ನಗರದ ಕಾವೇರಿ ಹಾಲ್‌ನಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಬ್ಯಾರಿ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಯು.ಟಿ.ಖಾದರ್ ಚಾಲನೆ ನೀಡಿದರು. ಮಂತರ್‌ಗೌಡ, ಬಿ.ಎ.ಷಂಶುದ್ದೀನ್ ಇತರರಿದ್ದರು.
- ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ೧ ಕೋಟಿ
- ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ: ಯು.ಟಿ.ಖಾದರ್
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಒದಗಿಸಲಾಗುವುದು. ಆ ನಿಟ್ಟಿನಲ್ಲಿ ಜಾಗ ಗುರುತಿಸುವಂತೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಬ್ಯಾರೀಸ್ ವೆಲ್‌ಫೇರ್ ಟ್ರಸ್ಟ್ ಮಡಿಕೇರಿ ಇವರ ಸಹಯೋಗದಲ್ಲಿ ನಗರದ ಕಾವೇರಿ ಹಾಲ್‌ನಲ್ಲಿ ಮಂಗಳವಾರ ನಡೆದ ಕೊಡಗು ಜಿಲ್ಲಾ ಬ್ಯಾರಿ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಸ್ಥಳೀಯ ಶಾಸಕರಾದ ಡಾ.ಮಂತರ್‌ಗೌಡ ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಹಕಾರದಿಂದ ಒಟ್ಟು ಒಂದು ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ವಿಧಾನಸಭೆಯ ಸಭಾಧ್ಯಕ್ಷರು ಭರವಸೆ ನೀಡಿದರು.
ಬ್ಯಾರಿ ಸಂಸ್ಕೃತಿ, ಸಾಹಿತ್ಯ, ಪರಂಪರೆಗೆ ತನ್ನದೇ ಇತಿಹಾಸ ಇದ್ದು, ಬ್ಯಾರಿ ಸಂಸ್ಕೃತಿ, ಸಾಹಿತ್ಯ, ಪರಂಪರೆ ಉಳಿಸಿ ಬೆಳೆಸಲು ಶ್ರಮಿಸಬೇಕು. ಬ್ಯಾರಿ ಸಾಹಿತ್ಯ ಸಮ್ಮೇಳನದಿಂದ ಬ್ಯಾರಿ ಭಾಷೆ ಬೆಳವಣಿಗೆ ಜೊತೆಗೆ ಚಿಂತನ ಮಂಥನಗಳು ನಡೆಯಲಿದ್ದು, ಸಮಾಜ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.
ಬ್ಯಾರಿ ಸಾಹಿತ್ಯ ಸಮ್ಮೇಳನದಿಂದ ಯುವಜನರಿಗೆ ಬ್ಯಾರಿ ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುಕೂಲ ಆಗಲಿದ್ದು, ಅಭಿಪ್ರಾಯ ಹಂಚಿಕೊಳ್ಳಲು ಸಹಕಾರಿಯಾಗಲಿದೆ. ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನವಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ, ಸಹಯೋಗ ಅತ್ಯಗತ್ಯ ಎಂದು ವಿಧಾನಸಭೆಯ ಸಭಾಧ್ಯಕ್ಷರು ಅಭಿಪ್ರಾಯಪಟ್ಟರು.
ಬ್ಯಾರಿ ಸಾಹಿತ್ಯ ಅಭಿವೃದ್ಧಿಗೆ ಹಸನಬ್ಬ, ಷಂಶುದ್ದೀನ್ ಸೇರಿದಂತೆ ಹಲವರು ಬ್ಯಾರಿ ಸಾಹಿತ್ಯಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು, ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಯುವಜನರು ಬ್ಯಾರಿ ಸಾಹಿತ್ಯ ಪುಸ್ತಕ ಸಂಸ್ಕೃತಿಗೆ ಒತ್ತು ನೀಡಬೇಕು. ಜೊತೆಗೆ ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಪುಸ್ತಕ ಅಭಿರುಚಿ ಬೆಳೆಯಬೇಕು. ಮಕ್ಕಳನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಪುಸ್ತಕ ಸಂಸ್ಕೃತಿ ಅಧ್ಯಯನ ಸಹಕಾರಿ ಎಂದು ಯು.ಟಿ.ಖಾದರ್ ಹೇಳಿದರು.
