ಕಾವೇರಿ ದಸರಾ ಸಮಿತಿಯ ೪೭ನೇ ವರ್ಷದ ಮಹಾಸಭೆಯಲ್ಲಿ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿದರು. ಕಂದಾದೇವಯ್ಯ, ಧ್ಯಾನ್ ಸುಬ್ಬಯ್ಯ, ಶಾಜಿ ಅಚ್ಚುತನ್ ಉಪಸ್ಥಿತರಿದ್ದರು.
- ದಸರಾ: ಶಾಸಕರ ನೇತೃತ್ವದಲ್ಲಿ ನಡೆಸಲು ಒಕ್ಕೊರಲಿನ ಒತ್ತಾಯ
ಗೋಣಿಕೊಪ್ಪ: ಇಲ್ಲಿನ ಶ್ರೀ ಕಾವೇರಿ ದಸರಾ ಸಮಿತಿ ಆಯೋಜಿಸುವ ೪೮ನೇ ದಸರಾ ಜನೋತ್ಸವದ ಸಮಿತಿ ಮತ್ತು ಹೊಸ ಕಾರ್ಯಕ್ರಮಗಳೊಂದಿಗೆ ಶಾಸಕರ ನೇತೃತ್ವದಲ್ಲಿ ನಡೆಯಲಿ ಎಂಬ ಒಕ್ಕರಲಿನ ಧ್ವನಿ ಕೇಳಿಬಂದಿತ್ತು.
ಗ್ರಾಮ ಪಂಚಾಯಿತಿ ಹಳೆ ಕಟ್ಟಡ ಸಭಾಂಗಣದಲ್ಲಿ ನಡೆದ ಶ್ರೀ ಕಾವೇರಿ ದಸರಾ ಸಮಿತಿಯ ೪೭ನೇ ವರ್ಷದ ಮಹಾಸಭೆಯಲ್ಲಿ ದಶಮಂಟಪಗಳ ಸಮಿತಿ ಸದಸ್ಯರುಗಳು ದಸರಾ ಕಾರ್ಯಕ್ರಮ ಯೋಜನೆಯ ಬದಲಾವಣೆಯ ಬಗ್ಗೆ ಧ್ವನಿಯೆತ್ತಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರೇ ದಸರಾ ಸಮಿತಿಯ ಅಧ್ಯಕ್ಷರಾಗಬೇಕು ಎಂದು ಕಾವೇರಿ ದಸರಾ ಸಮಿತಿಯು ಗ್ರಾಮ ಪಂಚಾಯಿತಿಗೆ ದಸರಾ ಆಚರಣೆಯ ಉಸ್ತುವಾರಿಯನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ, ಇದೀಗ ಪಂಚಾಯಿತಿ ಅಧಿಕಾರ ಇಲ್ಲದೆ ಇರುವುದರಿಂದ ಅಧ್ಯಕ್ಷರ ಆಯ್ಕೆಯನ್ನು ಶಾಸಕರ ನೇತೃತ್ವದ ಸಭೆಯಲ್ಲಿ ನಿರ್ಧರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಇದೇ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿ ಇರುವ ಕಾರಣ, ಆ ಸಮಿತಿಗೆ ಪ್ರಸ್ತುತ ವರ್ಷಕ್ಕೆ ದಸರಾ ನಡೆಸಲು ಅನುವು ಮಾಡಿಕೊಡಬೇಕೆಂಬ ವಿಚಾರ ಚರ್ಚೆಗೆ ಬಂತು. ಅಷ್ಟರಲ್ಲಿ ಅಧ್ಯಕ್ಷರು ಗ್ಯಾರಂಟಿ ಅನುಷ್ಠಾನ ಸಮಿತಿ ವಿಸರ್ಜಿಸಲಾಗಿದೆ ಎಂಬ ತಪ್ಪು ಮಾಹಿತಿಯನ್ನು ಸಭೆಗೆ ತಿಳಿಸಲು ಮುಂದಾದರು. ಇದಕ್ಕೆ ಗ್ಯಾರಂಟಿ ಸಮಿತಿ ಸದಸ್ಯರುಗಳು ವಿರೋಧ ವ್ಯಕ್ತಪಡಿಸಿ ಸಮಿತಿ ಕ್ರೀಯಶೀಲವಾಗಿರುವ ಬಗ್ಗೆ ಮಾಹಿತಿ ನೀಡಿದರು.
