ಹುಲಿ ಹಾವಳಿ ತಡೆಯಲು ವಿಫಲವಾದ ಸರ್ಕಾರದ ವಿರುದ್ಧ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಜಂಕ್ಷನ್‌ನಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ಬಲ್ಯಮೀದೇರಿರ ಪ್ರಕಾಶ್, ಚೆಟ್ಟಂಗಡ ಕಂಬ ಕಾರ್ಯಪ್ಪ, ಇಟ್ಟಿರ ಪೊನ್ನಣ್ಣ, ಚಂಗುಲಂಡ ಸೂರಜ್ ಇತರರು ಇದ್ದರು.
- ಬೆಳ್ಳೂರಿನಲ್ಲಿ ರೈತರ ಪ್ರತಿಭಟನೆ
ಸಿದ್ದಾಪುರ: ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ರೈತ ಇಟ್ಟಿರ ಪೊನ್ನಣ್ಣ ಅವರ ಹಸುವನ್ನು ಶುಕ್ರವಾರ ಹುಲಿ ದಾಳಿ ಮಾಡಿ ಬಲಿ ಪಡೆದಿದೆ. ಇದೇ ರೈತನ 10ನೇ ಹಸು ಹುಲಿ ದಾಳಿಗೆ ಬಲಿಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಕೆಲವು ವರ್ಷಗಳಿಂದ ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರ ಪಶುಸಂಪತ್ತು ಅಪಾಯಕ್ಕೊಳಗಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಬೆಳ್ಳೂರು ಜಂಕ್ಷನ್‌ನಲ್ಲಿ ನೂರಾರು ರೈತರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬೆಳೆಗಾರ ಚೆಟ್ಟಂಗಡ ಕಂಬ ಕಾರ್ಯಪ್ಪ, ಬೆಳ್ಳೂರು ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಬಲಿ ಪಡೆದಿದೆ. ಅರಣ್ಯ ಇಲಾಖೆ ಬೇಜವಾಬ್ದಾರಿತನ ತೋರಿದ್ದು, ಹುಲಿಯನ್ನು ಸೆರೆ ಹಿಡಿಯುವ ಯಾವುದೇ ಗಂಭೀರ ಕಾರ್ಯಾಚರಣೆ ಕೈಗೊಂಡಿಲ್ಲ. ಒಬ್ಬ ರೈತನ ಹತ್ತು ಹಸುಗಳು ಬಲಿಯಾಗಿರುವುದು ಇಲಾಖೆಯ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದರು.
ಪ್ರತಿಭಟನೆ ವೇಳೆ ಪೊಲೀಸ್ ಇಲಾಖೆಯನ್ನು ಕರೆಸಿ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇದನ್ನು ತೀವ್ರವಾಗಿ ಖಂಡಿಸಿದರು.
ಬಲ್ಯಮೀದೇರಿರ ಪ್ರಕಾಶ್ ಮಾತನಾಡಿ, ಅರಣ್ಯ ಇಲಾಖೆ ಕಾರ್ಯಾಚರಣೆಯ ಹೆಸರಿನಲ್ಲಿ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ. ವನ್ಯಜೀವಿಗಳ ಹಾವಳಿಯಿಂದ ಸಾಕುಪ್ರಾಣಿಗಳನ್ನು ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಗೆ ಅರಣ್ಯ ಇಲಾಖೆಯ ನಿರ್ಲಕ್ಷೃವೇ ಕಾರಣ ಎಂದು ಅರಣ್ಯ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದುವರೆಗೆ ಹುಲಿ ದಾಳಿಗೆ ಬಲಿಯಾದ ಕೆಲವೇ ಜಾನುವಾರುಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಹಣದ ಪರಿಹಾರ ನೀಡುವುದಕ್ಕಿಂತ ಒಂದು ಜಾನುವಾರು ಬಲಿಯಾದರೆ ಅದಕ್ಕೆ ಬದಲಾಗಿ ಮತ್ತೊಂದು ಜಾನುವಾರನ್ನೇ ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮೃತ ಹಸುವಿನ ಕಳೇಬರವನ್ನು ಅರಣ್ಯ ಇಲಾಖೆಯ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಸ್ಥಳಕ್ಕೆ ಎಸಿಎಫ್ ಮಂಜುನಾಥ್, ಆರ್‌ಎಫ್‌ಒ ಗಂಗಾಧರ್, ಡಿಆರ್‌ಎಫ್‌ಒ ಸಂದೇಶ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.
ಪ್ರತಿಭಟನೆಯಲ್ಲಿ ಬಲ್ಯಮೀದೇರಿರ ಪ್ರಕಾಶ್, ಚೆಟ್ಟಂಗಡ ಕಂಬ ಕಾರ್ಯಪ್ಪ, ಇಟ್ಟಿರ ಪೊನ್ನಣ್ಣ, ಮಲ್ಲಂಗಡ ಧಿವಿನ್, ಚಂಗುಲಂಡ ಸೂರಜ್, ನೂರೆರ ಬನ್ನಿ, ಅಜ್ಜಮಾಡ ಚಿಮ್ಮ, ಬಾಳೆರ ಸಚಿನ್, ಬಾಚರಣಿಯಂಡ ರಂಜಿ, ಮಾಣಿರ ವಿಜಯ್, ಬಾಳೆರ ರಮೇಶ್, ಮಲ್ಲೇಂಗಡ ಶರಣು, ಕೈಬುಲೀರ ಬೆಳ್ಳಿಯಪ್ಪ, ನೂರರ ಜೀವನ್, ನೂರೆರ ಅರುಣ್, ಕೇಚಮಾಡ ವಿಷು ತಮ್ಮಯ್ಯ, ಚೀಯಣಮಾಡ ಸಂಜು, ರೈತ ಮುಖಂಡರಾದ ಬಲ್ಯಮೀದೇರಿರ ಕವಿತಾ, ಚೊಟ್ಟೆಕಾಳಪಂಡ ಮನು ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.