ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಮಡಿಕೇರಿ ನಗರ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ 35ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನ ಕಾರ್ಯಕ್ರಮ ನಡೆಯಿತು. ಡಾ. ಸಂಜೀವ್ ಚೋಪ್ರ, ಎನ್.ಯು. ನಾಚಪ್ಪ. ಹೆಚ್. ವಿಶ್ವನಾಥ್, ಚಿರಿಯಪಂಡ ಸುರೇಶ್ ನಂಜಪ್ಪ, ಮುಂಡAಡ ನಾಣಯ್ಯ, ಡಾ. ಮಾತಂಡ ಅಯ್ಯಪ್ಪ ಮತ್ತಿತರರು ಇದ್ದರು. 
ಕೊಡಗು

ಮೊಳಗಿದ ಕೊಡವ ಲ್ಯಾಂಡ್ ಬೇಡಿಕೆ

ಸುನಿಲ್ ಪೊನ್ನೇಟಿ

ಪ್ರಮುಖ ಮುಖ್ಯಾಂಶಗಳು

  • 35ನೇ ವರ್ಷದ ಕೊಡವ ನ್ಯಾಷನಲ್ ಡೇ
  • ಸಿಎನ್‌ಸಿ ವತಿಯಿಂದ ಆಯೋಜನೆ
  • ಕೊಡವ ಲ್ಯಾಂಡ್‌ಗಾಗಿ ಸಂವಿಧಾನಾತ್ಮಕ ಹೋರಾಟ
ಮಡಿಕೇರಿ:
ತಮ್ಮ ಕಳೆದುಹೋದ ತಾಯಿನೆಲವನ್ನು ಸಂವಿಧಾನದ 5 ಮತ್ತು 6ನೇ ಶೆಡ್ಯೂಲ್‌ನಡಿ ಸಿಎನ್‌ಸಿ ಸಂಘಟನೆ ಕೇಳುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯ ಅತೀ ಮುಖ್ಯ ತಿರುಳಾಗಿದೆ ಎಂದು ಖ್ಯಾತ ರಾಜಕೀಯ ತಜ್ಞ ಡಾ. ಸಂಜೀವ್ ಚೋಪ್ರ ಹೇಳಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಬುಧವಾರ ಮಡಿಕೇರಿ ನಗರ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಏರ್ಪಡಿಸಲಾಗಿದ್ದ 35ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತ್ಯೇಕ ರಾಷ್ಟçವನ್ನು ಕೇಳುವುದು ಅವಾಸ್ತವಿಕ, ರಾಜ್ಯ ಕೇಳುವುದು ಜಟಿಲ ವಿಚಾರ ಹಾಗಾಗಿ ಎನ್.ಯು. ನಾಚಪ್ಪ ನೇತೃತ್ವದ ಸಿಎನ್‌ಸಿ ಸಂಘಟನೆ ಕೇಳುತ್ತಿರುವ ಕೊಡವಲ್ಯಾಂಡ್ ತೀರ ವಾಸ್ತವಿಕ ಮತ್ತು ಕಾರ್ಯಸಾಧನೆಯಾಗಲಿರುವ ಅಂಶವಾಗಿದೆ. ಪ್ರತ್ಯೇಕ ಭಾಷೆ, ಪ್ರತ್ಯೇಕ ಭೂ ಪ್ರದೇಶ, ಯೋಧ ಪರಂಪರೆ, ಪಾರಂಪರಿಕ ಭೂಮಿ, ಉನ್ನತ ಮಾನವ ಸಂಪನ್ಮೂಲ, ಬಸಿದರೂ, ಭಗೆದರೂ ಮುಗಿಯದಷ್ಟು ನೈಸರ್ಗಿಕ ಸಂಪನ್ಮೂಲ ಹೊಂದಿರುವ ಏಕ ಜನಾಂಗೀಯ ಆದಿಮಸಂಜಾತ ಆ್ಯನಿಮಿಸ್ಟಿಕ್ ನಂಬಿಗೆಯ ಕೊಡವರು ಕೊಡವಲ್ಯಾಂಡ್ ಮೂಲಕ ಸಂವಿಧಾನಾತ್ಮಕ ಸ್ಥಿರಿಕರ್ಣಕ್ಕಾಗಿ ಸಿಎನ್‌ಸಿಯೊಂದಿಗೆ ಗುರುತಿಸಿಕೊಳ್ಳುವುದು ಅತ್ಯಂತ ಸಮರ್ಥನೀಯ. ಸಿಎನ್‌ಸಿ ಮಂಡಿಸಿರುವ ಎಸ್‌ಟಿ ವರ್ಗೀಕರಣ, ವಿಶ್ವ ರಾಷ್ಟç ಸಂಸ್ಥೆಯ ಮಾನ್ಯತೆ, ಯುನೆಸ್ಕೋ ಮಾನ್ಯತೆ, ಕೊಡವ ಧಾರ್ಮಿಕ ಸಂಸ್ಕಾರ, ಬಂದೂಕಿಗೆ ಧಾರ್ಮಿಕ ಸ್ವಾತಂತ್ರö್ಯದ ಹಕ್ಕು ಮಾನ್ಯತೆ, ಕೊಡವ ತಕ್ಕನ್ನು ಪರಿಗಣಿಸಿ 8ನೇ ಶೆಡ್ಯೂಲ್‌ಗೆ ಸೇರಿಸುವುದು, ಕಾವೇರಿ ನೀರಿನ ಮೇಲಿನ ಹಕ್ಕು, ಕಾವೇರಿಯನ್ನು ಕೊಡವರ ತೀರ್ಥಯಾತ್ರೆ ಎಂದು ಪರಿಣಿಸುವುದು, ಕೊಡಗಿನೊಳಗೆ ಅನ್ಯ ಪ್ರದೇಶದ ಪಾತಕಿಗಳು ನುಸಳದಂತೆ ತಡೆಯಲು ಇನ್ನರ್‌ಲೈನ್ ಪರ್ಮಿಟ್, ದೇವಟ್ ಪರಂಬ್ ಸೇರಿದಂತೆ, ನಾಲ್ನಡ್ ಅರಮನೆ, ಮಡಿಕೇರಿ ಕೋಟೆ ಇತ್ಯಾದಿ ಕಡೆಗಳಲ್ಲಿ ಹಾಗೂ ಎಲ್ಲೆಲ್ಲಿ ಕೊಡವರ ಹೆಗ್ಗುರುತಿನ ಹೆಜ್ಜೆಗಳಿವೆಯೋ ಅಲ್ಲೆಲ್ಲ ಕೊಡವ ಸ್ಮಾರಕಗಳನ್ನು ನಿಲ್ಲಿಸುವುದು, ಕೊಡವರಿಗೆ ಪ್ರತ್ಯೇಕ ಮತ ಕ್ಷೇತ್ರ ನಿರ್ಮಿಸುವುದು, ಕಳೆದು ಹೋದ ಕೊಡವರ ಭೂಮಿಯನ್ನು ಮರು ಪಡೆಯುವುದು, ಮುಂದಿನ 2026ರ ಭಾರತೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸುವುದು ಸೇರಿದಂತೆ ಎಲ್ಲಾ ಹಕ್ಕುಗಳನ್ನು ಸಂವಿಧಾನದ 224, 371 ಮತ್ತು 5, 6ನೇ ಶೆಡ್ಯೂಲ್‌ಗಳಲ್ಲಿ ಪಡೆಯಲು ಎಲ್ಲಾ ರೀತಿಯ ಅವಕಾಶಗಳಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಮಾತನಾಡಿ ಕೊಡಗಿಗೆ ಮಾತ್ರ ಸೀಮಿತವಾಗಿರುವ ಈ ಕೊಡವರ ಕುಲ ಸಮಸ್ಯೆಯನ್ನು ಬಗೆಹರಿಸಿ ತಾರ್ಕಿಕ ಅಂತ್ಯಕ್ಕೆ ತಲುಪಿಸಲು ನಾನು ಸಂಸದ ಯದುವೀರ್ ಸೇರಿದಂತೆ ಎಲ್ಲರ ಬಳಿಗೂ ನಿಯೋಗ ಕೊಂಡೊಯ್ಯುತ್ತೇನೆ. ಇದಕ್ಕಾಗಿ ಸಂಜೀವ್ ಚೋಪ್ರರಂತಹ ಬುದ್ಧಿಜೀವಿಗಳನ್ನು ಒಳಗೊಂಡ ಒಂದು ಇನ್ನರ್ ಕ್ಯಾಬಿನೇಟ್ ರಚಿಸಬೇಕೆಂದು ಸಲಹೆ ನೀಡಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಎನ್.ಯು. ನಾಚಪ್ಪ ತಪ್ಪಸಿನಂತೆ ಈ ಕೊಡವ ಲ್ಯಾಂಡ್ ಆಂದೋಲನವನ್ನು ರೂಪಿಸಿದ್ದಾರೆ. ಯಾರೇ ವಿರೋಧಿಸಲಿ, ಅಡ್ಡಗಾಲು ಹಾಕಲಿ ತಾವು ನಂಬಿದ ಸಿದ್ಧಾಂತಕ್ಕೆ ಬದ್ದರಾಗಿದ್ದಾರೆ. ಅವರಿಗೆ ನನ್ನ ವೈಯಕ್ತಿಕ ಬೆಂಬಲವಲ್ಲದೆ, ತಾವು ಪ್ರತಿನಿಧಿಸುವ ಬೆಂಗಳೂರು ಕೊಡವ ಸಮಾಜದ ಶ್ರೀ ರಕ್ಷೆ ಇರಲಿದೆ ಎಂದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ ಮಾತನಾಡಿ, ಇಡೀ ನಾಲ್ನಾಡ್ ಕೊಡವ ಸಮಾಜದ ಬೆಂಬಲವನ್ನು ಸಿಎನ್‌ಸಿಗೆ ನೀಡಲಿದ್ದು, ನಾಚಪ್ಪ ಹಾಗೂ ಅವರ ಸಂಗಡಿಗರು ಇಡೀ ಭಾರತ ದೇಶಕ್ಕೆ ಕೊಡವರ ಧ್ವನಿಯನ್ನು ತಲುಪಿಸುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದರು.
ಖಾತ ವೈದ್ಯ ಡಾ. ಮಾತಂಡ ಅಯ್ಯಪ್ಪ ಮಾತನಾಡಿ, ಪ್ರತಿಯೊಬ್ಬ ಹೋರಾಟಗಾರರಿಗೂ ಎನ್.ಯು. ನಾಚಪ್ಪ ಸ್ಫೂರ್ತಿದಾಯಕರಾಗಿದ್ದು, ಇಲ್ಲಿ ಭಾಗವಹಿಸಿದವರ ಸಂಖ್ಯೆ ಶೇ.25 ರಷ್ಟು ಇದ್ದರೆ, ಇನ್ನು ಶೇ.75 ರಷ್ಟು ಸುಪ್ತ ಬೆಂಬಲಿಗರು ಮೌನವಾಗಿ ಸಿಎನ್‌ಸಿಗೆ ಬೆಂಬಲಿಸುತ್ತಿದ್ದಾರೆ. ಕೊಡವಲ್ಯಾಂಡ್ ಬೇಗ ಕಾರ್ಯಗತವಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವರನ್ನು ಆದಿಮಸಂಜಾತ ಏಕ-ಜನಾಂಗೀಯ ಅನಿಮಿಸ್ಟಿಕ್ ಗುಂಪಾಗಿ ಗುರುತಿಸಲು ಸಿಎನ್‌ಸಿ ಸಂವಿಧಾನಿಕ ಪ್ರಯಾಣವನ್ನು ಮುಂದುವರೆಸಿದೆ. ಕೊಡವ ಜನರ ಪೂರ್ವಜರ ತಾಯ್ನಾಡು, ಕೊಡವಲ್ಯಾಂಡ್, ಭೂ ಮಂಡಲದ ಸೃಷ್ಟಿಯಿಂದಲೂ ಅಸ್ತಿತ್ವದಲ್ಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಪ್ರತಿಪಾದಿಸುತ್ತದೆ. ಇದು ಸಮುದಾಯದ ಭೂಮಿಯೊಂದಿಗಿನ ಆಳವಾದ ಸಂಪರ್ಕವನ್ನು ಎತ್ತಿ ತೋರಿಸುತ್ತದೆ. ಕೊಡವ ಜನರು ಅನಾದಿ ಕಾಲದಿಂದಲೂ ಕೊಡವಲ್ಯಾಂಡ್‌ನ ಅವಿಭಾಜ್ಯ ಅಂಗವಾಗಿದ್ದಾರೆ, ಅವರ ಅಸ್ತಿತ್ವವು ಕಾವೇರಿ ನದಿಯಂತಹ ನೈಸರ್ಗಿಕ ಅಂಶಗಳೊAದಿಗೆ ಹೆಣೆದುಕೊಂಡಿದೆ, ಇದು ಭೂಮಿಯೊಂದಿಗಿನ ಅವರ ಪ್ರಾಚೀನ ಮತ್ತು ಶಾಶ್ವತ ಸಂಪರ್ಕವನ್ನು ಸಂಕೇತಿಸುತ್ತದೆ. ರಾಜ್ಯದ ಪ್ರಬಲ ಸಮುದಾಯವು ತಮ್ಮ ಜನಸಂಖ್ಯಾ ತೂಕವನ್ನು ಬಳಸಿಕೊಂಡು, ನಮ್ಮ ಪೂರ್ವಜರ ತಾಯ್ನಾಡು ಕೊಡವಲ್ಯಾಂಡ್ ಮೇಲೆ ಪ್ರಾಬಲ್ಯ ಪ್ರತಿಪಾದಿಸಲು ಪ್ರಯತ್ನಿಸುತ್ತಿದೆ ಮತ್ತು ಆದಿಮಸಂಜಾತ ಕೊಡವ ಜನರ ಮೇಲೆ ತಮ್ಮ ಜನಾಂಗೀಯ ಪ್ರಾಬಲ್ಯವನ್ನು ಹೇರುತ್ತಿದೆ ಎಂದು ಆರೋಪಿಸಿದರು.
