ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್‌ನಲ್ಲಿ ನಡೆದ ೨೦೨೬-೨೭ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮವನ್ನು ಸಂಜೀವ್ ಕುಮಾರ್ ಉದ್ಘಾಟಿಸಿದರು. ಪ್ರೊ.ಮೇಜರ್ ರಾಘವ.ಬಿ, ಡಾ.ಶ್ರೀಧರ್ ಹೆಗಡೆ ಇತರರಿದ್ದರು.
- ಶಿಕ್ಷಣವೇ ಪ್ರತಿಯೊಬ್ಬರ ಜೀವನದ ಬುನಾದಿ
ಮಡಿಕೇರಿ: ಶಿಕ್ಷಣವೇ ಪ್ರತಿಯೊಬ್ಬರ ಜೀವನದ ಬುನಾದಿಯಾಗಿರುತ್ತದೆ. ಉನ್ನತ ಶಿಕ್ಷಣವನ್ನು ಪಡೆಯುವುದರಿಂದ ಉತ್ತಮ ಜೀವನವನ್ನು ಸಾಗಿಸಬಹುದಾಗಿದೆ ಎಂದು ಮಡಿಕೇರಿಯ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂಜೀವ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್‌ನಲ್ಲಿ ನಡೆದ ೨೦೨೬-೨೭ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಉನ್ನತ ಶಿಕ್ಷಣದಿಂದಲೇ ಉತ್ತಮ ಜೀವನವನ್ನು ಸಾಗಿಸಬಹುದು ಎನ್ನುವುದನ್ನು ಮನಗೊಂಡು ಎಲ್ಲಾ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಯುವ ಸಮೂಹ ೨೧ ವರ್ಷದವರೆಗೆ ಉತ್ತಮ ಶಿಕ್ಷಣವನ್ನು ಪಡೆದು, ೨೧ ರಿಂದ ೪೦ ವರ್ಷದವರೆಗೆ ಉದ್ಯೋಗದಲ್ಲಿ ಒಳ್ಳೆಯ ಸಾಧನೆ ಮಾಡಬೇಕು. ಈ ಸಾಧನೆಯಿಂದ ೪೦ ರಿಂದ ೬೦ನೇ ವರ್ಷದವರೆಗೆ ಜವಾಬ್ದಾರಿಯುತ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಆದ್ದರಿಂದ ಪದವಿ ಶಿಕ್ಷಣವನ್ನು ಶ್ರೇಷ್ಠ ರೀತಿಯಲ್ಲಿ ಪಡೆಯುವ ಮೂಲಕ ಉತ್ತಮ ಜೀವನ ನಡೆಸುವಂತೆ ಕರ್ನಲ್ ಸಂಜೀವ್ ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್‌ನ ಪ್ರಾಂಶುಪಾಲ ಪ್ರೊ.ಮೇಜರ್ ರಾಘವ.ಬಿ ಅವರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಬೇಕು. ಈ ಗುರಿಯನ್ನು ತಲುಪಿಸಲು ಕಾಲೇಜ್‌ನ ಗುರುಗಳು ವಿದ್ಯಾರ್ಥಿಗಳ ಬೆನ್ನ ಹಿಂದೆ ಇರುತ್ತಾರೆ ಎಂದರು.
ಶಿಕ್ಷಣ ಎಂಬುವುದು ಜೀವನದ ಒಂದು ಪ್ರಮುಖ ಅಸ್ತ್ರವಾಗಿದೆ, ಇದನ್ನು ತಮ್ಮ ಅಭ್ಯುದಯ ಮತ್ತು ದೇಶದ ಪ್ರಗತಿಗಾಗಿ ಬಳಸಬೇಕೆಂದು ಕಿವಿಮಾತು ಹೇಳಿದ ಅವರು, ಕಾರ್ಯಪ್ಪ ಕಾಲೇಜ್ ನ ಸಾಧನೆ ಮತ್ತು ಇಲ್ಲಿರುವ ಅಗತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಧ್ಯಾಪಕರಾದ ಡಾ.ತಿಪ್ಪೇಸ್ವಾಮಿ, ಡಾ.ಶ್ರೀಧರ್ ಹೆಗಡೆ, ಎಂ.ಎನ್.ರವಿಶಂಕರ್, ಡಾ.ಕೆ.ಪಿ.ನಾಗರಾಜ್, ಡಾ.ಸಿ.ವಿಜಯಲತ, ಡಾ.ನಯನ ಕಶ್ಯಪ್, ಡಾ.ಬಿ.ಎಸ್.ತಳವಾರ, ಡಾ.ಶೈಲಶ್ರೀ ಹಾಗೂ ಎನ್‌ಸಿಸಿ ಸುಬೇದಾರ್ ಮೇಜರ್ ಪಿ.ಸಿಜು ಅವರು ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಆಧಾರಿತ ಮಾಹಿತಿ ನೀಡಿದರು.
ಕಾಲೇಜು ಸಿಬ್ಬಂದಿ ಜಿ.ಚಂದ್ರಾವತಿ, ಡಾ.ಹೆಚ್.ಕೆ ರೇಣುಶ್ರೀ, ಡಾ.ಶ್ರೀಧರ್ ಹೆಗಡೆ ಹಾಗೂ ಕಾಲೇಜ್‌ನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.