ಎಂ.ಬಿ. ಅಫ್ತಾಬ್ 
ಕೊಡಗು

ಕೃಷಿ ಬೀಜ ತಳಿ ತಜ್ಞ ಎಂ.ಬಿ. ಅಫ್ತಾಬ್‌ಗೆ ಡಾ.ಎಚ್.ಎನ್. ಪ್ರಶಸ್ತಿ

ಮಡಿಕೇರಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ರಾಜ್ಯದಲ್ಲಿ ಜಿಲ್ಲೆಗೊಬ್ಬರಂತೆ ಪುರುಷ ಹಾಗೂ ಮಹಿಳಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಕುಶಾಲನಗರದ ಕೃಷಿ ಬೀಜ ತಳಿ ತಜ್ಞ ಎಂ.ಬಿ. ಅಫ್ತಾಬ್ ಅವರಿಗೆ ಡಾ.ಎಚ್. ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮಹಿಳಾ ಸಾಧಕರ ವಿಭಾಗದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರಿಗೆ ಚೈತನ್ಯ ಸ್ತ್ರೀ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಡಿ. 28ರಿಂದ ಮೂರು ದಿನಗಳ ಕಾಲ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದ್ದು, ಡಿ. 30ರಂದು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪರಿಷತ್‌ನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ವನಿತಾಚಂದ್ರಮೋಹನ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಚಿಂತನಾಗೋಷ್ಠಿಗಳು, ಸಾಂಸ್ಕೃತಿಕ ವೈಭವ, ವಿಜ್ಞಾನ ವಸ್ತುಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಮಠಾಧೀಶರು, ರಾಜ್ಯ ಸರ್ಕಾರದ ಸಚಿವರು, ಸಂಸದರು, ವಿಜ್ಞಾನಿಗಳು, ಗಣ್ಯ ಚಿಂತಕರು, ಸಾಹಿತಿಗಳು, ಚಲನಚಿತ್ರ ನಟರು ಸೇರಿದಂತೆ ಪರಿಷತ್ತಿನ 5 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.