ಭರದಿ0ದ ನಡೆಯುತ್ತಿರುವ ಕುಶಾಲನಗರದ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಕಾಮಗಾರಿ
ಬಹು ನಿರೀಕ್ಷಿತ ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಎಲ್ಲವೂ ಅಂದುಕೊAಡAತೆ ಆದರೆ ಮಳೆಗಾಲದ ಒಳಗೆ ಕಾರ್ಯಾಚರಣೆ ಶುರು ಮಾಡುವ ಎಲ್ಲಾ ಸಾಧ್ಯತೆಗಳಿವೆ. ಒಟ್ಟು 8 ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನೆಲಕ್ಕೆ ಕಾಂಕ್ರಿಟ್ ಹಾಕುವುದು ಮತ್ತು ಯಂತ್ರೋಪಕರಣಗಳ ಅಳವಡಿಕೆ ಕೆಲಸ ನಡೆಯಬೇಕಿದೆ. ಇಲ್ಲಿ ಬಸ್ ಡಿಪೋ ಶುರುವಾದ ನಂತರ ಕೊಡಗಿನ ಸಾರಿಗೆ ಸಮಸ್ಯೆಗಳಿಗೆ ದೊಡ್ಡ ಮಟ್ಟಿಗಿನ ಪರಿಹಾರ ಸಿಗಲಿದೆ.
ಪಶ್ಚಿಮ ಘಟ್ಟದ ಸೆರಗಿನಲ್ಲಿ ಇರುವ ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿನ ಕೆಲವು ಕುಗ್ರಾಮಗಳಿಗೆ ಈಗಲೂ ಬಸ್ ಸಂಪರ್ಕ ಇಲ್ಲ. ಜಿಲ್ಲೆಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚು ಇರುತ್ತದೆ. ಆದರೆ ಭಾಗಮಂಡಲ, ತಲಕಾವೇರಿಯಂಥ ಯಾತ್ರಸ್ಥಳಗಳು ಸೇರಿ ಬಹುತೇಕ ಪ್ರವಾಸಿ ತಾಣಗಳಿಗೆ ಕೆಎಸ್‌ಆರ್‌ಟಿ ಬಸ್ ವ್ಯವಸ್ಥೆಯ ಕೊರತೆ ಕಾಡುತ್ತಿದೆ. ಕೊಡಗಿನಲ್ಲಿ ಸದ್ಯಕ್ಕೆ ಮಡಿಕೇರಿಯಲ್ಲಿ ಮಾತ್ರ ಏಕೈಕ ಕೆಎಸ್‌ಆರ್‌ಟಿಇಸಿ ಬಸ್ ಡಿಪೋ ಇರುವ ಕಾರಣಕ್ಕೆ ಸಾರಿಗೆ ಸಂಪರ್ಕದಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡು ಬರುತ್ತಿದೆ.
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಓಡಾಡುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಕುಶಾಲನಗರ-ಮಡಿಕೇರಿ ಸೇರಿದಂತೆ ಜನಪ್ರಿಯ ಮಾರ್ಗಗಳ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ತೀವ್ರ ಒತ್ತಡ ಕಂಡುಬರುತ್ತಿದೆ. ವಾರಾಂತ್ಯ, ರಜಾದಿನಗಳಲ್ಲಂತೂ 2 ಬಸ್‌ಗಳ ಪ್ರಯಾಣಿಕರು ಒಂದೇ ಬಸ್‌ನಲ್ಲಿ ಸಂಚರಿಸುವ ಅನಿವಾರ್ಯತೆ ಇರುತ್ತದೆ. ಒಂದು ವೇಳೆ ಇಲ್ಲಿನ ಅಪಾಯಕಾರಿ ರಸ್ತೆಗಳಲ್ಲಿ ಇಂಥ ತುಂಬಿದ ಬಸ್‌ಗಳ ಅಪಘಾತ ಸಂಭವಿಸಿದರೆ ಉಂಟಾಗಬಹುದಾದ ಹಾನಿ ಊಹಿಸಲೂ ಸಾಧ್ಯವಿಲ್ಲ.
ಕೆಎಸ್‌ಆರ್‌ಟಿಸಿ ಮೂಲಗಳ ಪ್ರಕಾರ ಮಡಿಕೇರಿ ಡಿಪೋದಲ್ಲಿ 11 ರಾಜಹಂಸ ಸೇರಿದಂತೆ ಒಟ್ಟು 125 ಬಸ್‌ಗಳು ಇವೆ. ಪ್ರತಿನಿತ್ಯ ಸಂಚಾರದ 70 ಮಾರ್ಗಗಳು ಸೇರಿ 112 ಮಾರ್ಗಗಳಲ್ಲಿ ಬಸ್‌ಗಳು ಓಡಾಡುತ್ತಿವೆ. ಮೈಸೂರು, ಬೆಂಗಳೂರು ಹಾಗೂ ನಗರ ಪ್ರದೇಶಗಳಿಗೆ ಮಡಿಕೇರಿ ಡಿಪೋದಿಂದ ಹೆಚ್ಚಿನ ಬಸ್‌ಗಳನ್ನು ಬಿಡಲಾಗಿದೆ. ಆದರೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಆರೋಪಗಳಿವೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಕಚೇರಿ ಕೆಲಸಗಳಿಗೆ ತೆರಳುವವರಿಗೆ ತೊಂದರೆ ಆಗುತ್ತಿದೆ.
