ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಸಾಕುಪ್ರಾಣಿಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು. ಡಾ.ಭವಿಷ್ ಕುಮಾರ್, ಗಿರೀಶ್, ರಮೇಶ್ ಮತ್ತು ಡಾ.ಸುರೇಶ್ ಇದ್ದರು.
ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸುವುದೇ ರೇಬಿಸ್ ತಡೆಗೆ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು
ಗೋಣಿಕೊಪ್ಪದ ಪಶುವೈದ್ಯ ಡಾ.ಭವಿಷ್ ಕುಮಾರ್ ಹೇಳಿದರು.
ಕೊಡಗು ಕೆನ್ನೆಲ್ ಕ್ಲಬ್, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೇಬಿಸ್ ವಿರುದ್ಧ ಲಸಿಕಾ ಜಾಗೃತಿ ಶಿಬಿರದಲ್ಲಿ ಮಾತನಾಡಿದರು.ಪ್ರಾಣಿ ಪ್ರಿಯರು ತಮ್ಮ ಸಾಕು ನಾಯಿಗಳಿಗೆ ಮತ್ತು ಬೆಕ್ಕುಗಳಿಗೆ ಲಸಿಕೆ ಹಾಕಿಸುವ ಮೂಲಕ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರೇಬಿಸ್ ಮಾರಣಾಂತಿಕ ಕಾಯಿಲೆಯಾಗಿದ್ದು, ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಮನುಷ್ಯರು ಹಾಗೂ ಪ್ರಾಣಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲ. ಲಸಿಕೆ ಹಾಕಿಸುವುದೇ ಉತ್ತಮ ಮಾರ್ಗ ಎಂದರು.
ನಗರ ಮತ್ತು ಗ್ರಾಮಗಳಲ್ಲಿರುವ ಸಾಕುಪ್ರಾಣಿಗಳ ಮಾಲೀಕರು ಲಸಿಕಾ ಆಂದೋಲನ ಯಶಸ್ವಿಯಾಗಲು ಬೆಂಬಲಿಸಬೇಕು ಎಂದರು.
ಮುಂದಿನ ಹಂತದಲ್ಲಿ ಸೆ.7ರಂದು ಪೊನ್ನಂಪೇಟೆ ಪಶು ಆಸ್ಪತ್ರೆ, ಸೆ.8ರಂದು ಬಾಳೆಲೆ ಪಶು ಆಸ್ಪತ್ರೆ ಹಾಗೂ ಸೆ.10ರಂದು ಶ್ರೀಮಂಗಲ ಪಶು ಆಸ್ಪತ್ರೆಯಲ್ಲಿ ರೇಬಿಸ್ ಲಸಿಕಾ ಶಿಬಿರ ನಡೆಯಲಿದೆ. ನಿಗದಿತ ಸ್ಥಳಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಲಸಿಕೆ ನೀಡಲಾಗುವುದು ಎಂದು ಡಾ.ಭವಿಷ್ ಕುಮಾರ್ ತಿಳಿಸಿದರು.
ಶಿಬಿರದಲ್ಲಿ ಒಟ್ಟು 67 ನಾಯಿ ಮತ್ತು 16 ಬೆಕ್ಕುಗಳಿಗೆ ಲಸಿಕೆ ನೀಡಲಾಯಿತು.
ಪಶು ವೈದ್ಯ ಡಾ. ಗಿರೀಶ್ ಅವರು ಇದೇ ಸಂದರ್ಭ ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರೇಬಿಸ್ ರೋಗದ ಬಗ್ಗೆ ಮಾಹಿತಿ ನೀಡಿದರು. ಕೆನಲ್ ಕ್ಲಬ್ ಅಧ್ಯಕ್ಷ ಅಳಮೇಂಗಡ ಪಿ.ರಮೇಶ್ ಮತ್ತು ಡಾ.ಸುರೇಶ್ ಇದ್ದರು.