೧೦ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ತೋರಿದ ಜಿಲ್ಲೆಯ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ಧನ ವಿತರಿಸಲಾಯಿತು. ಅರ್ಜುನ್ ಮೌರ್ಯ, ಡಾ.ಗುರುಸ್ವಾಮಿ, ಸಯಿದಾ ಕಶ್ಮೀರ ಸಿಮ್ರಾನ್ ಇತರರಿದ್ದರು.
- ಶ್ರೇಷ್ಠ ಅಂಕಗಳಿಂದ ಜೀವನ ನಿರ್ಧರಿಸಲು ಸಾಧ್ಯವಿಲ್ಲ್ಲ
- ಉಮ್ಮತ್‌ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಶಿಕ್ಷಣ ಮೇಳದಲ್ಲಿ ಅರ್ಜುನ್ ಮೌರ್ಯ
ಮಡಿಕೇರಿ: ಶ್ರೇಷ್ಠ ಅಂಕಗಳಿಂದ ಮಾತ್ರವೇ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಒಂದು ಬದುಕಿದೆ ಎಂಬುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅರಿತುಕೊಳ್ಳಬೇಕು. ಜೀವನ ಕೇವಲ ಅಂಕಗಳಿಗೆ ಸೀಮಿತವಾಗಬಾರದು ಎಂದು ಲೇಖಕ ಹಾಗೂ ಪ್ರಾಧ್ಯಾಪಕ ಅರ್ಜುನ್ ಮೌರ್ಯ ಸಲಹೆ ನೀಡಿದರು.
ಉಮ್ಮತ್‌ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಶಿಕ್ಷಣ ಮೇಳ, ಪ್ರತಿಭಾ ಪುರಸ್ಕಾರ, ೧೦ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.೧೦೦ರಷ್ಟು ಸಾಧನೆ ಮಾಡಿದ ಶಾಲಾ ಕಾಲೇಜುಗಳ ಪ್ರಾಂಶುಪಾಲರನ್ನು, ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳ ಜೊತೆಯಲ್ಲಿಯೇ ಸವಾಲುಗಳಿವೆ. ಅವುಗಳ ಬಗ್ಗೆಯೂ ಜವಾಬ್ದಾರಿ ವಹಿಸಬೇಕು. ಶಿಕ್ಷಣ ಮಾತ್ರವೇ ವ್ಯಕ್ತಿಯ ಧರ್ಮವನ್ನು ನಿರ್ಧರಿಸುತ್ತದೆಯೇ ಹೊರತು, ಚೌಕಟ್ಟಿನ ಧರ್ಮ ಶಿಕ್ಷಣವನ್ನು ನಿರ್ಧರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪೋಷಕರ ನಿರೀಕ್ಷೆಗಳ ಮೇಲೆ ಕಲ್ಲು ಎತ್ತಿ ಹಾಕುವ ಕೆಲಸ ಮಾಡಬಾರದು. ಇಂದು ಶಿಕ್ಷಣ ಕ್ಷೇತ್ರ ಕೂಡ ಮಾಫಿಯಾದಲ್ಲಿ ಸಿಲುಕಿಕೊಂಡಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕಿನ ಕುರಿತು ಮಾರ್ಗದರ್ಶನ ಮಾಡುವಲ್ಲಿ ಬೋಧಕ ವರ್ಗ ಕೂಡ ಎಡವುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡ್ಲಿಪೇಟೆಯ ಎಪಿಜೆ ಅಬ್ದುಲ್ ಕಲಾಂ ಶಾಲೆಯ ಪ್ರಾಂಶುಪಾಲ ಡಾ.ಗುರುಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಹಲವು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಸಾಧನೆ ಮಾಡಬೇಕು ಎಂದ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಹಲವು ಶಾಲಾ ಕಾಲೇಜುಗಳಿದ್ದು, ಬಡ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಇದೀಗ ಸಿಬಿಎಸ್‌ಸಿ ಶಿಕ್ಷಣವನ್ನು ಕೂಡ ಜಾರಿಗೆ ತರಲಾಗಿದೆ. ಕುಶಾಲನಗರದಲ್ಲೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಮಹಿಳಾ ಕಾಲೇಜು ಆರಂಭಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ನ್ಯಾಯಾಧೀಶೆ ಸಯಿದಾ ಕಶ್ಮೀರ ಸಿಮ್ರಾನ್ ಮಾತನಾಡಿ, ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಬದುಕು ಕಟ್ಟಿಕೊಳ್ಳಲು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಅದರಲ್ಲೂ ಹೆಣ್ಣಿಗೆ ಶಿಕ್ಷಣವೇ ಅತೀ ಮುಖ್ಯವಾಗಿದ್ದು, ಈ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಉಮ್ಮತ್ ಒನ್ ಕೊಡಗು ಸಂಸ್ಥೆ ಮೂಲಕ ನ್ಯಾಯಾಧೀಶೆ ಸಯಿದಾ ಕಶ್ಮೀರ ಸಿಮ್ರಾನ್, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಮೈಸೂರಿನ ಉದ್ಯಮಿ ಸಿದ್ದಿಕ್ ಹಂಸ ಹಾಗೂ ಸಿವಿಲ್ ಇಂಜಿನಿಯರ್ ಅಲ್ಫೀಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಪುಣೆಯ ಅನೀಸ್ ಡಿಫೆನ್ಸ್ ಕೆರಿಯರ್ ಇನ್ಸಿಟ್ಯೂಟ್ ಸಂಸ್ಥಾಪಕ ಅನೀಸ್ ಕುಟ್ಟಿ ಹಾಗೂ ವೃತ್ತಿ ಮಾರ್ಗದರ್ಶಕರು ಮತ್ತು ಪ್ರೇರಕ ಭಾಷಣಕಾರ ರಫೀಕ್ ಮಾಸ್ಟರ್ ಅವರುಗಳು ಶೈಕ್ಷಣಿಕ ವಲಯದಲ್ಲಿರುವ ಅವಕಾಶ, ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಯಾಗುವ ಬಗೆ, ವೃತ್ತಿ ಶಿಕ್ಷಣ, ಸರಕಾರದ ಸೌಲಭ್ಯಗಳು, ಉದ್ಯೋಗಾವಕಾಶ ಮತ್ತಿತ್ತರ ವಿಚಾರಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಿದರು.
ಉಮ್ಮತ್ ಒನ್ ಸಂಸ್ಥೆಯ ಪ್ರಮುಖರಾದ ಎಂ.ಎಂ.ಹಾರೂನ್, ಸಿಇಓ ತನ್ವೀರ್, ಅಬ್ದುಲ್ ಮಜೀದ್, ಖಾಲಿದ್ ಹಾಕತ್ತೂರು, ಅಬ್ದುಲ್ ಲತೀಫ್, ನಿಸಾರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
೧೦ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ತೋರಿದ ಜಿಲ್ಲೆಯ ಐವರು ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ಧನ ವಿತರಿಸಿದರು. ಇದೇ ವೇಳೆ ಜಿಲ್ಲೆಯ ೨೦೦ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿಗೆ ಪ್ರೋತ್ಸಾಗ ಧನ ವಿತರಿಸಲಾಯಿತು. ೧೦ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.೧೦೦ ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದ ಜಿಲ್ಲೆಯ ಒಟ್ಟು ೪೭ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಪ್ರಾಂಶುಪಾಲರನ್ನು ಸನ್ಮಾನಿಸಿ, ಗೌರವಿಸಲಾಯಿತು.