ಸೋಮವಾರಪೇಟೆ ಸಮೀಪದ ಕಾಜೂರು ಅರಣ್ಯದಲ್ಲಿ ಕಾಡುದನಗಳು ಬೀಡುಬಿಟ್ಟಿರುವುದು.
- ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆ
- ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ
ಸೋಮವಾರಪೇಟೆ: ಅಕಾಲಿಕ ಮಳೆಯಿಂದ ಕಾಫಿ ಫಸಲು ಕಳೆದುಕೊಂಡು ಕಂಗಾಲಾಗಿರುವ ಬೆಳೆಗಾರರನ್ನು ಕಾಡು ದನಗಳು ನಿದ್ದೆಗೆಡಿಸಿವೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡುದನಗಳ ಹಾವಳಿಯಿಂದ ಕೃಷಿಕರು ಬೇಸತ್ತಿದ್ದಾರೆ. ಐಗೂರು, ಕಾಜೂರು, ಯಡವಾರೆ, ಕಿರಗಂದೂರು, ಸಂಪಿಗೆಕೊಲ್ಲಿ, ಸಜ್ಜಳ್ಳಿ, ಹಾರಂಗಿ, ಹೇರೂರು, ಹೊಸತೋಟ, ಬಿಳಿಗೇರಿ ಮುಂತಾದ ಗ್ರಾಮಗಳಲ್ಲಿ ಕಾಫಿ ತೋಟದೊಳಗೆ ನುಗ್ಗುವ ಕಾಡುದನಗಳು ಕಾಫಿ ಹಣ್ಣುಗಳನ್ನು ತಿಂದು ಹಾನಿ ಮಾಡಿವೆ. ಈಗ ಬಹುತೇಕ ಕಡೆ ಕಾಫಿ ಹೂ ಅರಳಿದ್ದು, ತೋಟದೊಳಗೆ ಕಾಡುದನಗಳು ಓಡಾಡುವುದರಿಂದ ಹೂ ಉದುರುತ್ತಿದ್ದು ಫಸಲು ಹಾನಿಯಾಗುತ್ತಿದೆ ಎಂದು ಬೆಳೆಗಾರರು ದೂರಿದ್ದಾರೆ.
ಹತ್ತಾರು ಗೂಳಿಗಳು ಸೇರಿದಂತೆ 150ಕ್ಕೂ ಹೆಚ್ಚು ಕಾಡುದನಗಳು ಹಗಲಿನ ವೇಳೆ ಯಡವನಾಡು ಮೀಸಲು ಅರಣ್ಯದಲ್ಲಿ ವಿಶ್ರಾಂತಿ ಪಡೆದು ರಾತ್ರಿಯಾಗುತ್ತಿದಂತೆ ಕಾಫಿ ತೋಟ ಸೇರಿದಂತೆ ಕೃಷಿ ಭೂಮಿಗೆ ನುಗ್ಗುತ್ತಿವೆ. ವರ್ಷಪೂರ್ತಿ ಶ್ರಮಪಟ್ಟು ಬೆಳೆಸಿದ ಕಾಫಿ ಬೆಳೆ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗುತ್ತಿರುವುದನ್ನು ಕಂಡು ಕೃಷಿಕರು ಬೇಸರಗೊಂಡಿದ್ದಾರೆ.
ಕಾಫಿ ತೋಟಗಳಲ್ಲಿ ರಾತ್ರಿ ಕಾಡು ದನಗಳು ಗುಂಪು ಗುಂಪಾಗಿ ಉಳಿಯುತ್ತಿದ್ದು, ಗಿಡಗಳ ರೆಂಬೆಗಳನ್ನು ಮುರಿದು ಹಾಕುತ್ತಿವೆ. ಇದರಿಂದ ಉತ್ಪಾದನೆ ಕುಸಿಯುವ ಆತಂಕ ಕೃಷಿಕರನ್ನು ಕಾಡುತ್ತಿದೆ. ಈಗಾಗಲೇ ಕಾರ್ಮಿಕ ಕೊರತೆ, ಹವಾಮಾನ ವೈಪರಿತ್ಯ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಕಾಡು ದನಗಳ ಹಾವಳಿ ಮತ್ತೊಂದು ದೊಡ್ಡ ಹೊಡೆತವಾಗಿದೆ.
