪರಿಶೀಲಿಸಿದ ನಂತರ ಮೂಲ ಅರ್ಜಿಯಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ಮಾಹಿತಿ ನಮೂದಿಸುವುದು ಒಳಿತು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಸ್ಥಳೀಯ ಧಾರ್ಮಿಕ ಮುಖಂಡರು, ಸಾರ್ವಜನಿಕರು ಹಾಗೂ ಮತದಾರರು ಭಾಗವಹಿಸಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಸ್ಪಷ್ಟನೆ ಪಡೆದರು.