ಸಾರಿಗೆ ಸಂಪರ್ಕದಲ್ಲಿ ಆಗುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ವಿರಾಜಪೇಟೆ ಮತ್ತು ಕುಶಾಲನಗರಕ್ಕೆ ಡಿಪೋ ಬೇಕು ಎನ್ನುವುದು ಹಳೆಯ ಬೇಡಿಕೆ. ಈ ಮಧ್ಯೆ ಕುಶಾಲನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮಂಜೂರಾಗಿ, ಈ ಉz್ದೆÃಶಕ್ಕಾಗಿಯೇ ರಾಷ್ಟಿçÃಯ ಹೆದ್ದಾರಿ 275ರ ಕುಶಾಲನಗರ - ಮಡಿಕೇರಿ ಮಾರ್ಗದ ಬಸವನಹಳ್ಳಿ ಗ್ರಾಮದ ಸರ್ವೆ ನಂ. 1/1ರಲ್ಲಿ 4 ಎಕರೆ ಜಾಗ ಗುರುತಿಸಿ ಕೆಎಸ್‌ಆರ್‌ಟಿಸಿ ವಶಕ್ಕೆ ಪಡೆದುಕೊಂಡಿದ್ದರೂ ವಿವಿಧ ಕಾರಣಗಳಿಂದ ಯಾವುದೇ ಬೆಳವಣಿಗೆ ಆಗಿರಲಿಲ್ಲ. ನಂತರ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರಯತ್ನದ ಫಲವಾಗಿ ಯೋಜನೆಗೆ ಜೀವ ಸಿಕ್ಕಿತ್ತು.
2024ರ ಜನವರಿಯಲ್ಲಿ ಕೊಡಗಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ಡಿಪೋಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಅದೇ ವರ್ಷ ಮಾರ್ಚ್ 7ಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಾಮಗಾರಿಗೆ ಚಾಲನೆ ನೀಡಿದ್ದರು. ಅಲ್ಲಿಂದ ಈಚೆಗೆ ಚುರುಕಿನ ಕಾಮಗಾರಿ ನಡೆಯುತ್ತಿದ್ದು ಶೇ.70ರಷ್ಟು ಕೆಲಸ ಮುಗಿದಿರುವ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದಿರುವ ಕೆಲಸಗಳು ಇನ್ನು 2 ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು ಮಳೆಗಾಲ ಶುರುವಾಗುವುದರೊಳಗೆ ಡಿಪೋ ಕಾರ್ಯಾಚರಣೆ ಆರಂಭಿಸುವುದು ಬಹುತೇಕ ಖಚಿತವಾಗಿದೆ.
ಒಂದು ಬಸ್ ಡಿಪೋಕ್ಕೆ ಅಗತ್ಯವಿರುವ ಪೆಟ್ರೋಲ್ ಬಂಕ್, ವರ್ಕ್ಶಾಪ್, ಕಚೇರಿ, ಡಿಪೋ ಮ್ಯಾನೇಜರ್ ಚೇಂಬರ್, ಸಿಬ್ಬಂದಿ ವಸತಿ ಗೃಹ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಇಲ್ಲಿಯೂ ಒದಗಿಸಲಾಗುತ್ತದೆ. ಎಲೆಕ್ಟಿçಕ್ ಬಸ್‌ಗಳ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಟೆಂಡರ್‌ನಲ್ಲಿ ಇಲ್ಲ. ಆದರೆ ಈಗಿನ ಅಗತ್ಯಗಳಿಗೆ ತಕ್ಕಂತೆ ಸವಲತ್ತುಗಳನ್ನು ಕಲ್ಪಿಸುವ ಚಿಂತನೆಯೂ ಅಧಿಕಾರಿಗಳಲ್ಲಿ ಇದೆ. ಸದ್ಯ ಹೆಚ್ಚಿನ ಪಾಲು ಕಟ್ಟಡ ಕೆಲಸಗಳು ಮುಗಿವೆ. ಕೇಬಲ್ ಅಳವಡಿಕೆ, ಟ್ರಾನ್ಸ್ಫಾರ್ಮರ್ ಅಳವಡಿಕೆ, ಬಸ್‌ಗಳ ಸರ್ವೀಸ್‌ಗೆ ಅಗತ್ಯ ಇರುವ ಯಂತ್ರೋಪಕರಣಗಳ ಅಳವಡಿಕೆ, ನೆಲಕ್ಕೆ ಕಾಂಕ್ರಿಟ್ ಕೆಲಸ ಆಗಬೇಕಿದೆ.
