ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮೋಹನ್ ದಾಸ್, ಶೇಖರ್ ಸಮಿತಿ ಸದಸ್ಯರು ಇದ್ದರು.
- ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ತಲುಪಿಸಿ
- ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮೋಹನ್ ದಾಸ್
ಮಡಿಕೇರಿ: ಫಲಾನುಭವಿಗಳ ಹಿತರಕ್ಷಣೆ ಅಧಿಕಾರಿಗಳ ಆದ್ಯ ಕರ್ತವ್ಯ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವಂತೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಜಿ.ಮೋಹನ್ ದಾಸ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಬುಧವಾರ ನಡೆದ ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನಲ್ಲಿ ಒಟ್ಟು ೩೮,೨೭೦ ಪಡಿತರ ಚೀಟಿ ಇದ್ದು, ೧,೨೦,೯೭೪ ಒಟ್ಟು ಫಲಾನುಭವಿಗಳಿದ್ದಾರೆ. ಅದರಲ್ಲಿ ೧೯೦೨ ಎಎವೈ ಪಡಿತರ ಚೀಟಿ ಇದ್ದು, ೭೫೬೯ ಎಎವೈ ಫಲಾನುಭವಿಗಳು ಇದ್ದಾರೆ. ೨೧,೬೯೭ ಪಿಹೆಚ್‌ಹೆಚ್ ಪಡಿತರ ಚೀಟಿ ಇದ್ದು, ೭೦,೧೯೬ ಫಲಾನುಭವಿಗಳು, ೧೪,೬೭೧ ಎನ್‌ಪಿಹೆಚ್‌ಹೆಚ್ ಪಡಿತರ ಚೀಟಿ ಇದ್ದು, ೪೩,೨೦೬ ಫಲಾನುಭವಿಗಳಿದ್ದಾರೆ ಎಂದು ಆಹಾರ ನಿರೀಕ್ಷಕಿ ವಿ.ಪಿ.ವೀಣಾ ಸಭೆಗೆ ಮಾಹಿತಿ ನೀಡಿದರು.
ಮಡಿಕೇರಿ ತಾಲೂಕಿನಲ್ಲಿರುವ ಅನರ್ಹ ಫಲಾನುಭವಿಗಳ ಸಂಖ್ಯೆ ೧೩೭೫ ಆಗಿದ್ದು, ವೈದ್ಯಕೀಯ ಸೌಲಭ್ಯಕ್ಕಾಗಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸುವುದನ್ನು ಮತ್ತು ಈಗಾಗಲೇ ಪ್ರಸ್ತುತ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ವಿಳಾಸ ಬದಲಾವಣೆ, ಹೆಸರು ಸೇರ್ಪಡೆ ಮಾಡುವ ಪ್ರಕ್ರೀಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದಾಯ ತೆರಿಗೆ ಪಾವತಿದಾರರೆಂದು ಅನರ್ಹಗೊಂಡಿದ್ದ ಬಿಪಿಎಲ್ ಪಡಿತರ ಫಲಾನುಭವಿಗಳಲ್ಲಿ ೧೬೮ ಫಲಾನುಭವಿಗಳು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಅದರಲ್ಲಿ ೧೫೧ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಯಿಂದ ಬಿಪಿಎಲ್ ಪಡಿತರ ಚೀಟಿಗೆ ಬದಲಾಯಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿ.ಪಿ.ವೀಣಾ ತಿಳಿಸಿದರು.
