ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರುಣ್ಯ ಕಾರ್ಯಕ್ರಮವನ್ನು ಹೆಚ್.ಎಂ.ನಂದಕುಮಾರ್ ಉದ್ಘಾಟಿಸಿದರು. ಡಾ.ಮುಸ್ತಫಾ, ಶಶಿಕುಮಾರ್ ಚೆಟ್ಟಳ್ಳಿ, ಎಚ್.ಟಿ.ಅನಿಲ್ ಇತರರಿದ್ದರು. 
ಕೊಡಗು

ಸಂಕಷ್ಟದ ಕುಟುಂಬಗಳಿಗೆ ನೆರವಾಗುವುದು ಮಾನವೀಯತೆಯ ಪ್ರತೀಕ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಸಂಕಷ್ಟದ ಕುಟುಂಬಗಳಿಗೆ ನೆರವಾಗುವುದು ಮಾನವೀಯತೆಯ ಪ್ರತೀಕ
  • ಜಿಲ್ಲಾ ಮಟ್ಟದ ಕಾರುಣ್ಯ ಕಾರ್ಯಕ್ರಮದಲ್ಲಿ ಹೆಚ್.ಎಂ.ನಂದಕುಮಾರ್ ಅಭಿಮತ
ಮಡಿಕೇರಿ: ಸಮಾಜದ ದುರ್ಬಲ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗಾಗಿ ಕಾರ್ಯನಿರ್ವಹಿಸುತ್ತಿರುವ ಮಾನವೀಯ ಸ್ನೇಹಿತರ ಒಕ್ಕೂಟ(ಎಂ.ಎಸ್.ಒ.) ಕೊಡಗು ವತಿಯಿಂದ ಜಿಲ್ಲಾ ಮಟ್ಟದ ಕಾರುಣ್ಯ ಕಾರ್ಯಕ್ರಮವನ್ನು ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಕಾರ್ಯಗಳು ಮಾನವೀಯತೆಯ ಪ್ರತೀಕವಾಗಿದ್ದು, ಇಂತಹ ಸಂಘಟನೆಗಳು ಜನರಲ್ಲಿ ಆಶಾಭಾವನೆ ಮೂಡಿಸುತ್ತವೆ ಎಂದು ಹೇಳಿದರು. ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಮಾನವೀಯ ಸ್ನೇಹಿತರ ಒಕ್ಕೂಟದ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಮುಸ್ತಫಾ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಸರ್ಕಾರದ ಯೋಜನೆಗಳ ಜೊತೆಗೆ ಸಮಾಜಮುಖಿ ಸಂಘಟನೆಗಳ ಸಹಕಾರವೂ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಂ.ಎಸ್.ಒ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಒ. ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಮಾತನಾಡಿ, ಒಕ್ಕೂಟದಲ್ಲಿ ೧೯೦ಕ್ಕೂ ಅಧಿಕ ಸಮಾನ ಮನಸ್ಕ ಸದಸ್ಯರಿದ್ದು, ದಾನಿಗಳ ಸಹಕಾರದಿಂದ ಸುಮಾರು ೩ ಲಕ್ಷ ರೂ. ಸಂಗ್ರಹಿಸಲಾಗಿದೆ. ಇದರ ಮೂಲಕ ಜಿಲ್ಲೆಯ ವಿವಿಧ ಭಾಗಗಳ ಕಡುಬಡತನದಲ್ಲಿರುವ ೪೫ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು, ೧೦ ರೋಗಿಗಳಿಗೆ ತಲಾ ೫ ಸಾವಿರ ರೂ. ಆರ್ಥಿಕ ನೆರವು ಹಾಗೂ ೧೭ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳು ಒಟ್ಟು ೭೨ ಫಲಾನುಭವಿಗಳಿಗೆ ಸಹಾಯ ಹಸ್ತ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಾತಿ, ಧರ್ಮ ಹಾಗೂ ರಾಜಕೀಯ ಭೇದಭಾವಗಳನ್ನು ಮೀರಿ ಮಾನವೀಯ ಸೇವೆಯ ಧ್ಯೇಯದೊಂದಿಗೆ ಒಕ್ಕೂಟ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿನ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುವ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ಒಕ್ಕೂಟದ ಪರಿಚಯವನ್ನು ಎಂ.ಇ.ಮಹಮ್ಮದ್ ನೀಡಿದರು. ಸಂಸ್ಥೆಯ ಉದ್ದೇಶ, ಕಾರ್ಯಚಟುವಟಿಕೆಗಳು ಹಾಗೂ ಇದುವರೆಗೆ ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ಹಣ, ಅಧಿಕಾರ ಮತ್ತು ಖ್ಯಾತಿ ಜೀವನದಲ್ಲಿ ಯಶಸ್ಸನ್ನು ನೀಡಬಹುದು. ಆದರೆ ನಿಜವಾದ ಸಂತೋಷ ಮತ್ತು ಆತ್ಮತೃಪ್ತಿ ಇತರರ ಬದುಕಿನಲ್ಲಿ ಬೆಳಕು ಮೂಡಿಸಿದಾಗ ಮಾತ್ರ ದೊರೆಯುತ್ತದೆ. ಸಮಾಜಕ್ಕಾಗಿ ಮಾಡಿದ ಸೇವೆಯೇ ಮನುಷ್ಯನ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಎಸ್.ಒ. ಪ್ರತಿನಿಧಿಗಳಾದ ಚೆಟ್ರಿಂಡ ಲೀಲಾ ಮೇದಪ್ಪ, ಅಸ್ಮತ್ ಮಡಿಕೇರಿ, ಎಂ.ಎಸ್.ಒ. ಸ್ಥಾಪಕ ಅಡ್ಮಿನ್ ಅನಿಲ್ ರೈ, ಉದ್ಯಮಿ ಅಮಿತ್ ಡಿಸೋಜಾ, ಪ್ರಾಧ್ಯಾಪಕ ಡಾ.ಮುಸ್ತಫಾ ಮಾದಪುರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಇಂದಿರಾ.ಎ.ಎಚ್ ಸ್ವಾಗತಿಸಿದರು. ಕಣ್ಣೀರ ತುಳಸಿ ಮೋಹನ್ ಒಕ್ಕೂಟದ ಧ್ಯೇಯಗೀತೆಯನ್ನು ಹಾಡಿದರು. ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿ, ಟಿ.ಆರ್.ವಿನೋದ್ ವಂದಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ದಶರಥ, ಕವಿತಾ ರಮೇಶ್, ಅಗ್ನಿ ಚನ್ನನಾಯಕ, ಚೀರಂಡ ಚಂಗಪ್ಪ, ಅನಿಲ್ ಕುಮಾರ್, ನಿಯಾರ್ ಸುಂಟಿಕೊಪ್ಪ, ಹನೀಫ್ ಸೋನ ಹಾಗೂ ಸದಸ್ಯರಾದ ಆನಿ ಸಾಲ್ಟಾನ, ಮುದ್ದಿಯಡ ರತೀಶ್ ಬಿದ್ದಪ್ಪ, ಸುನಿತಾ ಮಂಜುನಾಥ್, ರುಬೀನಾ, ಪಾವನಾ ಗಗನ್, ಮಂಜುಳಾ ಸೇರಿದಂತೆ ಫಲಾನುಭವಿಗಳು ಮತ್ತು ಒಕ್ಕೂಟದ ಇತರೆ ಸದಸ್ಯರು ಉಪಸ್ಥಿತರಿದ್ದರು.