ಸಹೋದರತ್ವ, ಸಹಭಾಗಿತ್ವ ಪ್ರತಿಯೊಬ್ಬರಲ್ಲೂ ಅತ್ಯಗತ್ಯ. ಆ ನಿಟ್ಟಿನಲ್ಲಿ ಭಿನ್ನಾಭಿಪ್ರಾಯವನ್ನು ಕ್ರೋಢೀಕರಿಸಿ ಒಟ್ಟುಗೂಡುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಸಮಾಜವನ್ನು ಕಟ್ಟಬೇಕು. ಸಮಸ್ಯೆಗಳು ಬಂದಾಗ ಸಕಾರಾತ್ಮಕವಾಗಿ ಬಗೆ ಹರಿಸಿಕೊಳ್ಳಬೇಕು. ತಾಳ್ಮೆ, ಸಹನೆ, ಅತ್ಯಗತ್ಯ. ಆ ನಿಟ್ಟಿನಲ್ಲಿ ಬಲಿಷ್ಠ ಭಾರತ ನಿರ್ಮಾಣದತ್ತ ಮುಂದಾಲೋಚನೆ ಇರಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಸಮಾಜದಲ್ಲಿ ಎಲ್ಲರ ಸಹಕಾರ ಅಗತ್ಯ. ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು. ಎಲ್ಲರಿಗೂ ಗೌರವ ತರುವ ಕೆಲಸ ಮಾಡಬೇಕು. ಎಲ್ಲಾ ಭಾಷೆಯನ್ನು ಪ್ರೀತಿಸಬೇಕು. ಕಲಿಯಲು ಪ್ರಯತ್ನಿಸಬೇಕು. ವಿಶ್ವ ಒಂದು ಹಳ್ಳಿಯಾಗಿದ್ದು, ಸಾಮರಸ್ಯ ಬದುಕಿಗೆ ಎಲ್ಲಾ ಭಾಷೆ ಕಲಿಯಬೇಕು ಎಂದರು.
ಮಕ್ಕಳ ಶಿಕ್ಷಣ, ಭವಿಷ್ಯದ ಬಗ್ಗೆ ಯೋಚಿಸಬೇಕು. ಬಡತನದಲ್ಲಿ ಹುಟ್ಟಿರಬಹುದು. ಆದರೆ ಅದನ್ನು ಮೆಟ್ಟಿ ಒಳ್ಳೆಯ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ವಿಧಾನ ಸಭೆಯ ಸಭಾಧ್ಯಕ್ಷರು ವಿವರಿಸಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿದಲ್ಲಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಬ್ಯಾರಿ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಕೊಡಗು ಜಿಲ್ಲೆಯವರಿಗೂ ಅವಕಾಶ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಕೋರಿದರು.
ಸಮ್ಮೇಳನ ಅಧ್ಯಕ್ಷ ಬಿ.ಎ.ಷಂಶುದ್ದೀನ್ ಮಾತನಾಡಿ, ಬ್ಯಾರಿ ಸಮುದಾಯದ ಬೆಳವಣಿಗೆಯನ್ನು ಗಮನಿಸಿದಾಗ ದೇಶದ ಒಂದು ಮೂಲೆಯಲ್ಲಿದ್ದ ಈ ಸಣ್ಣ ಸಮುದಾಯ ಮುಂದಿನ ದಿನಗಳಲ್ಲಿ ರಾಜ್ಯ ಮಾತ್ರವಲ್ಲ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಮಿಂಚುವ ಸುಳಿವನ್ನು ನೀಡುತ್ತಿದೆ. ನಲುವತ್ತು ವರ್ಷಗಳ ಹಿಂದೆ ಬ್ಯಾರಿ ಸಮುದಾಯದಲ್ಲಿ ಪದವೀಧರರ ಸಂಖ್ಯೆ ಬಹಳ ಕಡಿಮೆ ಇತ್ತು. ಎಸ್ಸೆಸ್ಸೆಲ್ಸಿ ವರೆಗೆ ಓದಿದವರ ಪ್ರಮಾಣ ಕೂಡ ಶೇ.೫೦ ಮುಟ್ಟಿರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುವವರೇ ಇರಲಿಲ್ಲ. ಬ್ಯಾರಿ ಆಂದೋಲನ ಪ್ರಾರಂಭವಾದ ಬಳಿಕ, ಅದರಲ್ಲೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡ ಬಳಿಕ ಬ್ಯಾರಿಗಳಲ್ಲಿ ಒಂದು ರೀತಿಯ ಕ್ರಾಂತಿಯೇ ಉಂಟಾಯಿತು ಎಂಬುದು ಗಮನಾರ್ಹ ಎಂದರು.
