ನಗರ ಕಾಂಗ್ರೆಸ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು 
ಕೊಡಗು

ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಕುಶಾಲನಗರ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ನಗರ ಕಾಂಗ್ರೆಸ್‌ನಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಣ ಮಾಡಿದ್ದನ್ನು ಖಂಡಿಸಿದ್ದಕ್ಕಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಅವರು ಭಾಷಣ ಮಾಡಿದ ರಾಮಲೀಲಾ ಮೈದಾನದ ಜಾಗವನ್ನು ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಗಂಗಾಜಲ ಸಿಂಪಡಿಸಿ ಶುದ್ಧೀಕರಣ ಮಾಡಿದ್ದು ದಲಿತ ಸಮುದಾಯಕ್ಕೆ ಮಾಡಿದ ಬಹುದೊಡ್ಡ ಅವಮಾನವಾಗಿದೆ. ಇದು ಅಸ್ಪೃಶ್ಯತೆಯ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ಪ್ರಶ್ನಿಸಿದ ರಾಹುಲ್ ಗಾಂಧಿಯವರ ಮೇಲೆ ಎಫ್‌ಐಆರ್ ದಾಖಲಿಸಿ ಬಾಯಿ ಮುಚ್ಚಿಸಲು ಬಿಜೆಪಿ ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಕೂಡಲೇ ಈ ಸುಳ್ಳು ಎಫ್‌ಐಆರ್ ರದ್ದು ಮಾಡಬೇಕು. ಇಲ್ಲದಿದ್ದರೆ ಕೊಡಗು ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮಾತನಾಡಿ, ರಾಹುಲ್ ಗಾಂಧಿಯವರು ದಲಿತರ ಪರ ಧ್ವನಿ ಎತ್ತಿದ್ದಕ್ಕೆ ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಲ್ದ್ವಾನಿಯಲ್ಲಿ ನಡೆದಿರುವುದು ಸಂವಿಧಾನ ವಿರೋಧಿ ನಡೆ. ಎಫ್‌ಐಆರ್ ಹಾಕುವ ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಗಿರುವ ಅವಮಾನ ಇಡೀ ದಲಿತ ಸಮುದಾಯಕ್ಕೆ ಆಗಿರುವ ಅವಮಾನ. ಇದನ್ನು ಪ್ರಶ್ನಿಸಿದ ರಾಹುಲ್ ಗಾಂಧಿಯವರ ಮೇಲೆ ಸೇಡಿನ ರಾಜಕಾರಣ ಮಾಡಿ ಎಫ್‌ಐಆರ್ ದಾಖಲಿಸಿರುವುದು ಬಿಜೆಪಿಯ ದುರಹಂಕಾರ. ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಹೆದರುವುದಿಲ್ಲ. ರಾಹುಲ್ ಗಾಂಧಿ ಜತೆ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಪುರಸಭೆ ಸದಸ್ಯರಾದ ಶಿವಶಂಕರ್, ಶೇಕ್ ಕಲೀಮುಲ್ಲಾ, ನಂಜುಂಡಸ್ವಾಮಿ, ಜಿ.ಬಿ.ಜಗದೀಶ್, ಮುಖಂಡರಾದ ಇರ್ಫಾನ್, ಕಿರಣ್, ನಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.