ಸುನಿಲ್ ಕುಮಾರ್ ಮಿಲನ್ ಪೂಜಾರಿ 
ಕೊಡಗು

ಯುವ ಸ್ಪಂದನ ಯೂತ್ ಫೌಂಡೇಶನ್‌ಗೆ ಪದಾಧಿಕಾರಿಗಳ ಆಯ್ಕೆ

ಮಡಿಕೇರಿ:
ಕಳೆದ 7 ವರ್ಷಗಳಿಂದ "ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ" ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಡಿಕೇರಿ ತಾಲೂಕು ಹಾಕತ್ತೂರು ಗ್ರಾಮದ ಸಾಮಾಜಿಕ ಸೇವಾ ಸಂಸ್ಥೆ ಯುವ ಸ್ಪಂದನ ಯೂತ್ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಭಾನುವಾರ ನಡೆದಿದ್ದು, ಅಧ್ಯಕ್ಷರಾಗಿ ಕೆ.ಎಸ್. ಸುನಿಲ್ ಕುಮಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಬಿ.ಎಸ್. ಮಿಲನ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಪೊನ್ನಪ್ಪ (ಅಣ್ಣು) ಆಯ್ಕೆಯಾದರು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಕೆ.ಎಸ್. ಸುನಿಲ್ ಕುಮಾರ್ ಮಾತನಾಡಿ ನೂತನವಾಗಿ ಆಯ್ಕೆಯಾದ ಉತ್ಸಾಹಿ ಯುವ ಪದಾಧಿಕಾರಿಗಳ ತಂಡ ಮುಂಬರುವ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವ ದೃಢ ಸಂಕಲ್ಪ ಹೊಂದಿದೆ.
ಈ ಫೌಂಡೇಶನ್ ಕಳೆದ 7 ವರ್ಷಗಳಿಂದ ಹಾಕತ್ತೂರು ಹಾಗೂ ಸುತ್ತಮುತ್ತಲಿನ ಅನೇಕ ನೊಂದ ಜೀವಗಳಿಗೆ ಆಸರೆಯಾಗುತ್ತಾ ಬಂದಿದೆ. ಸುಮಾರು 30ಕ್ಕೂ ಹೆಚ್ಚು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ, ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡುತ್ತಿದೆ. ಬಡ ಹಾಗೂ ಅರ್ಹ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಆರ್ಥಿಕ ಸಹಕಾರ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಿದೆ.
ಪ್ರತಿ ವರ್ಷ ಆಯೋಜಿಸುವ ಕ್ರೀಡಾಕೂಟಗಳಿಂದ ಬರುವ ಸಂಪೂರ್ಣ ಲಾಭಾಂಶವನ್ನು ಸಮಾಜದ ತುರ್ತು ಅಗತ್ಯವಿರುವ ಜನರ ಕಣ್ಣೀರು ಒರೆಸಲು ಬಳಸುತ್ತಾ ಬಂದಿರುವುದು ಈ ಸಂಘಟನೆಯ ವಿಶೇಷತೆಯಾಗಿದೆ. ದಾನಿಗಳ ಉದಾರ ಸಹಕಾರ ಹಾಗೂ ಕಾರ್ಯಕರ್ತರ ನಿಸ್ವಾರ್ಥ ಶ್ರಮದಿಂದ ಇಂದು ಈ ಸಂಸ್ಥೆ ಸಮಾಜದ ಭರವಸೆಯ ಆಶಾಕಿರಣವಾಗಿ ಬೆಳೆದು ನಿಂತಿದೆ ಎಂದರು.