ದಶಮಂಟಪಗಳಿಗೆ ಕಳೆದ ಬಾರಿ ಒಪ್ಪಿಕೊಂಡಂತೆ ಹೆಚ್ಚುವರಿ ಹಣವನ್ನು ನೀಡಿಲ್ಲ. ಈ ಬಾರಿ ನೀಡದೇ ಇದ್ದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ದಸರಾ ಆಚರಣೆಗೆ ಬರುವ ಒಂದು ಕೋಟಿ ಹಣದಲ್ಲಿ ಹೆಚ್ಚುವರಿ ಮೊತ್ತವನ್ನು ದಶಮಂಟಪಗಳಿಗೆ ನೀಡಬೇಕು ಎಂಬ ಒತ್ತಾಯವು ಇತ್ತು. ದಸರಾ ಶೋಭಯತ್ರೆಯ ದಿನ ಮಂಟಪಗಳು ಕಲಾಕೃತಿಗಳ ಪ್ರದರ್ಶನ ಮಾಡದೆ ಬೆಳಕಿನ ವೈಭವ ನೀಡದೆ ಸಾರ್ವಜನಿಕರಿಗೆ ನಿರಾಸೆ ಉಂಟು ಮಾಡಿದ್ದಾರೆ. ಈ ರೀತಿ ಮರುಕಳಿಸಬಾರದು ಎಂದು ಸಭೆಯಲ್ಲಿ ನೆರೆದ ಪ್ರತಿಯೊಬ್ಬರ ಬೇಸರದ ಮನವಿಯಾಗಿತ್ತು.
ಇದೇ ಸಂದರ್ಭ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಗಣಪತಿ ೭೪,೯೯,೮೪೭ ರೂಪಾಯಿಗಳ ಖರ್ಚುಗಳ ಲೆಕ್ಕಪತ್ರವನ್ನು ಮಂಡಿಸಿದರು. ಲೆಕ್ಕಪತ್ರದಲ್ಲಿ ಊಟದ ಬಗ್ಗೆ ೮ ಸಾವಿರ, ಮತ್ತು ೩,೭೦,೪೦೦ ಹಾಗೂ ೧,೨೭,೩೭ ರೂಪಾಯಿಗಳ ಬಗ್ಗೆ ಚರ್ಚೆ ನಡೆಯಿತು, ಶಕೀಲ್ ಅಹ್ಮದ್ ಅವರಿಗೆ ೧ ಲಕ್ಷದ ೯೫ ಸಾವಿರ ರೂಪಾಯಿಗಳನ್ನು ಮತ್ತು ರಮೇಶ್ ಅವರಿಗೆ ೫೦೦೦ ಹಾಗೂ ರೂ.೪೦,೦೦೦ಗಳನ್ನು ಎರಡು ಬಾರಿ ನೀಡಿದ ಹಣದ ಮೊತ್ತದ ಬಗ್ಗೆ ಪ್ರಶ್ನೆಗಳು ಕೇಳಿ ಬಂದವು.
ಪೊಲೀಸರು ನೀಡಿದ ಕಾರ್ಯಕ್ರಮಗಳಿಗೆ ಮತ್ತು ಇತರ ಕೆಲವು ಕಲಾವಿದರಿಗೆ ನೀಡಿದ ಕಾರ್ಯಕ್ರಮಗಳಿಗೆ ಹಣ ನೀಡಿಲ್ಲ ಎಂಬ ಆರೋಪಗಳಿದೆ ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು. ಇದಕ್ಕೆ ಅಧ್ಯಕ್ಷರು ಸಮರ್ಥಿಸಿಕೊಂಡು, ತಪ್ಪಾಗಿದೆ ಮುಂದಿನ ದಿನಗಳಲ್ಲಿ ಅದನ್ನ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದರು ಲೆಕ್ಕಪತ್ರವನ್ನು ಕೋಶಾಧಿಕಾರಿಗಳು ಮಂಡಿಸಿದೆ, ಅಧ್ಯಕ್ಷರೇ ಲೆಕ್ಕಪತ್ರ ವಿವರಣೆ ನೀಡಲು ಮುಂದಾಗಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೋಶಾಧಿಕಾರಿಯ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬ ಆರೋಪಗಳು ವ್ಯಕ್ತವಾದವು.
ಪಿ.ಕೆ.ಪ್ರವೀಣ್, ರಾಜೇಶ್.ಕೆ, ಸಪ್ತೇಶ್, ಕೆ.ಜಿ.ದತ್ತಾತ್ರಿ, ಕೇಶವ ಕಾಮತ್, ನಾರಾಯಣಸ್ವಾಮಿ ನಾಯ್ಡು, ಹೆಚ್‌ಬಿ ಮುರುಗಮ್ ಕಾಡ್ಯಮಾಡ ಚೇತನ್, ಪ್ರಭಾಕರ್ ನೆಲ್ಲಿತ್ತಾಯ, ನವೀನ್, ಅರವಿಂದ್ ಕುಟ್ಟಪ್ಪ ಸೇರಿದಂತೆ ಹಲವರು ದಸರಾದ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕಂದಾದೇವಯ್ಯ, ಕೋಶಾಧಿಕಾರಿ ಧ್ಯಾನ್ ಸುಬ್ಬಯ್ಯ, ಶಾಜಿ ಅಚ್ಚುತನ್, ಶಿವಾಜಿ, ದಿಲನ್ ಚಂಗಪ್ಪ, ಕೇಶವ ಕಾಮತ್, ಚಂದನ್ ಕಾಮತ್, ಮಂಜುಳಾ, ಕುಸುಮ ಜೋಯಪ್ಪ, ಧನ್ಯ ಸೇರಿದಂತೆ ಹಲವರು ಇದ್ದರು.