ಕಲಿಯಂಡ ಮೀನಾ, ಮಂದಪAಡ ರಚನಾ, ಚೋಳಪಂಡ ಜ್ಯೋತಿ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಕಾಂಡೇರ ಸುರೇಶ್, ಉದಿಯಂಡ ಚಂಗಪ್ಪ, ಬೇಪಡಿಯಂಡ ದಿನು, ಜಮ್ಮಡ ಮೋಹನ್ ಮತ್ತಿತರರು ಇದ್ದರು.
ದುಡಿಕೊಟ್ಟ್ ಪಾಟ್‌ನೊಂದಿಗೆ ಮೆರವಣಿಗೆಯಲ್ಲಿ ತೆರಳಿದ ಎನ್.ಯು. ನಾಚಪ್ಪ ಹಾಗೂ ಅತಿಥಿಗಳು ಬಾಳೆ ಬೆಂಗುವ ಕಾರ್ಯಕ್ರಮ ನೆರವೇರಿಸಿದರು. ಗಾಳಿಯಲ್ಲಿ ಅತಿಥಿಗಳು ಗುಂಡು ಹಾರಿಸಿದರು. ವ್ಯಾಲಿಡ್ಯೂ ಅಸೋಸಿಯೇಷನ್ ವತಿಯಿಂದ ಕೊಡವ ನೃತ್ಯ ಕಾರ್ಯಕ್ರಮ ನಡೆಯಿತು. ದೇವಟ್‌ಪರಂಬ್ ಹತ್ಯಕಾಂಡ, ನಾಲ್ನನಾಡ್ ಅರಮನೆ, ಮಡಿಕೇರಿ ಕೋಟೆ, ಲಕ್ಕಡಿ ಕೋಟೆ, ಸಿದ್ದೇಶ್ವರ ಬೆಟ್ಟ, ಉಲುಗುಲಿ, ಮುಳುಸೋಗೆಯಲ್ಲಿ ಹುತಾತ್ಮರಾದ ಕೊಡವರು, ಎರಡು ಜಾಗತೀಕ ಯುದ್ಧಗಳಲ್ಲಿ ಮಡಿದ ಕೊಡವರು ಪಾಕಿಸ್ತಾನದ ನಾಲ್ಕು ಯುದ್ಧಗಳಲ್ಲಿ ಮಡಿದ ಕೊಡವರು, ಚೈನ ಯುದ್ಧದಲ್ಲಿ ಮಡಿದ ಕೊಡವರು, ಹೈದರಾಬಾದ್ ವಿಮೋಚನೆಯಲ್ಲಿ ಮಡಿದ ಕೊಡವರು, ಶಾಂತಿ ಪಾಲನಾ ಪಡೆಯಲ್ಲಿ ಮಡಿದ ಕೊಡವರಿಗೆ ಹಾಗೂ 2025 ನವೆಂಬರ್ 26ರ ತನಕ ಸ್ವರ್ಗಿಯರಾದ ಕೊಡವರಿಗೆ 1 ನಿಮಿಷ ಮೌನ ವಹಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸೂರ್ಯ-ಚಂದ್ರ, ಗುರುಕಾರೋಣ, ಭೂ ದೇವಿಯ ಹೆಸರಿನಲ್ಲಿ ನೆರೆದಿದ್ದವರೆಲ್ಲ ಕೊಡವಲ್ಯಾಂಡ್ ಹಕ್ಕೊತ್ತಾಯದ ಪರ ಹೋರಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.