ಶಿಕ್ಷಣಕ್ಕೆ ಒತ್ತು ಕೊಡುವ ಮೂಲಕ ಬ್ಯಾರಿಗಳಲ್ಲಿ ಇದ್ದ ಕೀಳರಿಮೆ ಮಾಯವಾಗುತ್ತಾ ಬಂತು ಹಾಗೂ ಸಾಮಾನ್ಯವಾಗಿ ವ್ಯಾಪಾರ ಮತ್ತು ಶ್ರಮದ ಕೆಲಸಗಳನ್ನೇ ಮಾಡುತ್ತಾ ಬಂದಿದ್ದ ಬ್ಯಾರಿಗಳು ಬೇರೆ ಕ್ಷೇತ್ರಗಳತ್ತ ಮುಖ ಮಾಡುವಂತಾಯಿತು. ಡಾಕ್ಟರ್, ಎಂಜಿನಿಯರ್, ಶಿಕ್ಷಕರು, ವಕೀಲರು ಹೀಗೆ ಬೇರೆ ಬೇರೆ ಸೇವೆಗಳಲ್ಲಿ ಮಾತ್ರವಲ್ಲ, ಸರಕಾರಿ ಸೇವೆಗಳಲ್ಲೂ ಬ್ಯಾರಿಗಳು ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದರು ಎಂದರು.
ಹಿರಿಯ ಸಾಹಿತಿ ಹಾಗೂ ಚಿಂತಕರಾದ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಬ್ಯಾರಿ ಭಾಷೆಯ ಗುಣ ವಿಶೇಷತೆಯ ಸಂವರ್ಧನೆಯ ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡಂತೆ ಇತ್ತು. ನಮ್ಮ ನಾಡಗೀತೆ ಈ ನೆಲದ ಗೌರವವನ್ನು ಗೌರವಿಸುವ ರೀತಿಯಲ್ಲಿ ಬ್ಯಾರಿ ಭಾಷೆಯ ಗುಣ ವಿಶೇಷತೆಯ ಸಂವರ್ಧನೆಯ ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡಂತೆ ಇತ್ತು ಎಂದರು.
ನಮ್ಮ ನಾಡಗೀತೆ ಈ ನೆಲದ ಗೌರವವನ್ನು ಗೌರವಿಸುವ ರೀತಿಯಲ್ಲಿದೆ. ನಮ್ಮ ಸಂಸ್ಕೃತಿ ಪ್ರತೀಕವಾದ ರೀತಿಯಲ್ಲಿ ಪ್ರಾರಂಭವಾಯಿತು. ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕ. ಭಾರತ ರಾಷ್ಟ್ರವಾದರೆ, ಕರ್ನಾಟಕ ಆ ರಾಷ್ಟ್ರದೊಳಗಿನ ಪ್ರದೇಶ. ಇಂತಹ ಹಲವು ಪ್ರದೇಶಗಳನ್ನು ಒಳಗೊಂಡ ರೀತಿಯ ಒಳಗೆ ಒಕ್ಕೂಟ ವ್ಯವಸ್ಥೆ ಗಣತಂತ್ರ ವ್ಯವಸ್ಥೆ ರೂಪಿತವಾಗಿದೆ ಎಂದರು.
ಕರ್ನಾಟಕದಲ್ಲಿ ಸಂವಿಧಾನ ಬದ್ದ ರೀತಿಯಲ್ಲಿ ಸರ್ಕಾರಗಳು ಹೇಗೆ ನಡೆದುಕೊಳ್ಳುತ್ತಿದೆ. ಇದುವರೆಗೂ ಹೇಗೆ ನಡೆದುಕೊಂಡು ಬಂದಿದೆ ಎನ್ನುವುದಕ್ಕೆ ಈ ನೆಲದೊಳಗೆ ಇರುವ ಎಲ್ಲಾ ಸಂಸ್ಕೃತಿಗಳನ್ನು ಎಲ್ಲಾ ಭಾಷೆಗಳನ್ನು ಗೌರವಿಸುವ ರೀತಿ ಒಳಗೆ ನಮ್ಮಲ್ಲಿ ಅಕಾಡೆಮಿಗಳಿವೆ. ಕೇವಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಇಲ್ಲ. ಬ್ಯಾರಿ, ಕೊಂಕಣಿ, ತುಳು, ಕೊಡವ, ಅರೆಭಾಷೆ ಸೇರಿದಂತೆ ಒಟ್ಟು ೧೪ ಅಕಾಡೆಮಿಗಳಿದ್ದು, ೪ ಪ್ರಾಧಿಕಾರಿಗಳಿವೆ. ಇದು ನಮ್ಮ ಬಹುತ್ವ ಭಾರವನ್ನು ಗೌರವಿಸಿದ ರೀತಿಯೊಳಗೆ ರೂಪುಗೊಂಡಿದೆ ಎಂದರು.
