ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ನಾಪೋಕ್ಲು ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ನಡೆದ ಜಂಟಿ ಸಭೆಯಲ್ಲಿ ಮುಂಡಂಡ ಸಿ.ನಾಣಯ್ಯ ಮಾತನಾಡಿದರು. ಸಿ.ಮಹೇಶ್ ನಾಚಯ್ಯ, ಪೊನ್ನಿರ ಗಗನ್, ಅಜಿತ್ ನಾಣಯ್ಯ ಇತರರಿದ್ದರು.
- ಅ.೨೪, ೨೫ ರಂದು ಮಕ್ಕಡ ನಮ್ಮೆ ಆಯೋಜಿಸಲು ತೀರ್ಮಾನ
ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ನಾಪೋಕ್ಲು ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ಮಕ್ಕಡ ನಮ್ಮೆಯನ್ನು ಆಯೋಜಿಸಲು, ಇತ್ತೀಚೆಗೆ ನಡೆದ ಉಭಯ ಸಂಸ್ಥೆಗಳ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಾಪೋಕ್ಲು ಕೊಡವ ಸಮಾಜದಲ್ಲಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹಾಗೂ ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷರಾದ ಮುಂಡಂಡ ಸಿ.ನಾಣಯ್ಯ ಮುಂದಾಳತ್ವದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು.
೨೦೨೬ರ ಅ.೨೪, ೨೫ ರಂದು ಆಯೋಜಿಸಲು ಉದ್ಧೇಶಿಸಿರುವ ಮಕ್ಕಡ ನಮ್ಮೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಕೊಡವ ಸಂಸ್ಕೃತಿ-ಭಾಷೆಯ ಪಾಲಕರ ಜನಾಂಗಗಳ ಒಗ್ಗೂಡುವಿಕೆಗಳೊಂದಿಗೆ ಎರಡು ದಿನಗಳ ಮಕ್ಕಡ ನಮ್ಮೆಯನ್ನು ನಡೆಸುವಂತೆ ತೀರ್ಮಾನಿಸಲಾಯಿತು.
ಎಲ್ಲಾ ಕೊಡವ ಸಮಾಜಗಳು, ಸಂಘ-ಸಂಸ್ಥೆಗಳು ಹಾಗೂ ಕೊಡವ ಭಾಷಿಕ ಸಮಾಜಗಳು, ಸಂಘ-ಸಂಸ್ಥೆಗಳಿಂದ ತಮ್ಮ ಪರಿಮಿತಿಯಲ್ಲಿ ಮಕ್ಕಳ ಸಾಂಸ್ಕೃತಿಕ ತಂಡವನ್ನು ಮಕ್ಕಡ ನಮ್ಮೆ’ಯಲ್ಲಿ ಭಾಗವಹಿಸಲು ಅನುವು ಮಾಡಿ ಕೊಡುವಂತೆ ತೀರ್ಮಾನಿಸಲಾಯಿತು.
ಮಕ್ಕಳನ್ನು ಒಳಗೊಂಡ ತಂಡದವರಿಂದ ಬಾಳೋಪಾಟ್, ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ತಾಲಿಪಾಟ್, ಪರಿಯಕಳಿ, ಸಮ್ಮಂದ ಅಡ್‌ಕುವ ಹಾಗೂ ವಿಶೇಷವಾಗಿ ಕೊಡವ ಹಾಡಿಗೆ ಭರತನಾಟ್ಯ, ಅಪ್ಪಚ್ಚಕವಿಯ ನಾಲ್ ನಾಟಕದ ಹಾಡುಗಳನ್ನು ಪ್ರದರ್ಶಿಸಲಾಗುತ್ತದೆ. ಮಕ್ಕಡ ನಮ್ಮೆಯ ಮೊದಲ ದಿನ ಸರ್ವ ಜನಾಂಗಗಳ ಸಮಾಜದ ಅಧ್ಯಕ್ಷರುಗಳನ್ನು ಅತಿಥಿಗಳಾಗಿ ಆಹ್ವಾನಿಸಲಾಗುವುದು. ಸಮಾರೋಪ ಸಮಾರಂಭಕ್ಕೆ ಜನಪ್ರತಿನಿಧಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಸೇರಿದಂತೆ ನಾಡಿಗೆ ಕೀರ್ತಿವೆತ್ತಿರುವ ಯುವಕ-ಯುವತಿಯರನ್ನು ಆಹ್ವಾನಿಸುವಂತೆ ತೀರ್ಮಾನಿಸಲಾಯಿತು.
ಮಕ್ಕಳ ಭವಿಷ್ಯವನ್ನು ಕೊಡವ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳೊಂದಿಗೆ ಉಜ್ವಲಗೊಳಿಸಲು ಅಕಾಡೆಮಿಯ ವತಿಯಿಂದ ನಡೆಸಲ್ಪಡುತ್ತಿರುವ ಈ ಪ್ರಪ್ರಥಮವಾದ ಮಕ್ಕಡ ನಮ್ಮೆ’ಯಲ್ಲಿ ಅತ್ಯುನ್ನತ ಪದವಿಯಲ್ಲಿರುವ ಯುವಕ-ಯುವತಿಯರಿಂದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಮಾತನ್ನಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ತಿಳಿಸಿದರು.
ಜಂಟಿ ಸಭೆಯಲ್ಲಿ ಅಕಾಡೆಮಿ ಸದಸ್ಯರಾದ ಪೊನ್ನಿರ ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪೋಕ್ಲು ಕೊಡವ ಸಮಾಜದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.