ಹೋಟೆಲ್‌ಗಳಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು, ಮಡಿಕೇರಿಯಲ್ಲಿ ಯಾವುದೇ ಗ್ಯಾಸ್ ಏಜೆನ್ಸಿಗಳಿಂದ ಗ್ಯಾಸ್ ಸರಬರಾಜು ಆಗಿರುವುದಿಲ್ಲ. ಮಡಿಕೇರಿ ತಾಲೂಕಿನ ಏಜೆನ್ಸಿಯವರಿಗೆ ಗೃಹಬಳಕೆಯ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಗ್ಯಾಸ್ ಏಜೆನ್ಸಿಯವರು ಕಾಳಸಂತೆಯಲ್ಲಿ ಮಾರದಂತೆ ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಸಿ.ಪಿ.ಸವಿತ ಮಾತನಾಡಿ, ಫೆಬ್ರವರಿಯಲ್ಲಿ ೨೯ನೇ ಕಂತು ನೀಡಲಾಗಿದ್ದು, ೩೦,೬೪೧ ಫಲಾನುಭವಿಗಳ ಖಾತೆಗೆ ೬,೧೨,೮೨,೦೦೦ ಮೊತ್ತ ಪಾವತಿಯಾಗುವ ಮೂಲಕ ಶೇಕಡವಾರು ಸಾಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಯ ಸದಸ್ಯರಾದ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಮಾತನಾಡಿ, ಅಶ್ವಮೇಧ ಬಸ್‌ಗಳಲ್ಲಿ ಚಾಲಕರೇ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಪ್ರಯಾಣಿಕರಿಗೆ ತೊಂದರೆ ಆಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಅಲ್ಲದೇ ಹಮ್ಮಿಯಾಲಕ್ಕೆ ಸೂಕ್ತವಾಗಿರುವ ಸರ್ಕಾರಿ ಬಸ್ ನೀಡುವಂತೆ ಮನವಿ ಮಾಡಿದ ಅವರು, ಈ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಬಸ್ ಕೆಟ್ಟುಹೋದಲ್ಲಿ ಪ್ರಯಾಣಿಕರಿಗೆ, ಚಾಲಕರಿಗೆ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ಪ್ರತಿನಿಧಿ ಕೆ.ಎಸ್.ದಯಾನಂದ ಮಾತನಾಡಿ, ಬೆಂಗಳೂರಿನಿಂದ ಮಂಗಳೂರಿಗೆ ರಾತ್ರಿ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಹೋಗಲು ಸೂಚಿಸಲಾಗಿದೆ. ಅಲ್ಲದೆ ರಾತ್ರಿ ವೇಳೆಯಲ್ಲಿ ಸಂಚಾರ ನಿಯಂತ್ರಕರನ್ನು ನಿಯೋಜಿಸಲು ಮೇಲಾಧಿಕಾರಿಯವರಲ್ಲಿ ಮನವಿ ಮಾಡಲಾಗಿದೆ. ಮರಗೋಡು ಗ್ರಾಮಕ್ಕೆ ಬೆಳಗ್ಗೆ ೭ ಗಂಟೆಗೆ ತೆರಳುವ ಬಸ್ ಮಡಿಕೇರಿ ಬಸ್ ನಿಲ್ದಾಣಕ್ಕೆ ಹೋಗಿ ಬರುವಂತೆ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್ ಮಾತನಾಡಿ, ಶಕ್ತಿ ಯೋಜನೆ ಬಂದಮೇಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಯುವನಿಧಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಗ್ಯಾರಂಟಿ ಯೋಜನಾ ಅನು?್ಠಾನ ತಾಲ್ಲೂಕು ಸಮಿತಿ ಅಧ್ಯಕ್ಷ ಎಂ.ಜಿ.ಮೋಹನ್ ದಾಸ್, ಹಣ ಪಾವತಿಯಲ್ಲಿ ವಿದ್ಯಾರ್ಥಿಗಳಿಗೆ ವಂಚನೆಯಾಗದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಯಾವುದೇ ಕಾಲೇಜುಗಳಲ್ಲಿ ಯುವನಿಧಿ ಯೋಜನೆಯ ಅರಿವು ಮತ್ತು ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವ ಮುನ್ನ ಕಡ್ಡಾಯವಾಗಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದು ಅವರನ್ನು ಅಧಿಕೃತವಾಗಿ ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ್ ಮಾತನಾಡಿ, ಫಲಾನುಭವಿಗಳ ಖಾತೆಗೆ ಈಗಾಗಲೇ ಹಣ ಜಮೆ ಮಾಡಲಾಗಿದ್ದು, ನೋಂದಣಿ ಪ್ರಕ್ರಿಯೆ ಮುಗಿಯುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುವುದು. ಈ ಸಂದರ್ಭ ಅಧಿಕೃತವಾಗಿ ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.
