ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಮರೂರು ಬಳಿ ತಾಲೂಕು ಆಡಳಿತದಿಂದ ಬೀದಿನಾಯಿಗಳ ಆರೈಕೆ ಕೇಂದ್ರ ನಿರ್ಮಾಣ ಕಾಮಗಾರಿಯನ್ನು ಸ್ಥಳೀಯರು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಹೆಬ್ಬಾಲೆ ಗ್ರಾಪಂ ಸದಸ್ಯೆ ಪುಟ್ಟಲಕ್ಷ್ಮೀ, ಮೋಹನ್, ಮೂರ್ತಿ, ಚೆಲುವರಾಜು ಮತ್ತಿತರರು ಇದ್ದರು. 
ಕೊಡಗು

ಬೀದಿನಾಯಿಗಳ ಆರೈಕೆ ಕೇಂದ್ರ ಕಾಮಗಾರಿಗೆ ತಡೆ

ಪ್ರಮುಖ ಮುಖ್ಯಾಂಶಗಳು

  • ಬೀದಿನಾಯಿಗಳನ್ನು ಹಿಡಿದು ಆರೈಕೆ
ಕುಶಾಲನಗರ: ಪುರಸಭೆ ವ್ಯಾಪ್ತಿಯಲ್ಲಿ ಕಂಡು ಬರುವ ಬೀದಿನಾಯಿಗಳನ್ನು ಹಿಡಿದು ಆರೈಕೆ ಮಾಡುವ ನಿಟ್ಟಿನಲ್ಲಿ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಮರೂರು ಬಳಿ ಸರ್ವೆ ನಂ.1/1 ರಲ್ಲಿ ಒಂದು ಎಕರೆ ಸರ್ಕಾರಿ ಜಾಗವನ್ನು ಮೀಸಲಿಟ್ಟು, ಅಲ್ಲಿ ತಾಲೂಕು ಆಡಳಿತದಿಂದ ನಡೆಸಲು ಮುಂದಾದ ಕಾಮಗಾರಿಯನ್ನು ಸ್ಥಳೀಯರು ಸ್ಥಗಿತಗೊಳಿಸಿದ ಘಟನೆ ಭಾನುವಾರ ನಡೆದಿದೆ.
ಬೀದಿನಾಯಿಗಳ ಆರೈಕೆ ಕೇಂದ್ರ ಮಾಡಿದಲ್ಲಿ, ಮೊದಲೇ ಕಾಡಾನೆಗಳ ಹಾವಳಿ ಇರುವ ಮರೂರು, ಹಕ್ಕೆ, ಕಣಿವೆ ವ್ಯಾಪ್ತಿಯ ಗ್ರಾಮಸ್ಥರಿಗೆ ತೀವ್ರ ಅನನುಕೂಲವಾಗಲಿದೆ. ಮಾತ್ರವಲ್ಲ, ಇಲ್ಲಿ ಬೆಟ್ಟ ಅಗೆದು ರಸ್ತೆ ಮಾಡಲು ಮುಂದಾದರೆ ನೂರಾರು ಗಿಡ ಮರಗಳು ನಾಶವಾಗಲಿದ್ದು, ಈ ಬಗ್ಗೆ ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ, ಇಲ್ಲಿ ಯಾವ ಕಾರಣಕ್ಕೂ ಬೀದಿ ನಾಯಿಗಳ ಆರೈಕೆ ಕೇಂದ್ರ ಮಾಡದಂತೆ ಲಿಖಿತವಾಗಿ ಒತ್ತಾಯಿಸಲಾಗಿದೆ.
ಆದಾಗ್ಯೂ ತಾಲೂಕು ಆಡಳಿತ ಹಠಕ್ಕೆ ಬಿದ್ದಂತೆ ತರಾತುರಿಯಲ್ಲಿ ಕಾಮಗಾರಿ ನಡೆಸಲು ಮುಂದಾಗಿರುವ ಉದ್ದೇಶವಾದರೂ ಏನು ಎಂದು ಪಂಚಾಯಿತಿ ಉಪಾಧ್ಯಕ್ಷೆ ಲತಾ, ಸದಸ್ಯೆ ಪುಟ್ಟಲಕ್ಷ್ಮೀ ಹಾಗೂ ಸ್ಥಳೀಯ ಪ್ರಮುಖರಾದ ಮೋಹನ್, ವೈರಮುಡಿ, ಸುರೇಶ್, ಮಹದೇವ, ಚೆಲುವರಾಜು ಮೊದಲಾದವರು ಪ್ರಶ್ನಿಸಿದ್ದಾರೆ.