ಕಳಪೆ ಹಾಗೂ ನಕಲಿ ಬಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಎಸ್.ಜೆ.ಸೋಮಶೇಖರ್ ಮಾತನಾಡಿದರು. ಡಾ.ಸಹನಾ ಎಸ್.ಹಾದಿಮನಿ, ಶಶಿಧರ್, ಬಿ.ಎಸ್.ಚಂದ್ರಶೇಖರ್ ಇತರರಿದ್ದರು.
- ರಸಗೊಬ್ಬರ ಮಾರಾಟದಲ್ಲಿ ಮೋಸವಾಗದಂತೆ ನೋಡಿಕೊಳ್ಳಿ
- ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್
ಮಡಿಕೇರಿ: ಕೃಷಿಕರಿಗೆ ನಕಲಿ ಹಾಗೂ ಅಸಲಿ ರಸಗೊಬ್ಬರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಮಾರಾಟಗಾರರು, ವಿತರಕರು ರೈತರಿಗೆ ಮೋಸವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದರು.
ಕಳಪೆ ಹಾಗೂ ನಕಲಿ ಬಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ಅನಧೀಕೃತ ಮತ್ತು ಪರವಾನಗಿ ರಹಿತ ಮಾರಾಟಗಾರರು ರೈತರಿಗೆ ಕಳಪೆ ಹಾಗೂ ನಕಲಿ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಿ ವಂಚಿಸುತ್ತಿರುವ ಬಗ್ಗೆ ದೂರುಗಳು ಕಂಡು ಬರುತ್ತಿದೆ. ಇಂತಹ ಕೃತ್ಯಗಳಿಂದ ರೈತರು ಆರ್ಥಿಕ ನಷ್ಟ ಅನುಭವಿಸುದಲ್ಲದೆ, ಕೃಷಿ ಉತ್ಪಾದನೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು ಮತ್ತು ಮಣ್ಣು ಆರೋಗ್ಯ ನೋಡಿಕೊಂಡು ರಸಗೊಬ್ಬರ ಬಳಸುವಂತಾಗಲು ರೈತರಿಗೆ ಮನವರಿಕೆ ಮಾಡಬೇಕು. ಅಧಿಕಾರಿಗಳು, ಮಾರಾಟಗಾರರು ಮತ್ತು ವಿತರಕರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ, ಸಾಂಬಾರ ಮಂಡಳಿಯವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೃಷಿಕರು ಯಾವ ಯಾವ ರೀತಿಯ ರಸಗೊಬ್ಬರ ಬಳಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ರೈತರ ಹಿತರಕ್ಷಣೆಯನ್ನು ಕಾಯುವ ದೃಷ್ಟಿಯಿಂದ ಕೃಷಿ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದ್ದು, ಜಿಲ್ಲೆಯಾದ್ಯಂತ ನಕಲಿ ಬೀಜ ಮತ್ತು ಕೀಟನಾಶಕಗಳ ಮಾರಾಟಗಾರರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಸಕಾಲದಲ್ಲಿ ಪೂರೈಸಲಾಗುವುದು ಎಂದರು.