ಈ ಸಂಸ್ಕೃತಿ, ಜನಾಂಗ ಎನ್ನುವುದನ್ನು ಒಂದು ಚಾರಿತ್ರಿಕ ಹಿನ್ನೋಟವನ್ನು ಇಟ್ಟುಕೊಂಡಂತೆ ವರ್ತಮಾನದ ಮುಖ ಮುಖಿತ್ವದ ಒಳಗೆ ಸಂಚರಿಸಿದ ರೀತಿ ಅರಿತುಕೊಳ್ಳಬೇಕು. ಈ ಸಮುದಾಯದ ಮನೆ ಭಾಷೆ ಬ್ಯಾರಿ. ಆದರೆ ಮಾತೃಭಾಷೆ ಕನ್ನಡ. ಪರಿಸರ ಹಾಗೂ ರಾಜ್ಯ ಭಾಷೆ ಅದು. ಮಾತೃ ಭಾಷೆ ಎಂದು ಕರೆಯಬಹುದಾದ ಈ ಪರಿಸರ ಭಾಷೆಯನ್ನು ಎಲ್ಲ ಜನರ ಜೊತೆಯೊಳಗೆ ಸಂವಾಹನಕ್ಕೆ ಬಳಕೆಯಾಗುವ ಭಾಷೆಯನ್ನು ರಾಜ್ಯ ಭಾಷೆ ಎಂದು ಹೇಳಲಾಗುತ್ತದೆ. ೨೨ ಭಾಷೆಯ ಅಂಗೀಕೃತ ಭಾಷೆ ಕನ್ನಡ. ಈ ಭಾಷೆಯ ನೆಲ, ಧರ್ಮ, ಪ್ರಜಾಪ್ರಭುತ್ವವನ್ನು ಗೌರವಿಸುವ ರೀತಿಯೊಳಗೆ ಈ ಜನಾಂಗ, ಸಂಸ್ಕೃತಿ, ಭಾಷೆ ಒಂದು ರೀತಿಯ ಬದುಕು ಕಟ್ಟಿಕೊಂಡಿದೆ ಎನ್ನುವುದು ಬಹಳ ಮಾದರಿಯಾಗಿದೆ ಎಂದು ಎಸ್.ಜಿ.ಸಿದ್ಧರಾಮಯ್ಯ ಅವರು ವಿವರಿಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮಹೇಶ್ ನಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿ.ಹಸನಬ್ಬ, ಅಮೀನ್ ಮೊಹಿಸಿನ್, ಮನ್ಸೂರ್, ಮಹಮ್ಮದ್, ಮಡಿಕೇರಿ ನಗರಸಭೆ ಸದಸ್ಯರಾದ ಎಂ.ಎ.ಮುಸ್ತಫಾ, ಬಶೀರ್ ಅಹ್ಮದ್, ನಾಮ ನಿರ್ದೇಶಿತ ಸದಸ್ಯರಾದ ಮಹಮ್ಮದ್ ಯಾಕೂಬ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಹೆಚ್.ಉಮರ್, ಮುನೀರ್ ಅಹಮದ್ ಸೇರಿದಂತೆ ಇತರರು ಇದ್ದರು.
ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಮ್ಮೇಳನಾಧ್ಯಕ್ಷರಾದ ಬಿ.ಎ.ಷಂಶುದ್ದೀನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಮ್ಮೇಳನದಲ್ಲಿ ವಿವಿಧ ಕಾರ್ಯಕ್ರಮ
ನಗರದ ಕ್ರೆಸೆಂಟ್ ಶಾಲೆಯಿಂದ ಕಾವೇರಿ ಹಾಲ್ ತನಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮಡಿಕೇರಿ ನಗರಸಭೆ ಸದಸ್ಯರಾದ ಅಮೀನ್ ಮೊಹ್ಸಿನ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ನಂತರ ಬ್ಯಾರಿ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚೆ ನಡೆಯಿತು. ಸಂಜೆಯ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ, ಸಮ್ಮೇಳನದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಮ್ಮೇಳನದಲ್ಲಿ ದಫ್, ಒಪ್ಪನೆ ಪಾಟ್, ಕೋಲ್ಕಲಿ ಮತ್ತು ಮಂಗಳೂರಿನ ಕಲಾತಂಡದಿಂದ ಬ್ಯಾರಿ ಹಾಡುಗಳು ಗಮನ ಸೆಳೆಯಿತು.