ಕೃಷಿ ಭೂಮಿಗಳಲ್ಲಷ್ಟೇ ಅಲ್ಲದೆ ಯಾಡವನಾಡು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ಗ್ರಾಮಾಂತರ ರಸ್ತೆಗಳಲ್ಲಿ ಕೂಡ ಕಾಡು ದನಗಳ ಅಟ್ಟಹಾಸ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ರಸ್ತೆಯ ಮಧ್ಯೆ ಗುದ್ದಾಡುತ್ತಾ ಓಡಾಡುವ ಕಾಡು ದನಗಳು ವಾಹನ ಚಾಲಕರಿಗೆ ಭಾರಿ ಅಪಾಯ ಉಂಟು ಮಾಡುತ್ತಿವೆ. ರಸ್ತೆ ಮೇಲೆ ದಿಢೀರ್ ಬಂದು ನಿಲ್ಲುವ ದನಗಳನ್ನು ತಪ್ಪಿಸಲು ಹೋಗಿ ಹಲವು ಬಾರಿ ವಾಹನಗಳು ಅಪಘಾತಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕ್ ಸವಾರರು ಹಾಗೂ ಕಾರು ಚಾಲಕರು ಭಯಭೀತರಾಗಿ ಸಂಚರಿಸುವಂತಾಗಿದೆ.
ಸ್ಥಳೀಯರು ಹೇಳುವಂತೆ, ಕಾಡು ದನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಹಾರ ಕೊರತೆಯೇ ಅವುಗಳನ್ನು ಮಾನವ ವಸತಿಗಳತ್ತ ತಳ್ಳುತ್ತಿದೆ. ಅರಣ್ಯದಲ್ಲಿ ನೀರು ಮತ್ತು ಮೇವು ಸೌಲಭ್ಯಗಳ ಕೊರತೆ ಇರುವುದರಿಂದ ದನಗಳು ತೋಟಗಳು ಹಾಗೂ ರಸ್ತೆ ಪ್ರದೇಶಗಳತ್ತ ವಲಸೆ ಬರುತ್ತಿವೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಕೃಷಿಕರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆ, ಪಶು ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಇದುವರೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಹೀಗಾಗಿ ಯಾಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ದನಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವುದು ಅತ್ಯವಶ್ಯಕವಾಗಿದೆ. ಇಲ್ಲವಾದರೆ ಈ ಹಾವಳಿ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರ ರೂಪ ತಾಳುವ ಭೀತಿ ಸ್ಥಳೀಯರಲ್ಲಿ ಮನೆ ಮಾಡಿದೆ.
ಕಾಡುದನಗಳಿಗೆ ವಾರಸುದಾರರಿಲ್ಲ. ಕಾಡಿನಲ್ಲೆ ಕರು ಹಾಕಿದಾಗ, ಕಾಡುದನಗಳ ಹಿಂಡು ಕರುಗಳನ್ನು ರಕ್ಷಿಸುತ್ತವೆ. ಹಿಂಡಿನಲ್ಲೇ ದನಗಳು ವಾಸಿಸುತ್ತವೆ. ಯಡವನಾಡು ಮೀಸಲು ಅರಣ್ಯದಲ್ಲಿ ಈ ಹಿಂಡುಗಳು ಹೆಚ್ಚಿಗೆ ಕಾಣಸಿಗುತ್ತವೆ.
ಕೆಲ ವರ್ಷದ ಹಿಂದೆ ಐಗೂರು ಗ್ರಾಮಪಂಚಾಯಿತಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆಯ ವತಿಯಿಂದ ಸಭೆ ನಡೆದಿದ್ದು, ಕಾಡುದನಗಳನ್ನು ಗೋಶಾಲೆಗೆ ಅಥವಾ ಬೇರೆ ಜಿಲ್ಲೆಗಳ ಮೀಸಲು ಅರಣ್ಯಕ್ಕೆ ಸಾಗಿಸಲು ಸೂಕ್ತ ಕ್ರಮಕೈಗೊಳ್ಳಲು ತೀರ್ಮಾನವಾಗಿತ್ತು. ಆದರೆ ಇದುವರೆಗೆ ಕ್ರಮಕೈಗೊಂಡಿಲ್ಲ ಕೂಡಲೆ ಸಭೆ ಕರೆದು ಕ್ರಮಕೈಗೊಳ್ಳಬೇಕು ಎಂಬುದು ರೈತರು ಆಗ್ರಹಿಸಿದ್ದಾರೆ.