ಹೊಸದಾಗಿ ಫಲಾನುಭವಿಗಳ ನೋಂದಣಿಯಾದ ಮಾಹಿತಿಯನ್ನು ಸಿದ್ದಪಡಿಸಲಾಗಿದೆ. ಆದರೆ, ಯೋಜನೆಯಿಂದ ಡಿಲೀಟ್ ಆದ ಹಾಗೂ ಡಿಬಿಟಿ ಆಗದೇ ಬಾಕಿ ಇರುವ ಫಲಾನುಭವಿಗಳ ಮಾಹಿತಿಯು ಪ್ರಸ್ತುತ ಇಲಾಖಾ ತಂತ್ರಾಂಶದಲ್ಲಿ ಲಭ್ಯವಿರುವುದಿಲ್ಲ. ಈ ಮಾಹಿತಿಯನ್ನು ಒದಗಿಸುವಂತೆ ಮುಖ್ಯ ಕಚೇರಿಗೆ ಕೋರಲಾಗಿದೆ. ಮಾಹಿತಿ ಸ್ವೀಕೃತವಾದ ತಕ್ಷಣವೇ ಮುಂದಿನ ಸಭೆ ಗಮನಕ್ಕೆ ಮಂಡಿಸಲಾಗುವುದು ಎಂದು ತಿಳಿಸಿದರು.
ತಾ.ಪಂ.ಇಒ ಮಾತನಾಡಿ, ಶೀಘ್ರದಲ್ಲಿ ಪ್ರಚಾರ ನಡೆಸಿ ವಾರಕ್ಕೆ ಒಂದರಂತೆ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.
ಗೃಹಜ್ಯೋತಿಗೆ ಸಂಬಂಧಿಸಿದಂತೆ ಮಾತನಾಡಿದ ಸೆಸ್ಕ್ ಎಇ ಎಚ್.ಬಿ.ಚೈತ್ರ ಮಾತನಾಡಿ, ನಾಪೋಕ್ಲು ಭಾಗದಲ್ಲಿ ಗದ್ದೆಯ ಮಧ್ಯೆ ಹಾದುಹೋಗಿದ್ದ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಸ್ಥಳಾಂತರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೆ ವಿಭಾಗೀಯ ಮಟ್ಟದಲ್ಲಿ ನೌಕರರ ವರ್ಗಾವಣೆಗೆ ಅವಕಾಶವಿರುವುದಿಲ್ಲ. ಗ್ರಾಹಕರ ಕರೆಗಳನ್ನು ಸ್ವೀಕರಿಸಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳನ್ನು ನಿಗದಿತ ಕಾಲಮಿತಿಯೊಳಗೆ ಬಗೆಹರಿಸುವಂತೆ ಮೇಲಾಧಿಕಾರಿಯವರಿಂದ ನಿರ್ದೇಶನ ನೀಡಲಾಗಿದೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಇದ್ದ ಹಳೆ ಕಂಬಗಳನ್ನು ತೆರವುಗೊಳಿಸಲಾಗಿದೆ. ವಿಭಾಗೀಯ ಮಟ್ಟದಲ್ಲಿ ನೌಕರರ ವರ್ಗಾವಣೆಗೆ ಅವಕಾಶ ಇಲ್ಲದಿರುವುದರಿಂದ ಗ್ರಾಹಕರ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಲು ಮತ್ತು ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸೆಸ್ಕ್ ಎಇ ಎಚ್.ಬಿ.ಚೈತ್ರ, ಸದಸ್ಯರಾದ ಬಿ.ಎನ್.ರಂಗಪ್ಪ, ಎ.ಎಂ.ಸೋಮಯ್ಯ, ಕೆ.ಕೆ.ರಾಜೇಶ್ವರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.