ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ವೀಡಿಯೋ ಹರಿಯಬಿಟ್ಟ ಕಿಡಿಗೇಡಿಗಳ ಕೃತ್ಯ ಖಂಡಿಸಿ ಮಡಿಕೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಾಪಂಡ ರವಿಕಾಳಪ್ಪ, ಎಂ.ಪಿ. ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಅರುಣ್ ಜೈನಿ, ಪಿ. ಕಲಾವತಿ ಮತ್ತಿತರರು ಇದ್ದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ವೀಡಿಯೋ ಹರಿಯಬಿಟ್ಟ ಮಡಿಕೇರಿಯ ಕೆಲವು ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ನಗರ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ವೀಡಿಯೋ ಮಾಡಿದ ಕಿಡಿಗೇಡಿಗಳು ಕೆಲಸ ಮಾಡುತ್ತಿದ್ದ ಸಾಂಬಾರ ಪದಾರ್ಥಗಳನ್ನು ಮಾರುತ್ತಿದ್ದ ಮಳಿಗೆಯನ್ನು ಮುಚ್ಚಿಸಲಾಯಿತು. ಈ ಸಂದರ್ಭ ಪೊಲೀಸರು ಮತ್ತು ಮಾಜಿ ಎಂಎಲ್‌ಸಿ ಎಂ.ಪಿ. ಸುನಿಲ್ ಸುಬ್ರಹ್ಮಣಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಜಿಲ್ಲೆಯ ಪೊಲೀಸರು ಕಾಂಗ್ರೆಸ್ ಕೈಗೊಂಬೆಗಳಾಗಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಗಂಭೀರವಾಗಿ ಆರೋಪಿಸಿದರು. ಮಳಿಗೆ ಒಳಗೆ ಮಾರಕಾಯುಧಗಳು ಇರುವ ಸಾಧ್ಯತೆ ಇದ್ದು ಪೊಲೀಸರು ತಪಾಸಣೆ ನಡೆಸುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಒತ್ತಾಯಿಸಿದರು.
ಇದಕ್ಕೂ ಮೊದಲು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ಮಾತನಾಡಿದ ನಾಪಂಡ ರವಿ ಕಾಳಪ್ಪ, ಕರ್ನಾಟಕದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಮಡಿಕೇರಿಯಲ್ಲಿ ಮಳಿಗೆಯೊಂದರಲ್ಲಿ ಕೆಲಸ ಮಾಡುವ ಹುಡುಗರು ವಿಶ್ವನಾಯಕ ನರೇಂದ್ರ ಮೋದಿ ಅವರ ಬಗ್ಗೆ ಅತ್ಯಂತ ಅಶ್ಲೀಲ ಮತ್ತು ಕೆಟ್ಟ ಶಬ್ದಗಳಿಂದ ನಿಂದಿಸಿ ಯಾವುದೇ ಭಯ ಇಲ್ಲದೆ ವೀಡಿಯೋ ಮಾಡಿರುವುದೇ ಇದಕ್ಕೆ ಸಾಕ್ಷಿ. ಶಾಂತಿಪ್ರಿಯ ಜಿಲ್ಲೆಯಾಗಿರುವ ಕೊಡಗಿನಲ್ಲಿ ಶಾಂತಿ ಕದಡುವ ಉದ್ದೇಶದಿಂದ ಪ್ರಧಾನಿ ಅವರನ್ನು ನಿಂದಿಸುವ ಕೆಲಸವನ್ನು ಕೆಲವು ಯುವಕರು ಮಾಡಿದ್ದಾರೆ. ಪೊಲೀಸರು ಈ ಯುವಕರನ್ನು ಬಂಧಿಸಿದ್ದಾರೆ. ಆದರೆ ಇವರು ಒಂದು ದಿನದಲ್ಲಿ ಮತ್ತೆ ಹೊರಬಂದು ಸಮಾಜದಲ್ಲಿ ಅಶಾಂತಿ ಹರಡಲು ಅವಕಾಶ ಮಾಡಿಕೊಡದಂತೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಥವಾ ಆ ಕಿಡಿಗೇಡಿಗಳನ್ನು ಕೊಡಗಿನಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಪುನಃ ಇಂಥ ದುಷ್ಕೃತ್ಯಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮುಂದುವರಿಸುತ್ತಾರೆ. ಇದು ಹೀಗೆ ಮುಂದುವರಿದರೆ ಇದಕ್ಕೆ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಈಗ ಮತ್ತೆ ಸರ್ಕಾರದ ವೈಫಲ್ಯ, ಕುರ್ಚಿ ಗಲಾಟೆ ಮುಚ್ಚಿಡಲು ಟಿಪ್ಪು ಜಯಂತಿ ಆಚರಣೆ ಮುನ್ನಲೆಗೆ ತಂದಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಬಿಡುವುದಿಲ್ಲ ಎಂದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ವಿಶ್ವಗುರು ನರೇಂದ್ರ ಮೋದಿ ಅವರನ್ನು ಅವಹೇಳನಕಾರಿಯಾಗಿ ಮತ್ತು ತುಚ್ಛವಾಗಿ ನಿಂದಿಸಿ ವೀಡಿಯೋ ವೈರಲ್ ಮಾಡಿದವರನ್ನು ಕಂಡಲ್ಲಿ ಗುಂಡಿಕ್ಕುವ ಕೆಲಸ ಮಾಡಬೇಕು. ಇವರು ಪಾಕಿಸ್ತಾನಕ್ಕೆ ಜೈ ಎನ್ನುವ ಮನೋಭಾವದವರು. ಇವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಅಂತವರಿಗೆ ಇಲ್ಲಿ ಜೀವನ ಮಾಡಲು ಹಕ್ಕು ಇಲ್ಲ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗೀಜಿ ಮಾಡಿದಂತೆ ಈ ಕಿಡಿಗೇಡಿಗಳ ಮನೆ ನೆಲಸಮ ಮಾಡಬೇಕು. ನಮ್ಮ ನೆಲದ ಗಾಳಿ, ನೀರು ಸೇವಿಸಿ ಪ್ರಧಾನಿ ವಿರುದ್ಧ ಕ್ಷÄಲ್ಲಕವಾಗಿ ಮಾತನಾಡುವವರ ಹಿಂದೆ ಕಾಂಗ್ರೆಸ್ ಕುಮ್ಮಕ್ಕು ಇದೆ.
ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಕೆ.ಎಸ್. ರಮೇಶ್, ಉನ್ನಿಕೃಷ್ಣ, ಪಿ.ಎಂ. ರವಿ, ಹೊಸೂರು ಸತೀಶ್ ಜೋಯಪ್ಪ, ಅರುಣ್ ಶೆಟ್ಟಿ, ಪ್ರಕಾಶ್, ಶ್ವೇತಪ್ರಶಾಂತ್ ಮತ್ತಿರರು ಇದ್ದರು.