ಸಿದ್ದಾಪುರ ಸಮೀಪದ ಪಳ್ಳಕೆರೆ ಹಾಗೂ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಾಣಿಸಿಕೊಂದಿರುವ ಕಾಡಾನೆ ಹಿಂಡು.
ಸಿದ್ದಾಪುರ : ಅರೆಕಾಡು ಪ್ರದೇಶದಿಂದ ಕಾವೇರಿ ನದಿ ದಾಟಿ ಬಂದಿರುವ 17ಕ್ಕೂ ಹೆಚ್ಚು ಕಾಡಾನೆಗಳು ಶುಕ್ರವಾರ ಪಳ್ಳಕೆರೆ ಹಾಗೂ ಸುತ್ತಮುತ್ತಲ ಕಾಫಿ ತೋಟಗಳಿಗೆ ನುಗ್ಗಿ ಫಸಲು ತಿಂದು ಆತಂಕ ಸೃಷ್ಟಿಸಿವೆ.
ಇತ್ತೀಚೆಗಷ್ಟೇ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಪಳ್ಳಕೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ 20ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮತ್ತೆ ಇದೇ ಭಾಗಕ್ಕೆ ದಾಳಿ ಇಟ್ಟಿರುವ ಕಾಡಾನೆಗಳ ಹಿಂಡು ಕಾಫಿ, ಅಡಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಮಾಡಿ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಉಂಟುಮಾಡಿವೆ. ಆನೆಗಳ ನಿರಂತರ ಓಡಾಟದಿಂದ ಗ್ರಾಮಸ್ಥರು ರಾತ್ರಿ ವೇಳೆ ಹೊರಗೆ ಸಂಚರಿಸಲು ಭಯಪಡುವ ಸ್ಥಿತಿ ಎದುರಾಗಿದೆ.
ಈ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯನ್ನು ಸಮಗ್ರವಾಗಿ ನಡೆಸದ ಕಾರಣ ಆನೆಗಳು ಮತ್ತೆ ಅದೇ ಪ್ರದೇಶಗಳಿಗೆ ಮರಳುತ್ತಿವೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ವಿಫಲವಾಗಿದೆ ಎಂದು ದೂರಿದ್ದಾರೆ. ಜನರ ಹಾಗೂ ರೈತರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.