ಉದ್ಘಾಟನೆಗೆ ಸಿದ್ಧಗೊಂಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳ ಮುಖ ಮಂಟಪ, ವೃತ್ತ 
ಕೊಡಗು

28 ರಂದು ಡಾ.ಶಿವಕುಮಾರ ಸ್ವಾಮೀಜಿ ವೃತ್ತ ಉದ್ಘಾಟನೆ

ಕುಶಾಲನಗರ: ಡಾ.ಶಿವಕುಮಾರ ಶ್ರೀಗಳ ಸ್ಮರಣೆಯನ್ನು ಚಿರಕಾಲ ನೆನಪಿಸುವಂತಹ ವೃತ್ತವೊಂದು ಕುಶಾಲನಗರದ ಬಲಮುರಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಾಣಗೊಂಡಿದ್ದು, ಡಿ.28 ರಂದು ಉದ್ಘಾಟನೆಗೊಳ್ಳುತ್ತಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಕುಶಾಲನಗರದಲ್ಲಿ ಜರುಗಿದ ವೀರಶೈವ ಮಹಾಸಭಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಂದಿನ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಕುಶಾಲನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣಕ್ಕೆ ಪುರಸಭೆಯಿಂದ ಸೂಕ್ತ ಸ್ಥಳಾವಕಾಶ ಕೊಡಿಸುವಂತೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು.
ಇದಕ್ಕೆ ಒಪ್ಪಿದ ಅಪ್ಪಚ್ಚು ರಂಜನ್ ಕೂಡಲೇ ಸೂಕ್ತ ಸ್ಥಳ ಹುಡುಕಿ ಕೊಡುವಂತೆ ಪುರಸಭೆ ಅಧ್ಯಕ್ಷ ಜಯವರ್ಧನ್ ಅವರಿಗೆ ಸೂಚಿಸಿದ್ದರು. ಬಳಿಕ ಬಲಮುರಿ ದೇಗುಲ ಮಾರ್ಗದಲ್ಲಿನ ನಾಲ್ಕು ರಸ್ತೆಗಳು ಸೇರುವ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಹೆಸರಿನ ಉದ್ಯಾನದ ಮುಂಬದಿ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ದೊರಕಿತು.
ಇದೀಗ 3 ಲಕ್ಷ ರೂ. ವೆಚ್ಚದಲ್ಲಿ ದಾನಿಗಳ ಸಹಕಾರದೊಂದಿಗೆ ವೃತ್ತದಲ್ಲಿ ನಿರ್ಮಾಣಗೊಂಡಿರುವ ಗೋಪುರದೊಳಗೆ ಗ್ರಾನೈಟ್‌ನಲ್ಲಿ ಶಿವಕುಮಾರ ಸ್ವಾಮೀಜಿಯ ಭಾವಚಿತ್ರ ತಿದ್ದಿದ ಪ್ರತಿಮೆ ಸಿದ್ಧಗೊಂಡಿದೆ.
ಡಿ.28 ರಂದು ಕುಶಾಲನಗರದಲ್ಲಿ ನಡೆಯುವ ವೃತ್ತ ಉದ್ಘಾಟನಾ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ವಿವಿಧ ಮಠಗಳ ಪೀಠಾಧ್ಯಕ್ಷರು ಆಗಮಿಸಲಿದ್ದಾರೆ. ಕ್ಷೇತ್ರದ ಶಾಸಕ ಡಾ.ಮಂತರಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್, ವೀರಶೈವ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ, ಕುಶಾಲನಗರ ತಾಲ್ಲೂಕಿನ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೂಡ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಪುರಸಭೆ ಮಾಜಿ ಅಧ್ಯಕ್ಷ ಜಯವರ್ಧನ ಇತರರು ಆಗಮಿಸಲಿದ್ದಾರೆ.