ಬೇಟೆಯಾಡಿದ್ದ ಜಿಂಕೆ ಸಮೇತ ಆರೋಪಿಗಳಾದ ರೂಪೇಶ್ ಹಾಗೂ ಅರುಣ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.  
ಕೊಡಗು

ಜಿಂಕೆ, ಮೌಸ್ ಡೀರ್ ಬೇಟೆ

ರವಿಕುಮಾರ್ ಪಿ. ಕೆ
ಗೋಣಿಕೊಪ್ಪಲು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಮೌಸ್ ಡೀರ್(ಕೂರ) ಬೇಟೆಯಾಡಿದ ಕೊಡಗು ಜಿಲ್ಲೆಯ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮದ ರೂಪೇಶ್, ಕುಶಾಲನಗರದ ಗಂಧದಕೋಟೆಯ ಅರುಣ್ ಬಂಧಿತರು. ಚಿಕ್ಕತೊಳೂರು ಗ್ರಾಮದ ಜೀವಿತ್ ತಲೆಮರೆಸಿಕೊಂಡಿದ್ದಾನೆ. ಈ ಮೂವರು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಜಿಂಕೆ ಮತ್ತು ಕೂರವನ್ನು ಬೇಟೆಯಾಡಿದ್ದಾರೆ. ಬಳಿಕ ಕಾರಿನಲ್ಲಿ ಸಾಗಿಸುತ್ತಿದ್ದಾಗ ಹುಣಸೂರು ಆನೆ ಚೌಕೂರು ಬಳಿ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ರೂಪೇಶ್ ಮತ್ತು ಅರುಣ್ ಸಿಕ್ಕಿಬಿದ್ದಿದ್ದು, ಜೀವಿತ್ ಪರಾರಿಯಾಗಿದ್ದಾನೆ. 
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಒಂಟಿ ನಳಿಕೆ ಕೋವಿ, ಎರಡು ಕಾಡು ತೋಸು, ಹೆಡ್ ಟಾರ್ಚ್, ಮೂರು ಮೊಬೈಲ್ ಮತ್ತು ಮೃತ ಜಿಂಕೆ ಹಾಗೂ ಮೌಸ್ ಡೀರ್‌ನನ್ನು ವಶಕ್ಕೆ ಪಡೆಯಲಾಗಿದೆ.