ಮತದಾರರೊಬ್ಬರ ಮನೆಗೆ ತೆರಳಿ ಗಣತಿ ಅರ್ಜಿ ನಮೂನೆ ವಿತರಿಸುತ್ತಿರುವ ಬಿಎಲ್‌ಒ 
ಕೊಡಗು

ಮಳೆಯಲ್ಲೂ ಮನೆ ಮನೆ ಭೇಟಿ ಚುರುಕು

ಮಡಿಕೇರಿ:
ಕೊಡಗಿನಲ್ಲೂ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಚುರುಕಿನಿಂದ ನಡೆದಿದ್ದು ಇಲ್ಲಿಯ ತನಕ ಶೇ. 93.19ರಷ್ಟು ಗಣತಿ ಅರ್ಜಿ ನಮೂನೆ ವಿತರಣಾ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಆಗಾಗ್ಗೆ ಸುರಿಯುತ್ತಿರುವ ಮಳೆಯ ನಡುವೆಯೂ ಬಿಎಲ್‌ಒಗಳು ತಮ್ಮ ಪಾಲಿನ ಕರ್ತವ್ಯವನ್ನು ಮಾಡುತ್ತಿದ್ದಾರೆ. ಪ್ರತಿಯೊಬ್ಬ ಮತದಾರರೂ ಗಣತಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಬೂತ್ ಮಟ್ಟದ ಅಧಿಕಾರಿಗೆ ಈ ತಿಂಗಳ 29ರ ಒಳಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.
ಯಾವುದೇ ಅರ್ಹ ಮತದಾರರನ್ನು ಕೈಬಿಡುವಂತಿಲ್ಲ ಮತ್ತು ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವಂತಿಲ್ಲ ಎನ್ನುವ ಪ್ರಮುಖ ಗುರಿ ಇಟ್ಟುಕೊಂಡು ಎಸ್‌ಐಆರ್ ಪ್ರಕ್ರಿಯೆ ಕೊಡಗಿನಲ್ಲಿ ಭರದಿಂದ ನಡೆಯುತ್ತಿದೆ. ಜೂ.30ರಿಂದಲೇ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಗಣತಿ ಅರ್ಜಿ ನಮೂನೆಯನ್ನು ವಿತರಣೆ ಮಾಡುತ್ತಿದ್ದಾರೆ. ಜು.29ರ ತನಕವೂ ಮತಗಟ್ಟೆ ಅಧಿಕಾರಿಗಳ ಮನೆ-ಮನೆ ಭೇಟಿಗೆ ದಿನಾಂಕ ನಿಗದಿಪಡಿಸಲಾಗಿದೆ.
ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೆ ಭೇಟಿ ನೀಡಿ ಆಯಾ ಭಾಗದ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರಿಗೆ ಮತದಾರರ ಪೂರ್ವ ಮುದ್ರಿತ ವಿವರಗಳಿರುವ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸುತ್ತಿದ್ದಾರೆ. ನಮೂನೆ ಭರ್ತಿ ಮಾಡಲು ಮಾರ್ಗದರ್ಶನವನ್ನೂ ಕೊಡುತ್ತಿದ್ದಾರೆ. ಪ್ರತಿಯೊಬ್ಬ ಮತದಾರರೂ ಗಣತಿ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಮತದಾರ ದಾಖಲೆಗಳೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಅನ್ ಲೈನ್‌ನಲ್ಲೂ ಅಪ್‌ಲೋಡ್ ಮಾಡಬಹುದು.
ಗಣತಿ ಅರ್ಜಿ ನಮೂನೆಯನ್ನು ಸಲ್ಲಿಸಲು ವಿಫಲರಾಗುವ ಮತದಾರರನ್ನು ಮತಗಟ್ಟೆವಾರು ಗೈರು, ವಲಸೆ, ಮೃತ ಅಥವಾ ನಕಲಿ ಎಂದು ಪಟ್ಟಿ ಮಾಡಲಾಗುತ್ತದೆ. ಇವರನ್ನು ಕರಡು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದಿಲ್ಲ. ಜಿಲ್ಲೆಯಲ್ಲಿ ಹಾಲಿ 4,68,657 ಮತದಾರರಿದ್ದು, ಒಟ್ಟು 4,36,733 ಗಣತಿ ಅರ್ಜಿ ನಮೂನೆಯನ್ನು ವಿತರಿಸುವ ಮೂಲಕ ಶೇ. 93.19 ರಷ್ಟು ಗಣತಿ ಅರ್ಜಿ ನಮೂನೆಯನ್ನು ವಿತರಿಸಿದಂತಾಗಿದೆ.
ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ತಾಲೂಕುಗಳನ್ನು ಒಳಗೊಂಡ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,38,447 ಮತದಾರರು ಇದ್ದು, 2,29,379 ಗಣತಿ ಅರ್ಜಿ ನಮೂನೆಗಳನ್ನು ವಿತರಿಸುವ ಮೂಲಕ ಶೇ. 96.20 ಸಾಧನೆ ಮಾಡಲಾಗಿದೆ. ಮಡಿಕೇರಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳನ್ನು ಒಳಗೊಂಡ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,30,2190 ಮತದಾರರು ಇದ್ದಾರೆ. ಈ ಪೈಕಿ 2,07,354 ಮತದಾರರಿಗೆ ಗಣತಿ ಅರ್ಜಿ ನಮೂನೆಯನ್ನು ವಿತರಿಸಲಾಗಿದ್ದು, ಶೇ. 90.07ರಷ್ಟು ಸಾಧನೆ ಮಾಡಿದಂತಾಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 21,233 ಗಣತಿ ಅರ್ಜಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಶೇ. 8.90ರಷ್ಟು ಗುರಿ ಸಾಧಿಸಲಾಗಿದೆ. ಆನ್‌ಲೈನ್ ಮೂಲಕ 415 ಮತದಾರರು ಗಣತಿ ಅರ್ಜಿ ನಮೂನೆ ಸಲ್ಲಿಸಿದ್ದಾರೆ. ಗೈರು 12, ಸ್ಥಳಾಂತರ 203, ಮರಣ 352, ಡೂಪ್ಲಿಕೇಟ್ 66 ಹಾಗೂ ಇತರೆ ಮತದಾರರು 2 ಎಂದು ಗುರುತಿಸಲಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 31,820 ಗಣತಿ ಅರ್ಜಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಶೇ. 6.79ರಷ್ಟು ಗುರಿ ಸಾಧಿಸಲಾಗಿದೆ. 740 ಮತದಾರರು ಆನ್‌ಲೈನ್ ಮೂಲಕ ಗಣತಿ ಅರ್ಜಿ ನಮೂನೆಯನ್ನು ಸಲ್ಲಿಕೆ ಮಾಡಿದ್ದಾರೆ. ಗೈರು 17, ಸ್ಥಳಾಂತರ 699, ಮರಣ 548, ಡೂಪ್ಲಿಕೇಟ್ 133 ಹಾಗೂ ಇತರೆ ಮತದಾರರು 4 ಎಂದು ಗುರುತಿಸಲಾಗಿದೆ.
ಗಣತಿ ನಮೂನೆಗಳನ್ನು ಸ್ವೀಕರಿಸಿದ ಎಲ್ಲಾ ಮತದಾರರನ್ನು ಸೇರ್ಪಡೆಗೊಳಿಸುವ ಮೂಲಕ ಆ. 5ರಂದು ಮತದಾರರ ನೋಂದಣಾಧಿಕಾರಿ ಕರಡು ಮತದಾರರ ಪಟ್ಟಿ ಸಿದ್ಧಪಡಿಸುತ್ತಾರೆ. ಮತದಾರರು ನಿಗದಿತ ಸಮಯದೊಳಗೆ ತಮ್ಮ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದಲ್ಲಿಅವರು ಕ್ಷೇಮು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಸೇರ್ಪಡೆಗೊಳಿಸುವುದಕ್ಕಾಗಿ ನಿಗದಿತ ಘೋಷಣೆ ನಮೂನೆ ಸಲ್ಲಿಸಬಹುದಾಗಿರುತ್ತದೆ.
ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಆ.5ರಿಂದ ಸೆ. 4ರ ತನಕ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗೆ ಸಲ್ಲಿಸಬಹುದು. ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಆರ್ಹತೆಯ ಬಗ್ಗೆ ಸಂದೇಹ ಬಂದಲ್ಲಿ ಸ್ವಯಂಪ್ರೇರಿತ ವಿಚಾರಣೆ ಪ್ರಾರಂಭಿಸಿ ಅಂತಹ ಮತದಾರರನ್ನು ಯಾಕೆ ಮತದಾರರ ಪಟ್ಟಿಯಿಂದ ತೆಗೆಯಬಾರದು ಎಂಬ ಬಗ್ಗೆ ನೋಟಿಸ್ ಕೊಡುತ್ತಾರೆ. ಮತದಾರರ ನೋಂದಣಾಧಿಕಾರಿಯ ಯಾವುದೇ ನಿರ್ಣಯದ ಮೇಲಿನ ಮೇಲ್ಮನವಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಬಹುದಾಗಿದೆ. ಎರಡನೇ ಮೇಲ್ಮನವಿಯನ್ನು ಮುಖ್ಯ ಚುನಾವಣಾಧಿಕಾರಿಯವರಿಗೂ ಸಲ್ಲಿಸಬಹುದಾಗಿದೆ.
