ಸೋಮವಾರಪೇಟೆ ಸಮೀಪದ ಬಜೆಗುಂಡಿ ಗ್ರಾಮದಲ್ಲಿ ನಡೆದ ಈದ್ ಮಿಲಾದ್ ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಮಾತನಾಡಿದರು. ಯಾಕೂಬ್, ನೌಷಾದ್ ಫೌಜಿ, ಶಮೀರ್ ಫೌಜಿ ಇದ್ದರು. 
ಕೊಡಗು

ಮಾನವೀಯತೆ ಸಾರುವ ಈದ್ ಮಿಲಾದ್

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಮಂತರ್‌ಗೌಡ ಬಣ್ಣನೆ

ಸೋಮವಾರಪೇಟೆ:

ಈದ್ ಮಿಲಾದ್ ಪ್ರೀತಿ, ಶಾಂತಿ, ಸಹನೆ, ಮಾನವೀಯತೆ ಮತ್ತು ಸಹೋದರತ್ವದ ಸಂದೇಶ ನೆನಪಿಸುವ ಮಹತ್ವದ ದಿನವಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಸಮೀಪದ ಬಜೆಗುಂಡಿ ಗ್ರಾಮದ ಖಿಳಾರಿಯ ಮಸೀದಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯರು ಪರಸ್ಪರ ಗೌರವದಿಂದ, ಯಾವುದೇ ಭೇದಭಾವವಿಲ್ಲದೆ ಬದುಕಬೇಕು ಎಂಬ ಸಂದೇಶ ಹಬ್ಬದ ನಿಜವಾದ ಆಶಯವಾಗಿದೆ. ನಮ್ಮ ದೇಶದ ವೈವಿಧ್ಯದಲ್ಲಿ ಏಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಇಂತಹ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ, ಅವರ ಜೀವನವನ್ನು ಅವರು ಮುನ್ನಡೆಸುವಂತಾದಾಗ ಅವರಿಗೆ ಮದುವೆ ಮಾಡಿದಲ್ಲಿ ಅವರ ಜೀವನ ಸುಗಮವಾಗಿ ನಡೆಯುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮಸೀದಿಯ ಅಭಿವೃದ್ಧಿಗೆ 10 ಲಕ್ಷ ರೂ.ಗಳನ್ನು ಶಾಸಕರ ನಿಧಿಯಿಂದ ನೀಡಲಾಗುವುದು. ಖಬರಸ್ತಾನಕ್ಕೆ ಸ್ಥಳ ಮೀಸಲಿಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಖಿಳಾರಿಯ ಮಸೀದಿ ಅಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ಈದ್ ಮಿಲಾದ್ ಎಂದರೆ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಸ್ಮರಿಸುವ ಪವಿತ್ರ ದಿನ. ಇದು ಕೇವಲ ಹಬ್ಬದ ಆಚರಣೆಯಲ್ಲ. ಪ್ರವಾದಿ ಮೊಹಮ್ಮದ್ ಅವರು ತಮ್ಮ ಜೀವನದ ಮೂಲಕ ಸತ್ಯ, ನ್ಯಾಯ, ದಯೆ, ಕ್ಷಮೆ ಮತ್ತು ಬಡವರ ಬಗ್ಗೆ ಕಾಳಜಿ ವಹಿಸುವ ಮಹತ್ವವನ್ನು ಸಾರಿದ್ದಾರೆ ಎಂದರು.
ಕಾರ್ಯಕ್ರಮವನ್ನು ಮಸೀದಿಯ ಧರ್ಮಗುರುಗಳಾದ ನೌಷಾದ್ ಫೌಜಿ ಉದ್ಘಾಟಿಸಿದರು. ಧರ್ಮಗುರು ಶಮೀರ್ ಫೌಜಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಆರ್‌ಟಿಒ ಆಲಿ ಹುಸೇನ್, ಈಚೆಗೆ ನೇಪಾಳದಲ್ಲಿ ನಡೆದ ಕರಾಟೆಯಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಾದ ಅಫೀಜ್ ಮತ್ತು ಯಾಸಿನ್, ಸಮಾಜದ ಮಹಮ್ಮದ್ ಇಸಾನ್, ಕೆ.ಎಂ.ಸುಲೈಮಾನ್, ನಿಯಾಜ್, ಇಬ್ರಾಹಿಂ, ಬೀರಾನ್ ಕುಟ್ಟಿ, ಅನಿಫ್, ಕೆ.ಎಸ್. ಅಬ್ಬಾಸ್, ರಷೀದ್, ಮುನೀರ್, ಮುಸ್ತಾಫ, ನಾಸೀರ್, ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.