ನೀಟ್ ಯುಜಿ-೨೦೨೬ ಮರುಪರೀಕ್ಷೆ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ವಿಜಯ್, ಭಾಗ್ಯನಂದನ್, ಬಸವರಾಜು ಅವರಿಂದ ಮಾಹಿತಿ ಪಡೆದರು.
- ನೀಟ್ ಮರುಪರೀಕ್ಷೆ ಸುಗಮವಾಗಿ ನಡೆಸಲು ಡಿಸಿ ಸೂಚನೆ
ಮಡಿಕೇರಿ: ನೀಟ್(ಯುಜಿ) ಮರು ಪರೀಕ್ಷೆಯನ್ನು ಯಾವುದೇ ಗೊಂದಲಕ್ಕೆ ಅವಕಾಶ ಮಾಡದೆ ಸುಗಮ ಹಾಗೂ ಸುಲಲಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜೂ.೨೧ ರಂದು ನಡೆಯುವ ನೀಟ್ ಯುಜಿ-೨೦೨೬ ಮರುಪರೀಕ್ಷೆ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಪರೀಕ್ಷೆ ಬರೆಯುವ ಕೇಂದ್ರದಲ್ಲಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನೋಡಿಕೊಂಡು ಪರೀಕ್ಷೆ ಕೊಠಡಿಗೆ ತೆರಳುವಂತಾಗಲು ನೋಂದಣಿ ಸಂಖ್ಯೆ ಬೋರ್ಡ್‌ಗಳನ್ನು ಅಳವಡಿಸಬೇಕು. ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಪ್ರಾಧಿಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಪ್ರಶ್ನೆ ಪತ್ರಿಕೆ ತರಿಸಿಕೊಳ್ಳುವುದು, ಉತ್ತರ ಪತ್ರಿಕೆ ರವಾನಿಸುವುದು ಸೇರಿದಂತೆ ಪರೀಕ್ಷಾ ಪ್ರಾಧಿಕಾರದ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು. ಪರೀಕ್ಷಾ ಕೇಂದ್ರ ಸುತ್ತ ಅಗತ್ಯ ನಿಯಮ ಪಾಲಿಸಬೇಕು. ವಿದ್ಯುತ್ ಪೂರೈಕೆ, ಅಗತ್ಯ ವಾಹನ ಒದಗಿಸಬೇಕು. ಪೊಲೀಸರ ನಿಯೋಜನೆ ಮತ್ತಿತರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಗಮನಹರಿಸಬೇಕು ಎಂದರು.
ನೀಟ್ ಮರುಪರೀಕ್ಷೆ ಸಂಬಂಧ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಬಾರದು. ಯಾವುದೇ ರೀತಿಯ ಸಮಸ್ಯೆ ಹಾಗೂ ಗೊಂದಲಕ್ಕೆ ಅವಕಾಶ ಮಾಡದೆ ಮರು ಪರೀಕ್ಷೆಯನ್ನು ಸುಲಲಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಾಕೀತು ಮಾಡಿದರು.
ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿ ಹಾಗೂ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಮಾಹಿತಿ ನೀಡಿ, ನೀಟ್(ಯುಜಿ) ಮರುಪರೀಕ್ಷೆಯು ಜಿಲ್ಲಾ ಕೇಂದ್ರ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ೫೧೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ೨೨ ಕೊಠಡಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವಿವರಿಸಿದ ಅವರು, ನೀಟ್(ಯುಜಿ) ಮರು ಪರೀಕ್ಷೆ ಸಂಬಂಧ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದ್ದು, ನೀಟ್ ಮರುಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನೀಟ್ ನೋಡಲ್ ಅಧಿಕಾರಿ ಹಾಗೂ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಭಾಗ್ಯನಂದನ್ ಮಾತನಾಡಿ, ನೀಟ್ ಮರುಪರೀಕ್ಷೆ ಸಂಬಂಧ ಪರೀಕ್ಷಾ ಪ್ರಾಧಿಕಾರದ ನಿಯಮದಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ಇತರರಿದ್ದರು.
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ
ಮಡಿಕೇರಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೂ.೨೧ ರಂದು ೨೦೨೬ ರ ರೀ-ನೀಟ್(ಯುಜಿ) ಪರೀಕ್ಷೆ ನಡೆಯಲಿದ್ದು, ಸುಗಮವಾಗಿ ಪರೀಕ್ಷೆ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರದ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಭಂದಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ.
ಈ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿ ಮತ್ತು ಸೈಬರ್ ಸೆಂಟರ್‌ಗಳನ್ನು ಮುಚ್ಚಬೇಕು. ಈ ಆದೇಶವು ಪರೀಕ್ಷಾ ದಿನದಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫.೩೦ ಗಂಟೆಯವರೆಗೆ ಮಾತ್ರ ಚಾಲ್ತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.