ಕೊಡಗು ದಫ್ ಕಲಾ ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಿ.ಎಚ್. ರಫೀಕ್ , ಮಜೀದ್ , ಶಫೀಕ್ , ಮೈದು ಹಾಜಿ ಇದ್ದರು.
ವಿರಾಜಪೇಟೆ : ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ಅ. 18 ರಂದು ಚೋಕಂಡಳ್ಳಿ ಆಯೋಜಿಸಲು ಸಮಿತಿಯು ತೀರ್ಮಾನಿಸಿದೆ ಎಂದು ಕೊಡಗು ದಫ್ ಕಲಾ ಒಕ್ಕೂಟದ ಕಾರ್ಯದರ್ಶಿ ಸಿ.ಎಚ್. ರಫೀಕ್ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಯ ದಫ್ ಕಲಾ ತಂಡಗಳಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕೊಡಗು ದಫ್ ಕಲಾ ಒಕ್ಕೂಟವು ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಸಿಕೊಂಡು ಬರುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ ಸುಮಾರು 30 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ 15 ತಂಡಗಳು ನೋಂದಣಿ ಮಾಡಿಕೊಂಡಿದ್ದು ಜಿಲ್ಲಾದ್ಯಂತ ಇರುವ ದಫ್ ಕಲಾ ತಂಡಗಳು ಸೆ. 25 ರ ಒಳಗಾಗಿ ನೋಂದಣಿ ಮಾಡಿಕೊಂಡು ಸ್ವರ್ಧೆಯ ಯಶಸ್ಸಿಗೆ ಸಹಕರಿಸಬೇಕೆಂದರು.
ಕೊಡಗು ದಫ್ ಕಲಾ ಒಕ್ಕೂಟದ ಅಧ್ಯಕ್ಷ ಮಜೀದ್ ಚೋಕಂಡಳ್ಳಿ ಮಾತನಾಡಿ, ಜಿಲ್ಲಾದ್ಯಂತ ಇರುವ ಎಲ್ಲ ಮದರಸಗಳಿಗೆ ಹಾಗೂ ದಫ್ ಕಲಾ ತಂಡಗಳಿಗೆ ಈ ಸ್ಪರ್ಧೆಗೆ ಸ್ವಾಗತ ಬಯಸುತ್ತೇನೆ. ಒಕ್ಕೂಟದ ವತಿಯಿಂದ ಆಯೋಜಿಸುತ್ತಿರುವ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯು ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಜುಬೇದ್ ತೋಟಿಕಲ್ ಅವರ ಕಥಾ ಪ್ರಸಂಗ ಜರುಗಲಿದೆ. ಕಾರ್ಯಕ್ರಮದಲ್ಲಿ ಪಂಡಿತರು, ಸಾಮಾಜಿಕ ಮತ್ತು ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದರು.
ದಫ್ ಕಲಾ ಒಕ್ಕೂಟದ ಉಪಾಧ್ಯಕ್ಷ ಶಫೀಕ್ ಮಾತನಾಡಿದರು. ಕೊಡಗು ಜಿಲ್ಲಾ ದಫ್ ಒಕ್ಕೂಟದ ಸಹ ಕಾರ್ಯದರ್ಶಿ ಮೈದು ಹಾಜಿ ಗುಂಡಿಕೆರೆ ಹಾಜರಿದ್ದರು.