ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
- ಅಂತರ್ಜಲ ಪ್ರಾಧಿಕಾರದ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಂತರ್ಜಲವನ್ನು ಸಂರಕ್ಷಿಸುವಲ್ಲಿ ಕೆರೆ ಹಾಗೂ ಜಲಮೂಲವನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂತರ್ಜಲ ಅಭಿವೃದ್ಧಿ, ಸಂರಕ್ಷಣೆ ಮತ್ತಿತರ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಅಂತರ್ಜಲ ನಿರ್ದೇಶನಾಲಯ ಅಥವಾ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು.
ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಸ್.ಸುಧಾ ಮಾತನಾಡಿ, ಗಾಳಿಬೀಡು, ಮಕ್ಕಂದೂರು, ಯವಕಪಾಡಿ, ಎಮ್ಮೆಮಾಡು, ಮೊಣ್ಣಂಗೇರಿ, ಕೂಡಿಗೆ, ಕುಮಾರಳ್ಳಿ, ಪೊನ್ನಂಪೇಟೆ ನಿರಾಕ್ಷೇಪಣಾ ಅರ್ಜಿಗಳನ್ನು ಪಡೆದುಕೊಂಡಿದ್ದು, ಹೊಸದಾಗಿ ಆನ್‌ಲೈನ್ ಮೂಲಕ ಮೂರು ಅರ್ಜಿಗಳು ಸ್ವೀಕೃತಿಗೊಂಡಿದೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸದೆ ಹಾಗೆಯೇ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುತ್ತಿರುವ ರಿಗ್ ಯಂತ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ೨೦೨೫-೨೬ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳ ಸಫಲತೆ, ವಿಫಲ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿರುವ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ೧೯ ತೋಡು ಬಾವಿ ಹಾಗೂ ೨೬ ಕೊಳವೆಬಾವಿಗಳು ಸೇರಿ ಒಟ್ಟು ೪೫ ನಿರೀಕ್ಷಣಾ ಬಾವಿಗಳಿಂದ ಪ್ರತಿ ಮಾಹೆಯಲ್ಲಿ ಸ್ಥಿರ ಜಲಮಟ್ಟ ದಾಖಲು ಮಾಡಲಾಗುತ್ತಿತ್ತು. ಪ್ರಸ್ತುತವಾಗಿ ಕುಶಾಲನಗರ ೧ ಕೊಳವೆ ಬಾವಿಯು ಇರುವ ಸ್ಥಳದಲ್ಲಿ ಕೋರ್ಟ್ ನಿರ್ಮಾಣ ಮತ್ತು ವಿರಾಜಪೇಟೆಯ ೧ ಕೊಳವೆಬಾವಿ ಇರುವ ಸ್ಥಳದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡಿರುವುದರಿಂದ ಮುಚ್ಚಲಾಗಿದೆ ಎಂದು ಸುಧಾ.ಎಸ್ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಕುಮಾರಸ್ವಾಮಿ ಮಾತನಾಡಿ, ೨೦೨೫-೨೬ ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ೯೮ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೂ ವಿಜ್ಞಾನಿ ದೀಕ್ಷಿತ್ ಮಾತನಾಡಿ, ಜಿಲ್ಲೆಯ ವಿವಿಧೆಡೆ ನೀರಿನ ಮಾದರಿ ಪರೀಕ್ಷೆಗಳ ವಿವರಣೆ ನೀಡಿದರು. ಅಲ್ಲದೇ ನೀರಿನ ಮಾದರಿ ಪರೀಕ್ಷೆಯಲ್ಲಿ ಕಂಡು ಬಂದಿರುವ ರಾಸಾಯನಿಕ ವರದಿಗಳನ್ನು ವಿಸ್ತತವಾಗಿ ಮಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಕಾಲ ಕಾಲಕ್ಕೆ ನೀರಿನ ಮಾದರಿಯನ್ನು ಪರೀಕ್ಷಿಸಿ ಶುದ್ಧ ನೀರನ್ನು ಕುಡಿಯಲು ಪೂರೈಸಬೇಕು ಮತ್ತು ಕೆರೆಗಳ ಸರ್ವೆ ಕಾರ್ಯ ಶೀಘ್ರ ನಡೆಯಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.