ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಂದರ್ಭ ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. ಡಾ. ಮಂತರ್ ಗೌಡ, ಡಾ. ಶ್ಯಾಮ್ ಅಪ್ಪಣ್ಣ, ಡಾ. ಚೆರಿಯಮನೆ ಪ್ರಶಾಂತ್, ಡಾ. ಲೋಕೇಶ್, ಡಾ. ಸುಮುಖ್, ಡಾ. ಸುಧಾಕರ್ ಮತ್ತಿತರರು ಇದ್ದರು.
ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರ ಸೇವೆಗೆ ಯುವ ವೈದ್ಯರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು, ಇಂಥ ವೈದ್ಯರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ನೀಡಲಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಂದರ್ಭ ಸಾಧಕ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
ಎಲ್ಲಾ ಸವಾಲುಗಳ ನಡುವೇ ವೈದ್ಯರು ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಮಹತ್ತರ ಹೊಣೆ ಹೊಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ತಾನು ಶಾಸಕನಾದ ಬಳಿಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ಕ್ಷೇತ್ರದ ಹಲವು ಪ್ರಮುಖ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ನೀಡಿದ್ದೇನೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮ, ತಾಲೂಕು ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ವೈದ್ಯರು ಮನಸ್ಸು ಮಾಡಬೇಕು.
ಮಡಿಕೇರಿಯಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಚಿಂತನೆಯಿAದ ಸಾಕಷ್ಟು ಸೌಲಭ್ಯವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಸುಸಜ್ಜಿತ ಹೃದ್ರೋಗ ಚಿಕಿತ್ಸಾ ಘಟಕವೂ ಇಲ್ಲಿ ಪ್ರಾರಂಭವಾಗಲಿದ್ದು ಇದರಿಂದ ಪರ ಊರುಗಳ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಕೊಡಗಿನ ಜನತೆಯ ಸಮಸ್ಯೆ ಪರಿಹಾರವಾಗಲಿದೆ.
ವೈದ್ಯರದ್ದು ಮಾನವೀಯ ಮೌಲ್ಯಗಳಿಗೆಗೆ ಸಂಬAಧಿಸಿದ ವೃತ್ತಿಯಾಗಿದೆ. ತಾನು ಕೂಡ ವೈದ್ಯನಾಗಿಯೇ ಇದ್ದವನು. ಹೀಗಾಗಿ ವೈದ್ಯರ ಬೇಡಿಕೆಗೆ ಸ್ಪಂದಿಸಲಾಗುವುದು. ವೈದ್ಯಕೀಯ ಒಕ್ಕೂಟದ ಕೊಡಗು ಘಟಕದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇರಬಹುದು. ಆದರೆ, ಹಿರಿತನದ ಅನುಭವದಲ್ಲಿ ಕೊಡಗಿನ ವೈದ್ಯರ ಸೇವೆಗೆ ಮೌಲ್ಯ ಕಟ್ಟಲಾಗುವುದಿಲ್ಲ ಎಂದರು.
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ. ಶ್ಯಾಮ್ ಅಪ್ಪಣ್ಣ ಮಾತನಾಡಿ, ಶಾಸಕರೇ ವೈದ್ಯರಾಗಿರುವ ಹಿನ್ನೆಲೆಯಲ್ಲಿ ವೈದ್ಯರ ಸಮಸ್ಯೆ, ಸಂಕಷ್ಟ, ಸವಾಲುಗಳ ಬಗ್ಗೆ ಚೆನ್ನಾಗಿ ಅರಿವಾಗಿರುತ್ತದೆ. ಕೊಡಗಿನಲ್ಲಿ ಸಾಕಷ್ಟು ಸವಾಲುಗಳ ಮಧ್ಯೆ ಕಾರ್ಯನಿರ್ವಹಿಸುತ್ತಿರುವ ತನ್ನದೇ ವೃತ್ತಿನಿರತರ ಬೇಡಿಕೆಗೆ ಶಾಸಕರು ಸ್ಪಂದಿಸುವAತಾಗಲಿ. ಕೊಡಗು ಘಟಕಕ್ಕೆ ತನ್ನದೇ ಸ್ವಂತ ಕಚೇರಿ ನಿರ್ಮಾಣದ ನಿಟ್ಟಿನಲ್ಲಿ ಶಾಸಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಚೆರಿಯಮನೆ ಪ್ರಶಾಂತ್ ಘಟಕಕ್ಕೆ ಹೊಸದಾಗಿ ಸದಸ್ಯರಾದವರ ಪರಿಚಯ ಮಾಡಿದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಡಾ. ಅಯ್ಯಪ್ಪ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಲೋಕೇಶ್, ಡಾ. ಸುಮುಖ್, ಡಾ. ಸುಧಾಕರ್ ಮತ್ತಿತರರು ಇದ್ದರು.
ಡಾ.ಮಂತರ್ ಗೌಡ ಅವರಿಗೆ ಇದೇ ವೇಳೆ ಭಾರತೀಯ ವೈದ್ಯಕೀಯ ಒಕ್ಕೂಟದ ಕೊಡಗು ಘಟಕದ ಸದಸ್ಯತ್ನ ನೀಡಿ ಗೌರವಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ವತಿಯಿಂದ ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. ಹಿರಿಯ ವೈದ್ಯ ಡಾ. ರಮೇಶ್ ಬೋಪಯ್ಯ, ಡಾ. ಎಂ.ಎ. ದೇವಯ್ಯ, ಡಾ.ಪುರುಷೋತ್ತಮ್, ಡಾ ಕುಶ್ವಂತ್ ಕೋಳಿಬೈಲು, ಡಾ. ರೇಣುಕಾ ಅವರನ್ನು ಶಾಸಕ ಡಾ.ಮಂತರ್ ಗೌಡ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಡಾ. ಕುಶ್ವಂತ್, ರಾಜ್ಯ ಸರ್ಕಾರದಲ್ಲಿ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾಗಿದ್ದಾಗ ವೈದ್ಯಕೀಯ ನೀತಿಗೆ ತಿದ್ದುಪಡಿ ತಂದು ಖಾಸಗಿ ವೈದ್ಯರಿಗೆ ಚಿಕಿತ್ಸಾಲಯ ತೆರೆಯಲು ವಿಳಂಬರಹಿತವಾಗಿ ಅನುಮತಿ ನೀಡಲು ಮುಂದಾಗಿದ್ದು ರಾಜ್ಯವ್ಯಾಪಿ ಖಾಸಗಿ ವೈದ್ಯರಿಗೆ ಸಹಾಯವಾಯಿತು ಎಂದರು.
ಸನ್ಮಾನ ಸ್ವೀಕರಿಸಿದ ಡಾ. ಪುರುಷೋತ್ತಮ್ ಮಾತನಾಡಿ, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ 20 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಲಭಿಸಿದ್ದು ವೈದ್ಯರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.