ಇದೀಗ ಕಾಮಗಾರಿ ಶುರುವಾಗಿರುವ ಮೈಸೂರು - ಕುಶಾಲನಗರ ಚತುಷ್ಪಥ ಹೆದ್ದಾರಿ ಬಸವನಹಳ್ಳಿ ತನಕವೂ ಬರಲಿದ್ದು, ನೂತನ ಡಿಪೋಕ್ಕೆ ಈ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಜಿಎಸ್‌ಟಿ, ವಿನ್ಯಾಸ ವೆಚ್ಚ ಸೇರಿದಂತೆ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ಡಿಪೋ ತಲೆ ಎತ್ತುತ್ತಿದೆ. ಕುಶಾಲನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋಕ್ಕೆ ಬರಲಿರುವ ಬಸ್‌ಗಳ ಸಂಖ್ಯೆ ಇನ್ನೂ ನಿಗದಿಯಾಗಿಲ್ಲ. ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿಯಲ್ಲಿ ಕುಶಾಲನಗರ ಇರುವುದರಿಂದ ಇಲ್ಲಿಗೆ ಬಸ್‌ಗಳ ಬೇಡಿಕೆ ಹೆಚ್ಚಿದ್ದು, ಅದಕ್ಕೆ ಪೂರಕವಾಗಿ ಬಸ್‌ಗಳನ್ನು ಒದಗಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಶಾಲನಗರದಲ್ಲಿ ಬಸ್ ಡಿಪೋ ಕಾರ್ಯಾಚರಣೆಗೆ ಕಾಲ ಕೂಡಿಬರುತ್ತಿದ್ದಂತೆಯೇ ಕೊಡಗಿನಲ್ಲಿ ಪ್ರತ್ಯೇಕ ಕೆಎಸ್‌ಆರ್‌ಟಿಸಿ ವಿಭಾಗ ಬೇಡಿಕೆಗೆ ಮತ್ತೆ ಜೀವ ಬಂದಿದೆ. ಪ್ರಸ್ತುತ ಪುತ್ತೂರು ವಿಭಾಗದ ಅಡಿಯಲ್ಲಿ ಮಡಿಕೇರಿ ಡಿಪೋ ಕಾರ್ಯಾಚರಿಸುತ್ತಿದೆ. ಆಡಳಿತಾತ್ಮಕವಾಗಿ ಇದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎನ್ನುವುದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆರೋಪ. ವಿರಾಜಪೇಟೆಯಲ್ಲೂ ಒಂದು ಡಿಪೋ ಆರಂಭವಾದರೆ ಪಕ್ಕದ ಹಾಸನ ಜಿಲ್ಲೆಯ ಕೊಣನೂರು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಡಿಪೋ ಒಳಗೊಂಡು ಕೊಡಗಿಗೆ ಪ್ರತ್ಯೇಕ ವಿಭಾಗ ರೂಪಿಸಬಹುದಾಗಿದೆ. ಇದಕ್ಕೆ ಸಂಬAಧಿಸಿದAತೆ ವಿಭಾಗೀಯ ಕಾರ್ಯಾಗಾರಕ್ಕೆ ಕುಶಾಲನಗರ ಸೂಕ್ತ ಸ್ಥಳವಾಗಿದೆ ಎನ್ನುವ ಅಭಿಪ್ರಾಯಗಳು ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಯತ್ನಗಳು ನಡೆಯುತ್ತಿದ್ದು, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿಯನ್ನೂ ಸಲ್ಲಿಸಲಾಗಿದೆ.
ಕುಶಾಲನಗರ ತಾಲೂಕು ಜನತೆಯ ಬಹುದಿನಗಳ ಬೇಡಿಕೆ ಈಡೇರುವ ಕಾಲ ಬಂದಿದೆ. ಬಸವನಹಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ ಸಂಬAಧಿಸಿದAತೆ ಕೆಲಸಗಳು ಚುರುಕಾಗಿ ನಡೆದಿದೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು 1-2 ತಿಂಗಳಲ್ಲಿ ಡಿಪೋ ಸಂಪೂರ್ಣ ಸಿದ್ಧವಾಗಲಿದೆ. ಕುಶಾಲನಗರ ಡಿಪೋ ಕಾಯಾಚರಣೆ ಶುರು ಮಾಡಿದ ನಂತರ ಜಿಲ್ಲೆಯ ಸಾರಿಗೆ ಸಮಸ್ಯೆಗಳು ಬಹುತೇಕ ಪರಿಹಾರ ಆಗುವ ನಿರೀಕ್ಷೆ ಇದೆ.