ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಜಾಗದಲ್ಲಿ ಬೀದಿ ನಾಯಿಗಳ ಹಿಂಡು.
- ಸಾಂಕ್ರಾಮಿಕ ರೋಗ ಹರಡುವ ಭೀತಿ
- ಸೂಕ್ತ ನಿರ್ವಹಣೆಗೆ ಗ್ರಾಮಸ್ಥರ ಒತ್ತಾಯ
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಶ್ವಾನಗಳ ಆವಾಸಸ್ಥಾನವಾಗಿದೆ. ಜತೆಗೆ ಅನೈರ್ಮಲ್ಯದ ವಾತಾವರಣದಿಂದ ಸ್ಥಳೀಯರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.
ಆಹಾರ ಅರಸಿ ಬಂದ ಬೀದಿ ನಾಯಿಗಳು ಕಸ ವಿಲೇವಾರಿ ಘಟಕದಲ್ಲೇ ಬೀಡುಬಿಟ್ಟಿದೆ. ಇಲ್ಲೇ ಶ್ವಾನಗಳ ಸಂತಾನೋತ್ಪತಿಯು ಆಗಿ ಅವುಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಪರಿಣಾಮವಾಗಿ ನಾಯಿಗಳ ಹಾವಳಿ ತೀವ್ರಗೊಂಡಿದ್ದು, ಸುತ್ತಮುತ್ತಲಿನ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಈ ಭಾಗದ ಶಾಲಾ ಮಕ್ಕಳು ನಡೆದುಕೊಂಡು ಬರುವ ವೇಳೆ ದಾಳಿ ಮಾಡುವ ಭೀತಿ ಎದುರಾಗಿದೆ.
ಕಸ ವಿಲೇವಾರಿ ಘಟಕದ ಸುತ್ತ ಭದ್ರವಾದ ಗೋಡೆ ನಿರ್ಮಿಸಿ, ವೈಜ್ಞಾನಿಕ ರೀತಿಯಲ್ಲಿ ಕಸದ ನಿರ್ವಹಣೆ ಮಾಡಿದರೆ ನಾಯಿಗಳ ಹಾವಳಿ ನಿಯಂತ್ರಿಸಬಹುದಾಗಿದೆ. ಆದರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಘಟಕವನ್ನು ನಿರ್ವಹಣೆ ಇಲ್ಲದೇ ಪಾಳು ಬಿಟ್ಟಿದ್ದಾರೆ. ಈ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.