2023 ರ ಜೂನ್ 25ರಂದು ಅಮ್ಮತ್ತಿಯ ಒಂಟಿ ಅಂಗಡಿ ಸಮೀಪ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದ 32 ವರ್ಷದ ದಕ್ಷ ಎಂಬ ಪುಂಡಾನೆ
ಅರಣ್ಯ ಇಲಾಖೆ ಲಕ್ಷಾಂತರ ರೂ. ವೆಚ್ಚ ಮಾಡಿ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದ 32 ವರ್ಷದ ದಕ್ಷ ಎಂಬ ಪುಂಡಾನೆ ಈ ಹಿಂದೆ ಕೊಡಗಿಗೆ ಮರಳಿತ್ತು. ಇದೀಗ ಈ ಆನೆ ಮತ್ತೆ ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ.
ಸೋಮವಾರ ಸಿದ್ದಾಪುರ ಸಮೀಪದ ಶಿಲ್ಪಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಪುರುಲಿಯಾ ಮೂಲದ ಕಾರ್ಮಿಕ ಗೋಪಾಲ್ ಬಾವೂರಿ (44) ಅವರ ಮೇಲೆ ದಕ್ಷ ಕಾಡಾನೆ ಕಾರ್ಮಿಕರ ಎದುರೇ ದಾಳಿ ಮಾಡಿದೆ ಹಾಗೂ ಸಿದ್ದಾಪುರ, ಮಾಲ್ದಾರೆ, ಅಮ್ಮತ್ತಿ, ನೆಲ್ಯಹುದಿಕೇರಿ, ಕರಡಿಗೋಡು, ಅರೆಕಾಡು ಸೇರಿದಂತೆ ಹಲವು ಗ್ರಾಮಗಳ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿರಾಜಪೇಟೆ ವಲಯದ ಅಮ್ಮತ್ತಿ ಶಾಖೆ ವ್ಯಾಪ್ತಿಯಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಈ ಒಂಟಿ ಸಲಗವನ್ನು 2023ರ ಜೂನ್ 25ರಂದು ಅಮ್ಮತ್ತಿಯ ಒಂಟಿ ಅಂಗಡಿ ಸಮೀಪ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿತ್ತು. ಬಳಿಕ ಆನೆಗೆ ರೇಡಿಯೋ ಕಾಲರ್ ಅಳವಡಿಸಿ, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ವ್ಯಾಪ್ತಿಯ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ದಕ್ಷ ಮತ್ತೆ ಕೊಡಗಿನತ್ತ ವಾಪಸಾಗಿರುವುದು ಅರಣ್ಯ ಇಲಾಖೆಯ ಕಾರ್ಯವೈಖರಿ ಹಾಗೂ ಆನೆಗಳ ಸ್ಥಳಾಂತರದ ಕಾರ್ಯದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.
ರೇಡಿಯೋ ಕಾಲರ್ ಅಳವಡಿಸಿರುವ ದಕ್ಷ ಆನೆ ಇದೀಗ ಮತ್ತೆ ತೋಟಗಳು, ಲೈನ್‌ಮನೆಗಳು ಹಾಗೂ ಜನನಿಬಿಡ ಪ್ರದೇಶಗಳಿಗೆ ನುಗ್ಗುತ್ತಿದೆ. ತೋಟಗಳಲ್ಲಿರುವ ಸೌರ ವಿದ್ಯುತ್ ಬೇಲಿಗಳನ್ನು ಮುರಿದು ಒಳನುಗ್ಗುತ್ತಿರುವ ಆನೆ, ಬೆಳಗಿನ ಜಾವ ಕೆಲಸಕ್ಕೆ ತೆರಳುವ ಕಾರ್ಮಿಕರನ್ನು ಅಟ್ಟಿಸಿಕೊಂಡು ಹೋಗಿ ಭಯ ಹುಟ್ಟಿಸುತ್ತಿದೆ. ಮನೆಗಳ ಸಮೀಪವೂ ಸಂಚರಿಸುತ್ತಿರುವುದರಿಂದ ಗ್ರಾಮಸ್ಥರು ಜೀವಭಯದಲ್ಲೇ ದಿನ ಕಳೆಯುವಂತಾಗಿದೆ. ಆನೆಗೆ ಜನರ ಭಯವೇ ಇಲ್ಲದಂತಿದ್ದು ಎದುರಿಗೆ ಸಿಕ್ಕವರನ್ನು ಹಿಂಬಾಲಿಸಿ ದಾಳಿ ಮಾಡಲು ಮುಂದಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈಗಾಗಲೇ ಈ ಆನೆಯ ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಒಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಮಿಕರು ಎದುರಿಗಿದ್ದ ಸಂದರ್ಭದಲ್ಲೇ ದಾಳಿ ನಡೆದಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಈ ಭಾಗದಲ್ಲಿ ಮತ್ತೆ ಕಾಡಾನೆ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಉಪಟಳ ನೀಡುತ್ತಿರುವ ದಕ್ಷ ಆನೆಯ ಬದಲಿಗೆ ಬೇರೆ ಯಾವುದೇ ಆನೆಯನ್ನು ಸೆರೆಹಿಡಿದು ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ರೇಡಿಯೋ ಕಾಲರ್ ಹೊಂದಿರುವ ದಕ್ಷ ಆನೆಯೇ ಈ ಭಾಗದಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದು ಜನರಿಗೆ ಅಪಾಯ ಉಂಟುಮಾಡುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿ, ಬೇರೆ ಯಾವುದೇ ಆನೆಯನ್ನು ಹಿಡಿಯದೆ, ಉಪಟಳ ನೀಡುತ್ತಿರುವ ದಕ್ಷ ಆನೆಯನ್ನೇ ತಕ್ಷಣ ಸೆರೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.