ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿಶೇಷ ಶಿಬಿರದಲ್ಲಿ ಪೂಜಾ ಸಜೇಶ್ ಮಾತನಾಡಿದರು. ತೃಪ್ತಿ ಬೋಪಣ್ಣ, ರೆ.ಫಾ. ಮದಲೈ ಮುತ್ತು, ರೆ.ಫಾ ಜೇಮ್ಸ್ ಡೊಮಿನಿಕ್, ಗೋಪಾಲ್ ಬೋಪಯ್ಯ, ಶಾಂತಿ ಭೂಷಣ್, ಪ್ರಸನ್ನ ಸುಬ್ಬಯ್ಯ, ಸತೀಶ್, ಫ್ಯಾನ್ಸಿ ಆಶಾ ಇದ್ದರು.
ವಿರಾಜಪೇಟೆ : ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಜತೆಗೆ ಸಾಮಾಜಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ಸಜೇಶ್ ಕಿವಿಮಾತು ಹೇಳಿದರು.
ಕೊಡಗು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸೈಂಟ್ ಆನ್ಸ್ ಪದವಿ ಕಾಲೇಜು ಸಹಯೋಗದಲ್ಲಿ ಕಲ್ತೋಡು ನಾಂಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರ 2025-26ಕ್ಕೆ ಚಾಲನೆ ನೀಡಿ ಮಾತನಾಡಿ, ಕಲಿಕೆಯೊಂದಿಗೆ ಸಮಾಜದ ಆಗೂಹೋಗುಗಳಿಗೆ ಪ್ರತಿಸ್ಪಂದಿಸುವ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ವಿದಾರ್ಥಿಗಳು ತಮ್ಮ ಜೀವನ ನಿರ್ಧರಿಸಲು ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ನಿಶ್ವಾರ್ಥ ಸೇವೆ ಮುಖ್ಯ, ಹಣದಾಹಕ್ಕೆ ಬಲಿಯಾಗದೆ ಪಾರದರ್ಶಕ ಆಡಳಿತ ನೀಡಲು ಉತ್ತಮ ನಾಯಕತ್ವ ಗುಣಗಳನ್ನು ಹೊಂದುವುದು ಮುಖ್ಯ. ಶಿಬಿರದಲ್ಲಿ ಕಲಿಯುವ ಪ್ರತಿಯೊಂದೂ ವಿಷಯಗಳು ಜೀವನದಲ್ಲಿ ರೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಮತ್ತು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ.ಜೇಮ್ಸ್ ಡೊಮಿನಿಕ್ ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ ಮದಲೈ ಮುತ್ತು ಶಿಬಿರದ ಪ್ರತಿಜ್ಞಾ ವಿಧಿ ಬೋಧಿಸಿದರು. ಕಲ್ತೋಡು ನಾಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಆಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಂಗಾಲ ಗ್ರಾಮ ಸ್ಥಳ ದಾನಿಗಳಾದ ಕುಪ್ಪಂಡ ಗೋಪಾಲ್ ಬೋಪಯ್ಯ, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ತೃಪ್ತಿ ಬೋಪಣ್ಣ ಮಾತನಾಡಿದರು. ಕಲ್ತೋಡು ನಾಂಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಫ್ಯಾನ್ಸಿ ಲೋಬೋ, ಶಿಬಿರಾಧಿಕಾರಿ ಬಿ.ಎನ್. ಶಾಂತಿಭೂಷಣ್ , ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಶಿಬಿರಾರ್ಥಿಗಳು ಇದ್ದರು.