ಅ.10ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ವೆಬ್‌ಸೈಟ್‌ನಲ್ಲೂ ಅಪ್ ಲೋಡ್ ಮಾಡಲಾಗುತ್ತದೆ.
ಗಣತಿ ಅರ್ಜಿ ನಮೂನೆಯಲ್ಲಿ ಒದಗಿಸಲಾದ ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಗಳ ವಿವರಗಳು ಲಭ್ಯವಿಲ್ಲದಿದ್ದರೆ ಅಥವಾ ಡೇಟಾಬೇಸ್‌ಗೆ ಹೊಂದಿಕೆಯಾಗದ ಮತದಾರರಿಗೆ ನೋಟೀಸ್ ನೀಡಲಾಗುತ್ತದೆ. ನೋಟೀಸ್ ಸ್ವೀಕರಿಸಿದ ಮತದಾರರು 1987ರ ಜು.1ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದರೆ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಗುರುತಿಸುವ ದಾಖಲೆ, 1987ರ ಜು.1 ರಿಂದ 2004ರ ಡಿ.2ರ ನಡುವೆ ಭಾರತದಲ್ಲಿ ಜನಿಸಿದರೆ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ಗುರುತಿಸುವ ದಾಖಲೆಯೊಂದಿಗೆ ತಂದೆ ಅಥವಾ ತಾಯಿಗೆ ಸಂಬAಧಿಸಿದ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಗುರುತಿಸುವ ದಾಖಲೆ, 2004ರ ಡಿ.2ರ ನಂತರ ಭಾರತದಲ್ಲಿ ಜನಿಸಿದರೆ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ಗುರುತಿಸುವ ದಾಖಲೆ, ತಂದೆ ಅಥವಾ ತಾಯಿಗೆ ಸಂಬAಧಿಸಿದ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಗುರುತಿಸುವ ದಾಖಲೆ ಪೋಷಕರು ಭಾರತೀಯರಲ್ಲದಿದ್ದರೆ ಜನನದ ಸಮಯದಲ್ಲಿ ಅವರ ಪಾಸ್‌ಪೋರ್ಟ್ ಮತ್ತು ವೀಸಾದ ಪ್ರತಿ ನೀಡಬೇಕಾಗುತ್ತದೆ. ಜು. 29ರಂದು ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ನಡೆಸಲಾಗುತ್ತದೆ. ಮತದಾನ ಸುಗಮವಾಗಿ ನಡೆಸುವುದಕ್ಕಾಗಿ 1200ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಯನ್ನು ಪುನರ್ ವಿಂಗಡಣೆ ಮಾಡಲು ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಕುಟುಂಬದ ಎಲ್ಲಾ ಮತದಾರರು ಒಂದೇ ವಿಭಾಗದಲ್ಲಿ ಮತ್ತು ಒಂದೇ ಭಾಗದಲ್ಲಿ ಇರುವಂತೆ ಮಾಡಲಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಒಂದು ಬೀದಿಯಲ್ಲಿ ವಾಸಿಸುವ ಮತದಾರರನ್ನು ಒಂದೇ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗುತ್ತದೆ.
"

ಕಳೆದ 4-5 ದಿನಗಳಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಮನೆ ಮನೆ ಭೇಟಿಗೆ ಅನಾನುಕೂಲ ಆಗುತ್ತಿದ್ದರೂ ಬಿಎಲ್‌ಒಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೆ ಪೂರಕವಾಗಿ ಗಣತಿ ಅರ್ಜಿ ನಮೂನೆ ವಿತರಣೆ ಜಿಲ್ಲೆಯಲ್ಲಿ ಶೇ. 93.19ರಷ್ಟು ಪೂರ್ಣಗೊಂಡಿದೆ.2002ರ ಮತದಾರರ ಪಟ್ಟಿಯಲ್ಲಿ ಮಾಹಿತಿ ಪಡೆಯಲು ಸಾಧ್ಯವಾಗದಿದ್ದರೆ ಮತದಾರರು ಆತಂಕ ಪಡಬೇಕಿಲ್ಲ. ಗಣತಿ ನಮೂನೆಯಲ್ಲಿ ಇರುವ ಮಾಹಿತಿ ಭರ್ತಿ ಮಾಡಿ ಸಹಿ ಹಾಕಿ ಬಿಎಲ್‌ಒಗಳಿಗೆ ಕೊಡಬಹುದು. ಬಿಎಲ್‌ಒಗಳಿಗೆ ಕೊಟ್ಟ ಬಳಿಕವೂ ಬದಲಾವಣೆಗಳಿಗೆ ಜು.29ರ ತನಕ ಅವಕಾಶವಿದೆ.

— ನಿತಿನ್ ಚಕ್ಕಿ, ಉಪವಿಭಾಗಾಧಿಕಾರಿ, ಕೊಡಗು