ಜಿಲ್ಲೆಯಾದ್ಯಂತ ಇರುವ ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟ ಮಳಿಗೆಗಳು, ಗೋದಾಮುಗಳು ಹಾಗೂ ಸಾಗಾಣಿಕೆ ವಾಹನಗಳ ಮೇಲೆ ಕಾರ್ಯಪಡೆಯು ನಿರಂತರವಾಗಿ ಆಕಸ್ಮಿಕ ದಾಳಿಗಳನ್ನು ನಡೆಸಿ, ದಾಸ್ತಾನು ಮತ್ತು ಗುಣಮಟ್ಟವನ್ನು ಪರಿಶೀಲಿಸಲಾಗುವುದು. ಅನುಮಾನಾಸ್ಪದ ಬಿತ್ತನೆ ಬೀಜ ಹಾಗೂ ಕೀಟನಾಶಗಳ ಮಾದರಿಗಳನ್ನು ತಕ್ಷಣವೇ ಸಂಗ್ರಹಿಸಿ, ಆದ್ಯತೆಯ ಮೇರೆಗೆ ಗುಣನಿಯಂತ್ರಣ ಪ್ರಯೋಗಾಲಯಗಳಿಗೆ ಕಳುಹಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗವುದು. ಗಡಿ ಭಾಗಗಳಲ್ಲಿ ನಿಗಾ ವಹಿಸುವುದು, ಸಬ್ಸಿಡಿ ಗೊಬ್ಬರದ ದುರ್ಬಳಕೆ ತಡೆಗಟ್ಟುವುದು, ಬಲವಂತದ ಜೋಡಣೆ ಮಾರಾಟಕ್ಕೆ ಕಠಿಣ ನಿಷೇಧ, ನಕಲಿ ಮತ್ತು ಕಳಪೆ ರಸಗೊಬ್ಬರಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
೨೦೨೬-೨೭ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪರ್ ಡ್ರಾಪ್ ಮೋರ್ ಕ್ರಾಪ್(ಪಿಎಂಆರ್‌ಕೆವಿವೈ-ಪಿಡಿಎಂಸಿ) ಘಟಕದಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಕೇಂದ್ರ ಮತ್ತು ರಾಜ್ಯದ ಕಡ್ಡಾಯ ಪಾಲಿನ ಸಹಾಯಧನಕ್ಕೆ ತಾಲೂಕುವಾರು, ಘಟಕವಾರು ಹಾಗೂ ಉಪ ಶೀರ್ಷಿಕೆವಾರು ಭೌತಿಕ ಮತ್ತು ಆರ್ಥಿಕ ಕ್ರಿಯಾ ಯೋಜನೆಗೆ ಜಿಲ್ಲೆಗೆ ೨೮೧.೮೦ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಗ್ರಾಮೀಣ ಭಾಗದ ಜನರು ಕೊಳವೆ ಬಾವಿಗಳಿಗೆ ಹೆಚ್ಚು ಅವಲಂಬಿತರಾಗಿದ್ದು, ಅವಶ್ಯಕತೆ ಇದ್ದಲ್ಲಿ ಮಾತ್ರ ಕಾರ್ಯಗತಗೊಳಿಸುವಂತೆ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಆರಂಭವಾಗಿದ್ದು, ೨೦೨೫-೨೬ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೭೮.೨೯ರಷ್ಟು ಸಮೀಕ್ಷೆ ಪ್ರಗತಿ ಸಾಧಿಸಿದೆ. ೨೦೨೬-೨೭ನೇ ಸಾಲಿನಲ್ಲಿ ಒಟ್ಟು ೨೯೬೪೪೦ ತಾಕುಗಳಲ್ಲಿ ೩೫೫೧೦ ಕೃಷಿಯೇತರ ತಾಕುಗಳಿದ್ದು, ೨೬೦೯೩೦ ತಾಕುಗಳನ್ನು ಸರ್ವೆ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತ(ಮಳೆಯಾಶ್ರಿತ) ಬೆಳೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚಿಸಲಾಗಿದ್ದು, ಹೋಬಳಿ ಮಟ್ಟದಲ್ಲಿ ಭತ್ತ ನೀರಾವರಿ ಮತ್ತು ಮುಸುಕಿನ ಜೋಳ ಮಳೆಯಾಶ್ರಿತ ಎಂದು ಅಧಿಸೂಚಿಸಲಾಗಿದೆ. ಅಲ್ಲದೆ ಕೊಡಗು ಜಿಲ್ಲೆಗೆ ಇಂಡಸ್ ಇಂಡ್ ಜನರಲ್ ಇನ್ಸುರೆನ್ಸ್ ಕಂಪನಿಯನ್ನು ೨೦೨೬-೨೭ನೇ ಸಾಲಿಗೆ ಅನುಷ್ಠಾನ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಇನ್ಸೂರೆನ್ಸ್ ಕಂಪೆನಿಗಳು ರೈತರು ಮತ್ತು ಬೆಳೆಗಾರರಿಗೆ ಪಾವತಿಸುವ ಮೊತ್ತಕ್ಕೆ ಅನುಗುಣವಾಗಿ ವಿಮಾ ಕಂಪನಿಯ ನಿಯಮಗಳು, ಪ್ರೀಮಿಯಂ, ಕ್ಲೇಮ್ ಪ್ರಕ್ರಿಯೆ ಮತ್ತು ನಷ್ಟ ಪರಿಹಾರದ ಬಗ್ಗೆ ಸ್ಪಷ್ಟವಾದ ಮತ್ತು ನಿಖರವಾದ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಬೆಳೆ ವಿಮಾ ಯೋಜನೆಯ ಕುರಿತು ರೈತರಿಗೆ ಸಮರ್ಪಕ ಅರಿವು ಮೂಡಿಸಲು ಕೃಷಿ ಇಲಾಖೆ, ಸಹಕಾರ ಇಲಾಖೆ, ತೋಟಗಾರಿಗೆ ಇಲಾಖೆ, ಬ್ಯಾಂಕುಗಳು, ವಿಮಾ ಸಂಸ್ಥೆಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳು ಜಂಟಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳಲಿದೆ. ಅಲ್ಲದೆ ಅಧಿಸೂಚಿತ ಗ್ರಾಮಗಳಲ್ಲಿ ಪೋಸ್ಟರ್ ಅಳವಡಿಕೆ, ಬ್ಯಾನರ್ ಪ್ರದರ್ಶನ, ರೈತರ ಸಭೆಗಳು ಹಾಗೂ ಇತರೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿ ಇಂಡಸ್ ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮುಂಗಾರು ಹಂಗಾಮಿನ ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ ರೈತರ ವಿಮಾ ಕಂತನ್ನು ಶೇ. ೨ ಎಂದು ನಿಗದಿಪಡಿಸಲಾಗಿದೆ. ಬೆಳೆ ಸಾಲ ಪಡೆದ ಹಾಗೂ ಪಡೆಯದ ಇಚ್ಛೆಯುಳ್ಳ ರೈತರು ರಾಷ್ಟ್ರೀಕೃತ ಬ್ಯಾಂಕ್, ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸಾಲ ಪಡೆಯದ ರೈತರು ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.
ಭತ್ತ(ನೀರಾವರಿ): ಎಕರೆಗೆ ರೂ. ೮೭೯.೦೧ ಕಂತು ಪಾವತಿಸಬೇಕು (ಕೊನೆಯ ದಿನಾಂಕ: ೧೪.೦೮.೨೦೨೬)., ಭತ್ತ(ಮಳೆಯಾಶ್ರಿತ): ಎಕರೆಗೆ ರೂ. ೬೧೧.೯೧ ಕಂತು ಪಾವತಿಸಬೇಕು(ಕೊನೆಯ ದಿನಾಂಕ: ೧೪.೦೮.೨೦೨೬). ಮುಸುಕಿನ ಜೋಳ(ಮಳೆಯಾಶ್ರಿತ): ಎಕರೆಗೆ ರೂ. ೫೪೬.೩೫ ಕಂತು ಪಾವತಿಸಬೇಕು(ಕೊನೆಯ ದಿನಾಂಕ: ೩೧.೦೭.೨೦೨೬), ಹೆಚ್ಚಿನ ಮಾಹಿತಿಗೆ ರೈತರು www.samrakshane.karnataka.gov.in ತಂತ್ರಾಂಶ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಧರ್, ಉಪ ಕೃಷಿ ನಿರ್ದೇಶಕ ಡಿ.ಎಸ್.ಸೋಮಶೇಖರ್, ಡಿಎಸ್‌ಒ ಡಿ.ನಾರಾಯಣ, ತೋಟಗಾರಿಕ ಸಹಾಯಕ ನಿರ್ದೇಶಕ ಮುತ್ತಪ್ಪ, ಡಿಡಿಎಲ್‌ಆರ್ ನಿರಂಜನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯ್ಕ, ಡಿವೈಎಸ್‌ಪಿ ಪಿ.ಎ.ಸೂರಜ್ ಹಾಗೂ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಇದ್ದರು.