ಸೋಮವಾರಪೇಟೆ ತಾಲೂಕಿನ ಕುಂದಳ್ಳಿ ಗ್ರಾಮದಲ್ಲಿ ಕೃಷಿ ಭೂಮಿಗೆ ನುಗ್ಗಿರುವ ಕಾಡಾನೆಗಳು ಹಾನಿ ಮಾಡಿರುವುದು.
- ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿ
ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸಮೀಪದ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ತುಳಿದು ಹಾನಿ ಮಾಡಿತ್ತು. ಘಟನೆ ಬಳಿಕ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದರು.
ಆದರೆ, ಈಗ ಅದೇ ಕಾಡಾನೆಗಳ ಹಿಂಡು ಕುಂದಳ್ಳಿ ಹಾಗೂ ನಗರಳ್ಳಿ ಭಾಗದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಮರಿಯಾನೆ ಸೇರಿ ಒಟ್ಟು ಏಳು ಕಾಡಾನೆಗಳು ಬೀಡುಬಿಟ್ಟಿರುವ ಮಾಹಿತಿ ಲಭ್ಯವಾಗಿದೆ. ಇದರ ಜತೆಗೆ ಇದೇ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಸಂಚರಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಕುಂದಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಡಾನೆಗಳು ಲೋಕೇಶ್, ಜೋಯಪ್ಪ ಹಾಗೂ ಶರತ್ ಅವರಿಗೆ ಸೇರಿದ ಕಾಫಿ ತೋಟಗಳಿಗೆ ನುಗ್ಗಿ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಇದರಿಂದ ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಒಂದು ಕಡೆ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ನಡೆಸುತ್ತಿದ್ದರೂ ಮತ್ತೊಂದು ಕಡೆ ಅದೇ ಆನೆಗಳು ಬೇರೆ ಪ್ರದೇಶಗಳಲ್ಲಿ ಮತ್ತೆ ಹಾವಳಿ ಮುಂದುವರಿಸುತ್ತಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಶ್ವತ ಪರಿಹಾರಕ್ಕಾಗಿ ಕಾಡಾನೆಗಳನ್ನು ಬಿಸಿಲೆ ಅರಣ್ಯ ಪ್ರದೇಶದತ್ತ ಸ್ಥಳಾಂತರಿಸಿ, ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.