ಸೋಮವಾರಪೇಟೆ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು. ದೀಪಕ್, ವಸಂತ್, ರೋಹಿತ್, ಮಂಜುನಾಥ್ ಇದ್ದರು. 
ಕೊಡಗು

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ
ಸೋಮವಾರಪೇಟೆ: ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಬೇಕು. ಅವರಿಗೆ ಆಶ್ರಯ ನೀಡಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಿಂದ ಮಡಿಕೇರಿ ರಸ್ತೆ, ಸಿ.ಕೆ.ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಜೇಸಿ ವೇದಿಕೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜೇಸಿ ವೇದಿಕೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್, ಅಕ್ರಮ ಬಾಂಗ್ಲಾ ವಲಸಿಗರು ಅಸ್ಸಾಮಿಗರ ಸೋಗಿನಲ್ಲಿ ನೆಲೆಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಕಾರ್ಮಿಕರ ಬದುಕು ಬೀದಿಗೆ ಬರುತ್ತಿದೆ. ಬೆಂಗಳೂರಿನಲ್ಲಿಯೇ ಬಾಂಗ್ಲಾ ದೇಶದವರಿಗೆ ಸರ್ಕಾರವೇ ಮನೆ ನೀಡಿದೆ. ಅಂದು ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದು ಪ್ರವೀಣ್ ಶೆಟ್ಟಿ ಬಣದ ಕರವೇ ಮಾತ್ರ ಎಂದರು.
ಕಾನೂನು ಸಲಹೆಗಾರ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ಅಕ್ರಮ ಬಾಂಗ್ಲಾ ವಲಸಿಗರು ಕೇವಲ ಕೊಡಗಿನ ಸಮಸ್ಯೆಯಲ್ಲ. ಇಡೀ ಭಾರತ ದೇಶದ ಸಮಗ್ರತೆಯ ಸಮಸ್ಯೆಯಾಗಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕೆಂದರು.
ಇತ್ತೀಚೆಗೆ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹಲವು ನುಸುಳುಕೋರರು ಸಿಕ್ಕಿಬೀಳುತ್ತಿದ್ದಾರೆ. ಮತದಾರರ ಪಟ್ಟಿಯೊಂದಿಗೆ ಆಧಾರ್ ಕಾರ್ಡ್‌ಗಳನ್ನೂ ಸಹ ಪರಿಶೀಲಿಸಬೇಕು. ರಾಜ್ಯಮಟ್ಟದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕು ಎಂದರು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ ಮಾತನಾಡಿ, ಪ್ರತಿಭಟನಾ ಸಭೆಗೆ ಅನುಮತಿ ಪಡೆಯಲು ತೆರಳಿದ ಸಂದರ್ಭದಲ್ಲಿ ಬಾಂಗ್ಲಾದವರು ಎಲ್ಲಿದ್ದಾರೆ? ಎಂದು ಪೊಲೀಸ್ ಅಧಿಕಾರಿಯೋರ್ವರು ಕರವೇ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ. ನಾವೇ ಬಾಂಗ್ಲಾದವರನ್ನು ಪತ್ತೆಹಚ್ಚುವುದಾರೆ ಪೊಲೀಸ್ ವ್ಯವಸ್ಥೆ ಯಾಕೆ ಬೇಕು? ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ಎಚ್.ಎಂ. ಸೋಮಪ್ಪ, ನಿರ್ವಾಣಪ್ಪ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ಕರವೇ ಯುವ ಘಟಕದ ಅಧ್ಯಕ್ಷ ವಸಂತ್ ಆಚಾರ್ಯ, ತಾಲೂಕು ಅಧ್ಯಕ್ಷ ರೋಹಿತ್ ಗೌಡ, ಸೋಮವಾರಪೇಟೆ ನಗರ ಘಟಕದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಮಿಕ ಘಟಕದ ಅಧ್ಯಕ್ಷ ದುರ್ಗೇಶ್ ಇತರರು ಇದ್ದರು.