ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ಪ್ರತಿಷ್ಠಿತ ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಈ ಬಾರಿ ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ರಚಿಸಿದ ವೈದ್ಯ ಕಂಡ ವಿಸ್ಮಯ ವಿಭಿನ್ನ ವಿಶ್ವದ ಇಣುಕು ನೋಟ ಕೃತಿಗೆ ಲಭಿಸಿದೆ. ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕ ಬಿ.ಎಸ್. ಗೋಪಾಲಕೃಷ್ಣ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ದ್ವಿತೀಯ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂವರು ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಅತಿ ಹೆಚ್ಚು ಅಂಕ ಪಡೆದ ವೈದ್ಯ ಕಂಡ ವಿಸ್ಮಯ ವಿಭಿನ್ನ ವಿಶ್ವದ ಇಣುಕು ನೋಟ ಕೃತಿಂiÀನ್ನು ಆಯ್ಕೆ ಮಾಡಲಾಗಿದೆ.
ಡಾ. ಕೆ.ಬಿ. ಸೂರ್ಯಕುಮಾರ್ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷಗಳ ಕಾಲ ವೈದ್ಯಕೀಯ ವಿಭಾಗ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ ಮಾಡಿದ್ದಾರೆ. 90ರ ದಶಕದಲ್ಲಿ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಇದ್ದ ಏಕೈಕ ವಿಧಿ ವಿಜ್ಞಾನ ಪರಿಣಿತರು ಇವರು. ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಡೆದ ಅಸ್ವಾಭಾವಿಕ ಮರಣಗಳಲ್ಲಿ ಸ್ಥಳ ಪರೀಕ್ಷೆ ನಡೆಸಿ ಪೊಲೀಸರಿಗೆ ಅನೇಕ ಕೊಲೆಗಳನ್ನು ಬೇಧಿಸಲು ಸಹಾಯ ಮಾಡಿದ್ದಾರೆ. ಕೊಡಗು ಸರ್ಕಾರಿ ವೈದ್ಯರ ಸಂಘ ಮತ್ತು ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.